ADVERTISEMENT

ವಿಶ್ಲೇಷಣೆ | ವೈರಸ್ ಸೃಷ್ಟಿಸಿದ ಮಾರುಕಟ್ಟೆ

ಈಗ ಬಗೆಬಗೆಯ ವೈರಸ್‌ ಸಂಗ್ರಹವು ಬೃಹತ್‌ ಉದ್ಯಮವಾಗಿ ಬೆಳೆಯಲಾರಂಭಿಸಿದೆ!

ಟಿ.ಆರ್.ಅನಂತರಾಮು
Published 1 ಜುಲೈ 2020, 19:30 IST
Last Updated 1 ಜುಲೈ 2020, 19:30 IST
   

ಜಗತ್ತಿನಲ್ಲಿ ಯಾವುದು ಮಾರುಕಟ್ಟೆಯ ಸರಕಾಗ ಬಹುದು ಎಂಬುದನ್ನು ಪರಿಣತ ಅರ್ಥಶಾಸ್ತ್ರಜ್ಞರೂ ಊಹಿಸುವುದು ಕಷ್ಟ. ಸದ್ಯದಲ್ಲಿ ಕೊರೊನಾ ವೈರಸ್‍ನಿಂದ ಜಗತ್ತಿನ ಆರ್ಥಿಕ ರಂಗವೇ ಬುಡಮೇಲಾಗಿರುವುದು ನಿಜ. ಇಂಥ ವಿಷಮ ಸ್ಥಿತಿಯಲ್ಲಿ ವೈರಸ್‍ಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಬಂದಿದೆ ಎಂದರೆ ಬಹುಶಃ ಇದಕ್ಕಿಂತ ವೈರುಧ್ಯ ಬೇರೆ ಇರಲಾರದು. ಯುರೋಪಿಯನ್ ಒಕ್ಕೂಟದ ಅಡಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ‘ಯುರೋಪಿಯನ್ ವೈರಸ್ ಆರ್ಕೈವ್’ ಎಂಬ ಖಾಸಗಿ ಸಂಸ್ಥೆ ಬಹು ದೊಡ್ಡ ಸುದ್ದಿ ಮಾಡಿದೆ.

ಕೊರೊನಾ ವೈರಸ್ ಜಾಗತಿಕ ಮಟ್ಟದ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸುತ್ತಲೇ ವೈರಸ್ ಸಂಗ್ರಹವನ್ನು ಇದು ಚುರುಕುಗೊಳಿಸಿ, ಜಗತ್ತಿನ ಅನೇಕ ಭಾಗಗಳಲ್ಲಿ ಕೋವಿಡ್-19 ಪೀಡಿತರಿಂದ ವೈರಸ್ ಮಾದರಿಯನ್ನು ತರಿಸಿಕೊಳ್ಳುವ ದೊಡ್ಡ ಯೋಜನೆ ಹಾಕಿತು. ‘ನಾವೇ ಮೊದಲು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದು’ ಎಂದು ಸಾರುವ ಟಿ.ವಿ. ಚಾನೆಲ್‍ಗಳಂತೆ ಈ ಸಂಸ್ಥೆ ಕೂಡ ‘ಕೊರೊನಾ ವೈರಸ್ಸನ್ನು ಸಂಗ್ರಹಿಸಿದವರಲ್ಲಿ ನಾವೇ ಮೊದಲು’ ಎಂದು ಘೋಷಿಸಿದಾಗ, ಅದರಲ್ಲಿ ವಾಣಿಜ್ಯ ವಾಸನೆಯನ್ನು ಯಾರಾದರೂ ಸುಲಭವಾಗಿ ಗ್ರಹಿಸಬಹುದು.

‘ನಮ್ಮ ಸಂಗ್ರಹದಲ್ಲಿ ಎಬೊಲಾ, ಜಿಕಾ ಹಾಗೂ ಈಗಿನ ಕೊರೊನಾ ವೈರಸ್ ಮಾದರಿ ಕೂಡ ಸೇರಿದೆ’ ಎಂಬುದನ್ನು ಅದು ರಾಚುವಂತೆ ಜಾಹೀರು ಮಾಡಿದೆ. ಮೊದಲು ಯುರೋಪಿಗಷ್ಟೇ ಸೀಮಿತವಾಗಿದ್ದ ಈ ವಾಣಿಜ್ಯೋದ್ಯಮಕ್ಕೆ ಚೀನಾವೂ ಬಹುಬೇಗನೆ ಸಹಭಾಗಿಯಾಯಿತು. ವುಹಾನ್‍ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಮಾದರಿಯನ್ನು ಒಡನೆಯೇ ಸಂಗ್ರಹಿಸಿ ಈ ಒಕ್ಕೂಟಕ್ಕೆ ಸೇರಿಸಿತು.

ADVERTISEMENT

ಸದ್ಯದಲ್ಲಿ ಈ ಸಂಸ್ಥೆ ಕೊರೊನಾ ವೈರಸ್ ಸಂಗ್ರಹವನ್ನು ‘ವಿಶೇಷ’ ಎಂಬ ಪಟ್ಟಿಯಲ್ಲಿ ಸೇರಿಸಿದೆ. ಪ್ರಮುಖವಾಗಿ ಆರೋಗ್ಯ ಸಂಸ್ಥೆಗಳು ಮತ್ತು ಅಕಾಡೆಮಿಕ್ ಸಂಸ್ಥೆಗಳು ಇದರ ಗಿರಾಕಿಗಳು. ಈ ಸಂಸ್ಥೆ ದೊಡ್ಡದೊಂದು ದರಪಟ್ಟಿ ಯನ್ನೂ ಪ್ರಕಟಿಸಿದೆ. ಸ್ಲೋವಾಕಿಯ, ಫ್ರಾನ್ಸ್‌ನಿಂದ ಸಂಗ್ರಹಿಸಿದ ಕೊರೊನಾ ಮಾದರಿಗೆ 2,000 ಯೂರೊ (ಅಂದಾಜು ₹1,69,260) ಬೆಲೆ, ಫ್ರೆಂಚ್ ಪಾಲಿನೇಷ್ಯದಿಂದ ಸಂಗ್ರಹಿಸಿ ತಂದ ಜಿಕಾ ವೈರಸ್ ಬೆಲೆ 500 ಯೂರೊ (₹42,315). ಬಾವಲಿಯಿಂದ ಒಂಟೆಗೆ, ಒಂಟೆಯಿಂದ ಮನುಷ್ಯನಿಗೆ ಹಾರಿದ ಕೊರೊನಾ ವೈರಸ್ ಬೆಲೆ 10,000 ಯೂರೊ (₹8,46,300). ಎಲ್ಲಿ ಸಂಗ್ರಹಿಸಿದ್ದು, ಹೇಗೆ ಸಂಗ್ರಹಿಸಿದ್ದು, ಹೇಗೆ ಜೋಪಾನ ಮಾಡಲಾಗಿದೆ, ವೈರಸ್‍ನ ವರ್ಗೀಕರಣವೇನು ಎಂಬಂಥ ಎಲ್ಲ ಮಾಹಿತಿಯೂ ಅದನ್ನು ಕೊಂಡವರಿಗೆ ಲಭ್ಯವಾಗು ತ್ತದೆ ಎಂದು ಈ ಸಂಸ್ಥೆ ಸಾರಿದೆ. ಕೋವಿಡ್-19 ರೋಗವನ್ನು ತಂದಿರುವ ಕೊರೊನಾ ವೈರಸ್ ಮಾದರಿ ಸಂಗ್ರಹಕ್ಕೆ ಇದೇ ಜುಲೈ 31 ‘ಡೆಡ್‌ಲೈನ್’ ನಿಗದಿಪಡಿಸಿದೆ. ಏಕೆಂದರೆ ಈ ವೇಳೆಯಲ್ಲಿ ಕೋವಿಡ್-19 ಜಗದ್ವ್ಯಾಪಿ ಹರಡಿ ಪರಾಕಾಷ್ಠೆ ತಲುಪಿರುತ್ತದೆ, ಮಾದರಿ ಸಂಗ್ರಹಕ್ಕೆ ಇದು ಸಕಾಲ ಎಂಬುದು ಇದರ ಲೆಕ್ಕಾಚಾರ. ಒಟ್ಟು 17 ದೇಶಗಳು ಯುರೋಪಿಯನ್ ವೈರಸ್ ಆರ್ಕೈವ್‍ಗೆ ಪಾಲುದಾರರು.

‘ಅಮೆರಿಕನ್ ಟೈಪ್ ಕಲ್ಚರ್ ಕಲೆಕ್ಷನ್’ ಎಂಬ ಖಾಸಗಿ ಸಂಗ್ರಹ ಸಂಸ್ಥೆ ‘ನಮ್ಮ ಸಂಗ್ರಹದಲ್ಲಿ ಮನುಷ್ಯ, ಹಕ್ಕಿ ಮತ್ತು ಬೇರೆ ಪ್ರಾಣಿಗಳಿಂದ ಸಂಗ್ರಹಿಸಿದ 3,000 ಬಗೆಯ ವೈರಸ್‍ಗಳಿವೆ. 18,000 ಬ್ಯಾಕ್ಟೀರಿಯ ಪ್ರಭೇದಗಳು ಇವೆ. ಬೇಕಾದರೆ ಕ್ಯಾಟಲಾಗ್ ನೋಡಿ’ ಎಂದು ವ್ಯಾಪಾರಿ ಮನೋಭಾವದಿಂದಲೇ ಪ್ರಚಾರ ಮಾಡಿದೆ. ಇದನ್ನು ಆನ್‍ಲೈನ್‍ನಲ್ಲೂ ಪಡೆಯಬಹುದು, ಮೊದಲು ಹಣವನ್ನು ಠೇವಣಿ ಇಡಬೇಕೆಂಬ ಷರತ್ತನ್ನೂ ಇದು ಸೇರಿಸಿದೆ. ಕೋವಿಡ್-19ಕ್ಕೆ ಕಾರಣವಾದ ಕೊರೊನಾ ವೈರಸ್ ಈಗ ಜಾಗತಿಕವಾಗಿ ದೊಡ್ಡ ಪ್ರಮಾಣದ ಮಾರುಕಟ್ಟೆ ಸೃಷ್ಟಿಸಿದೆ. ಶುಶ್ರೂಷೆಯನ್ನು ಬದಿಗಿಟ್ಟು ಬರೀ ಮಾದರಿ ಪರೀಕ್ಷೆ, ಬೇಕಾದ ಕಿಟ್‍ಗಳ ಉತ್ಪಾದನೆಯಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆ ಏರ್ಪಟ್ಟಿದೆ. ಈ ವರ್ಷದ ಆರಂಭದಲ್ಲೇ 520 ಕೋಟಿ ಡಾಲರ್‌ನ (₹39,322 ಕೋಟಿ) ಬೃಹತ್ ಉದ್ಯಮವಾಗಿ ಬೆಳೆಯಿತು. ಇದರಲ್ಲಿ ಪ್ರಯೋಗಾಲಯಗಳದ್ದೇ ಶೇ 40ರಷ್ಟು ವಹಿವಾಟು.

ವೈರಸ್ ಮಾರುಕಟ್ಟೆಗೆ ಇನ್ನೊಂದು ಮುಖವೂ ಇದೆ. ಅದೆಂದರೆ ಮಾದರಿ ಸಂಗ್ರಹ. ಉದಾಹರಣೆಗೆ, ವುಹಾನ್‍ನ ಕೊರೊನಾ ವೈರಸ್ ಬಿಡುಗಡೆಯಾದಾಗ, ಅದರ ಪೂರ್ವಾಪರ ಯಾವ ವಿಜ್ಞಾನಿಗಳಿಗೂ ತಿಳಿದಿರ ಲಿಲ್ಲ. ಅದು ಆಕ್ರಮಿಸಿದ ಮೇಲೆಯೇ ವಿವರ ತಿಳಿದದ್ದು. ವಾಸ್ತವವಾಗಿ ಈಗಲೂ ಎಲ್ಲ ವೈರಸ್‍ಗಳ ವಿವರ ವಿಜ್ಞಾನಿ ಗಳಿಗೆ ಸಿಕ್ಕಿಲ್ಲ. ಒಂದು ಅಂದಾಜಿನಂತೆ, ಹಕ್ಕಿಗಳು ಮತ್ತು ಸ್ತನಿಗಳಲ್ಲಿ ಆಶ್ರಯ ಪಡೆದಿರುವ ವೈರಸ್‍ಗಳ ಸಂಖ್ಯೆ ಕನಿಷ್ಠ 16 ಲಕ್ಷಕ್ಕೂ ಹೆಚ್ಚು ಎಂಬುದು ವೈರಸ್ ಅಧ್ಯಯನ ಮಾಡುತ್ತಿರುವ ಪರಿಣತರು ಕೊಟ್ಟಿರುವ ಅಂದಾಜು. ಈ ಪೈಕಿ ಸುಮಾರು 400 ವೈರಸ್‍ಗಳು ಯಾವಾಗ ಬೇಕಾದರೂ ಎಗರಿ ಮನುಷ್ಯನ ಮೇಲೆ ದಾಳಿ ಮಾಡಬಹುದು.

ಈವರೆಗೆ ಮನುಷ್ಯನ ಮೇಲೆ ಆಕ್ರಮಣ ಮಾಡಿರುವ ಹತ್ತು ಸಾಂಕ್ರಾಮಿಕ ರೋಗಗಳಲ್ಲಿ ಆರು, ಪ್ರಾಣಿ ಮೂಲದಿಂದಲೇ ಬಂದವು. ಇವುಗಳನ್ನು ಅಧ್ಯಯನ ಮಾಡಿ ತಳಿಯನ್ನು ಗುರುತಿಸಿ, ಅವು ಯಾವ ರೀತಿ ಪರಿವರ್ತನೆಯಾಗಿ ಕಾಡಬಹುದು ಎಂಬುದು ಬಹು ದೊಡ್ಡ ಅಧ್ಯಯನ ಬೇಡುತ್ತದೆ. ಹಾಗೆಯೇ ಜಗತ್ತಿನ ಮೂಲೆ ಮೂಲೆಯಿಂದ ಮಾದರಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಇದು ಈಗಿನ ಆದ್ಯತೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದಕ್ಕೆ ಬೆಂಬಲ ಸೂಚಿಸಿದೆ. ಅದೂ ಒಂದು ದೊಡ್ಡ ಉದ್ಯಮವಾಗಿ ಬೆಳೆಯುವ ಎಲ್ಲ ಲಕ್ಷಣಗಳೂ ಇವೆ. ರೋಗ ಬರುವುದಕ್ಕಿಂತ ಮೊದಲೇ ತಡೆಯುವುದು ವಾಸಿ ಎಂಬ ನುಡಿ ಪ್ರಸ್ತುತ ಸಂದರ್ಭಕ್ಕೆ ಹೆಚ್ಚು ಅನ್ವಯವಾಗುತ್ತದೆ.

ಅಮೆರಿಕ, 2005ರಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಾಗ, ವ್ಯಾಪಕವಾದ ಹೊಸ ವೈರಸ್‍ಗಳನ್ನು ಪತ್ತೆ ಮಾಡಲು, ‘ಪ್ರಿಡಿಕ್ಟ್’ ಎಂಬ ಅಂತರರಾಷ್ಟ್ರೀಯ ಅಭಿವೃದ್ಧಿಯ ಭಾಗ ವಾಗಿ ಯೋಜನೆಯನ್ನೇ ಆರಂಭಿಸಿತು. ಇದ್ದ ಫಂಡ್‍ನಲ್ಲಿ ಹತ್ತು ವರ್ಷಗಳ ಕಾಲ ಜಗತ್ತಿನ ಅನೇಕ ಭಾಗಗಳಿಂದ ಬೇರೆ ಬೇರೆ ಪ್ರಾಣಿ, ಪಕ್ಷಿಗಳಿಂದ ವೈರಸ್‍ಗಾಗಿ ಒಂದೂವರೆ ಲಕ್ಷ ಮಾದರಿಗಳನ್ನು ಸಂಗ್ರಹಿಸಿತ್ತು. ಈ ಕಾರ್ಯಕರ್ತರನ್ನು ‘ಕೊರೊನಾ ಬೇಟೆಗಾರರು’ ಎಂದೇ ಕರೆದು ಕಾಡುಮೇಡಿಗೆ ಅಟ್ಟಿತು.

ವಾಸ್ತವವಾಗಿ ಎಬೊಲಾ ವೈರಸ್ಸನ್ನು ಪತ್ತೆ ಮಾಡಿದ್ದು ಈ ಕಾರ್ಯತಂಡವೇ. ಪ್ರಾರಂಭದಲ್ಲಿ 20 ಕೋಟಿ ಡಾಲರ್ (₹1,512 ಕೋಟಿ) ನೆರವನ್ನು ನೀಡಿತು. ಆದರೆ ಇದೇ ಮಾರ್ಚ್ ತಿಂಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅನುದಾನ ನಿಲ್ಲಿಸಿದರು. ಏಪ್ರಿಲ್ ಹೊತ್ತಿಗೆ ಅಮೆರಿಕಕ್ಕೂ ಕೊರೊನಾ ವೈರಸ್‍ನ ಬಿಸಿ ತಾಕಿದಾಗ ಸಂಶೋಧನೆಗೆ ಮತ್ತೆ 10 ಕೋಟಿ ಡಾಲರ್ (₹756 ಕೋಟಿ) ದೇಣಿಗೆ ನೀಡಿತು. ಈಗ ಈ ಕೊರೊನಾ ಬೇಟೆಗಾರರು ವೈದ್ಯಕೀಯ ಶಸ್ತ್ರಾಸ್ತ್ರಗಳೊಡನೆ ಮತ್ತೆ ಕಾಡುಮೇಡಿಗೆ ನುಗ್ಗುತ್ತಿದ್ದಾರೆ.

ಮಾದರಿ ಸಂಗ್ರಹಕ್ಕೆ ರೆಕ್ಕೆಪುಕ್ಕ ಬಂದಿದೆ. ಇಲ್ಲಿ ಒಂದು ಮಾತು ಗಮನಿಸಬೇಕು. ಕ್ಯಾಸನೂರು ಕಾಯಿಲೆ ಎಂದೇ ಪ್ರಸಿದ್ಧವಾದ ಮಂಗನಕಾಯಿಲೆಗೆ ಕಾರಣವಾಗುವ ಉಣ್ಣೆಗಳ ಮೂಲಕ ಮತ್ತು ಸತ್ತ ಮಂಗಗಳ ಮೂಲಕ ಹಬ್ಬುವ ವೈರಸ್ಸನ್ನು ಪುಣೆಯ ರಾಷ್ಟ್ರೀಯ ವೈರಸ್ ಅಧ್ಯಯನ ಕೇಂದ್ರ ಗುರುತಿಸಿದ್ದರಿಂದ ಮುಂದೆ ಇದಕ್ಕೆ ಲಭ್ಯವಾಗುವ ಲಸಿಕೆ ಕೂಡ ಮಾರುಕಟ್ಟೆಗೆ ಬಂತು.

ಪುಣೆಯ ರಾಷ್ಟ್ರೀಯ ವೈರಸ್ ಅಧ್ಯಯನ ಕೇಂದ್ರ ಸೇರಿದಂತೆ ಭಾರತದಲ್ಲಿ ಸರ್ಕಾರ ಮತ್ತು ಖಾಸಗಿಗೆ ಸೇರಿದ 62 ವೈರಸ್ ಅಧ್ಯಯನ ಕೇಂದ್ರಗಳಿವೆ. ಇವುಗಳ ಮೂಲ ಗುರಿ ಅಕಾಡೆಮಿಕ್ ಅಧ್ಯಯನವೇ ಹೊರತು ಮಾರುಕಟ್ಟೆ ಸೃಷ್ಟಿಸುವುದಲ್ಲ. ಆದರೆ ಅಮೆರಿಕ ಮತ್ತು ಯುರೋಪ್‌ ದೇಶಗಳಲ್ಲಿ ಸೂಕ್ಷ್ಮಜೀವಿಗಳ ವಹಿವಾಟು 2,500 ಕೋಟಿ ಡಾಲರ್ ಮೊತ್ತದ (₹1,89,050 ಕೋಟಿ) ಉದ್ಯಮವನ್ನು ಬೆಳೆಸಿದೆ. ಮುಂದೆ ರೋಗಕಾರಕ ವೈರಸ್‍ಗಳನ್ನು ಗುರುತಿಸುವುದು, ಪ್ರಯೋಗಾಲಯದಲ್ಲಿ ಸಂಶೋಧನೆ ಮತ್ತು ತಕ್ಕ ಲಸಿಕೆ ಕಂಡುಹಿಡಿಯುವುದು ಹಲವು ಶತಕೋಟಿ ಡಾಲರ್‌ ಉದ್ಯಮವಾಗಿ ಬೆಳೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.