ಕರ್ನಾಟಕವಷ್ಟೇ ಅಲ್ಲ ಇಡೀ ಭಾರತ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಮರೆಯುತ್ತಾ ಬಂದಿದೆ. ಅವರೊಬ್ಬ ದಲಿತ ವಿರೋಧಿ, ಹಿಂದೂ ವಿರೋಧಿ ಹಾಗೂ 1947ರಲ್ಲಿ ದೇಶ ವಿಭಜನೆಗೆ ಕಾರಣರಾದ ಪ್ರಮುಖ ದೋಷಿ ಎಂಬಂಥ ಸುಳ್ಳುಪ್ರಚಾರವನ್ನು ಸಹ ಕೆಲವು ಶಕ್ತಿಗಳು ಬಹಿರಂಗವಾಗಿ ಮಾಡುತ್ತಾ ಯುವಜನರಲ್ಲಿ ಅವರ ಬಗ್ಗೆ ದ್ವೇಷ ಹುಟ್ಟಿಸುವ ಪ್ರಯತ್ನ ಮಾಡುತ್ತಿವೆ. ಇಂತಹ ಅಕೃತ್ಯವನ್ನು ವೈಚಾರಿಕ ಮಾರ್ಗದ ಮೂಲಕ ನಿಲ್ಲಿಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಬಿಜೆಪಿಯವರಿಗಂತೂ ಹಾಗೆ ಮಾಡುವುದು ಲಾಭದಾಯಕವಲ್ಲ. ನಮ್ಮ ದೇಶದ ಸ್ವಾತಂತ್ರ್ಯ ಸಮರಕ್ಕೆ ನಾಯಕತ್ವ ಕೊಟ್ಟು, ಅದಕ್ಕಾಗಿ ಅಪಾರ ತ್ಯಾಗ ಮಾಡಿ, ಸಂಕಷ್ಟಗಳ ಸುಳಿಯಲ್ಲಿಯೇ ಬದುಕಿದ ಇಂಥ ಮಹಾಪುರುಷರನ್ನು ದೂಷಿಸುವುದು ನಮ್ಮ ಕೃತಘ್ನ ಮನಃಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.
ಸತ್ಯ, ಅಹಿಂಸೆ, ಸರ್ವರಿಗೂ ನ್ಯಾಯ ಎಂಬ ಆದರ್ಶ ಗಳನ್ನೇ ದಾರಿದೀಪವನ್ನಾಗಿಸಿಕೊಂಡು, ಬ್ರಿಟಿಷರ ಗುಲಾಮ ಗಿರಿಯಿಂದ ಭಾರತವನ್ನು ಮುಕ್ತಗೊಳಿಸಲು ಗಾಂಧೀಜಿ ನಡೆಸಿದ ಹೋರಾಟದ ಮಾದರಿಯು ಜಗತ್ತಿನ ಇತಿಹಾಸ ದಲ್ಲಿಯೇ ವಿನೂತನವಾಗಿತ್ತು. ನಮ್ಮ ಜಗತ್ತು ಯುದ್ಧ, ಯಾದವೀ ಕಲಹ, ಹತ್ಯಾಕಾಂಡಗಳನ್ನು ನೋಡುತ್ತಲೇ ಬಂದಿದೆ. ಇದಕ್ಕೆ ತದ್ವಿರುದ್ಧವಾದ ಮಾದರಿಯೊಂದನ್ನು ಜಗತ್ತಿನ ಮುಂದಿಡಲು ಗಾಂಧೀಜಿ ಹೆಣಗಿದರು. ಅವರ ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮ ಬರೀ ರಾಜಕಾರಣದಿಂದ ಪ್ರೇರಿತವಾಗಿರಲಿಲ್ಲ. ಹಿಂದೂ– ಮುಸ್ಲಿಂ ಏಕತೆಯ ಅಡಿಪಾಯದ ಮೇಲೆ ನಿಂತ ಅಖಂಡ ಭಾರತದ ಕನಸು, ಅಸ್ಪೃಶ್ಯತಾ ನಿವಾರಣೆ ಹಾಗೂ ದಲಿತೋದ್ಧಾರದ ಆಶಯವನ್ನು ಅದು ಹೊಂದಿತ್ತು. ಹಿಂದೂ ಧರ್ಮದ ಸುಧಾರಣೆ, ಸ್ತ್ರೀಯರ ಸಬಲೀಕರಣ, ಸಮಾನತೆ, ಸಹಕಾರ, ಸಂಸ್ಕೃತಿಯನ್ನು ಬೆಳೆಸುವ ಪರಿಸರಸ್ನೇಹಿ ಅರ್ಥವ್ಯವಸ್ಥೆ, ಆರೋಗ್ಯಕರ ಜೀವನಶೈಲಿ, ಮನುಷ್ಯನ ಸರ್ವಾಂಗೀಣ ಉನ್ನತಿಗಾಗಿ ಶ್ರಮಿಸುವ ‘ನಯೀ ತಾಲೀಂ’ ಎಂಬ ನೂತನ ಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆ, ಸ್ವಸ್ಥ ರಾಷ್ಟ್ರೀಯತೆ, ನೈತಿಕತೆಯನ್ನು ಕೇಂದ್ರಬಿಂದುವಾಗುಳ್ಳ ಸ್ವಸುಧಾರಣೆಯೇ ಸಮಾಜ ಪರಿವರ್ತನೆಯ ಮೂಲ ಎಂಬ ಆಚಾರತತ್ವವನ್ನು ಅದು ಒಳಗೊಂಡಿತ್ತು.
ಇಷ್ಟೆಲ್ಲ ಸಾಮಾಜಿಕ, ಆಧ್ಯಾತ್ಮಿಕ ಆಯಾಮಗಳನ್ನು ಆಧಾರವಾಗಿಟ್ಟು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತೊಬ್ಬ ನಾಯಕ ಇಡೀ ಜಗತ್ತಿನ ಆಧುನಿಕ ಇತಿಹಾಸದಲ್ಲಿ ಸಿಗುವುದಿಲ್ಲ. ಸಂತನಂತೆ ಬದುಕಿದ ಈ ಹಿರಿಯ ಜೀವ ತನಗಾಗಿ ಅಥವಾ ತನ್ನ ಕುಟುಂಬದವರಿ ಗಾಗಿ ಅಧಿಕಾರ ಪಡೆಯಲು ರಾಜಕಾರಣ ನಡೆಸಲಿಲ್ಲ. ಕೊನೆಗೆ ತನ್ನ ಆದರ್ಶಗಳನ್ನು ದ್ವೇಷಿಸುವ ಕುತಂತ್ರಿಗಳ ಗುಂಡಿಗೆ ಬಲಿಯಾಗಿ ಅವರು ಹುತಾತ್ಮರಾಗಬೇಕಾಯಿತು.
ಕರ್ನಾಟಕಕ್ಕೂ ಗಾಂಧೀಜಿಗೂ ಅನ್ಯೋನ್ಯವಾದ ಸಂಬಂಧ. 1915– 37ರ ಅವಧಿಯಲ್ಲಿ ಅವರು 19 ಬಾರಿ ನಮ್ಮ ನಾಡಿಗೆ ಭೇಟಿ ಕೊಟ್ಟಿದ್ದರು. ತಮ್ಮ ಇಡೀ ಜೀವನದಲ್ಲಿ ಅವರು ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಂದೇ ಬಾರಿ. ಅದೂ 1924ರಲ್ಲಿ ನಮ್ಮ ಬೆಳಗಾವಿಯಲ್ಲಿ ಜರುಗಿದ ಅಧಿವೇಶನದಲ್ಲಿ ಎಂಬುದು ಕರ್ನಾಟಕದ ಸೌಭಾಗ್ಯ. ಆಗ ಸ್ವಾತಂತ್ರ್ಯ ಚಳವಳಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿತ್ತು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ನಂತರ ಬ್ರಿಟಿಷ್ ಆಡಳಿತದ ವಿರುದ್ಧ ದೇಶದಲ್ಲಿ ಆಕ್ರೋಶ ಮನೆಮಾಡಿತ್ತು. ಅಸಹಕಾರ ಆಂದೋಲನವು ಹಿಂಸಾತ್ಮಕ ತಿರುವು ಪಡೆದದ್ದರಿಂದ ಜನರಲ್ಲಿ ನಿರಾಸೆಯ ಕಾರ್ಮೋಡ ಕವಿದಿತ್ತು ಹಾಗೂ ಭವಿಷ್ಯದ ದಿಕ್ಕು ತಿಳಿಯದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲಲ್ಲಿ ಹಿಂದೂ– ಮುಸ್ಲಿಂ ಕಲಹದ ಕಿಡಿಗಳು ಎದ್ದಿದ್ದವು. ಕಾಂಗ್ರೆಸ್ ಪಕ್ಷದಲ್ಲಿಯೇ ಒಡಕು ಹುಟ್ಟಿಕೊಂಡಿತ್ತು.
ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ, 39ನೇ ವಾರ್ಷಿಕ ಕಾಂಗ್ರೆಸ್ ಅಧಿವೇಶನ ಕರ್ನಾಟಕದಲ್ಲಿ ನಡೆಯಬೇಕು, ಅದರಲ್ಲೂ ಬೆಳಗಾವಿಯಲ್ಲಿ ಜರುಗಬೇಕು, ಗಾಂಧೀಜಿಯೇ ಅದರ ಅಧ್ಯಕ್ಷತೆ ವಹಿಸಬೇಕು ಎಂದು ಗಂಗಾಧರರಾವ್ ದೇಶಪಾಂಡೆ ಅವರಂತಹ ಧುರೀಣರು ಪ್ರಯತ್ನ ನಡೆಸಿದರು. 1924ರ ಡಿಸೆಂಬರ್ 26, 27ರಂದು ಜರುಗಿದ ಈ ಅಧಿವೇಶನದ ಇತಿಹಾಸವನ್ನು ಹುಬ್ಬಳ್ಳಿ– ಧಾರವಾಡದ ಹಿರಿಯ ಪತ್ರಕರ್ತ ಮನೋಜ ಪಾಟೀಲ ತಮ್ಮ ಪುಸ್ತಕದಲ್ಲಿ ದಾಖಲೆಸಮೇತ ಅತ್ಯಂತ ರೋಚಕವಾಗಿ ಬರೆದಿದ್ದಾರೆ. ಸಮಾಜ ಸುಧಾರಕ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರ ಸಂಪಾದಕತ್ವದಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಹೊರತಂದ ‘ಗಾಂಧಿ ಮತ್ತು ಕರ್ನಾಟಕ’ ಗ್ರಂಥದಲ್ಲಿಯೂ ಈ ಅಧಿವೇಶನದ ವಿಸ್ತೃತ ವರ್ಣನೆ ಇದೆ. ನೂರು ವರ್ಷ ಕಳೆದರೂ ಅಧಿವೇಶನದ ಐದು ಸಂದೇಶಗಳು ಇಂದಿಗೂ ನಾಳೆಗೂ ಪ್ರಸ್ತುತವಾಗಿವೆ.
ಒಂದು: ಇಂದು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷ ತನ್ನ ಸಭೆ, ಕಾರ್ಯಕ್ರಮಗಳಿಗೆ ಲೆಕ್ಕವಿಲ್ಲದಂತೆ ಹಣ ಖರ್ಚು ಮಾಡುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಗಾಂಧೀಜಿಯ ಒತ್ತಾಯದಿಂದಾಗಿ ಬೆಳಗಾವಿ ಅಧಿವೇಶನವು ನಂಬಲಾರದಷ್ಟು ಸರಳವಾಗಿ ಜರುಗಿತು. ಅಂತಹ ಸರಳತೆ ಈಗಿನ ರಾಜಕಾರಣದಲ್ಲಿ ಏಕೆ ಕಣ್ಮರೆಯಾಗಿದೆ?
ಎರಡು: ಗಾಂಧೀಜಿಯ ಅಧ್ಯಕ್ಷೀಯ ಭಾಷಣವನ್ನು ಓದಿದರೆ ಅದರಲ್ಲಿನ ಪ್ರಾಮಾಣಿಕತೆ, ಆತ್ಮಪರೀಕ್ಷೆ, ಸತ್ಯನಿಷ್ಠೆ, ತಮ್ಮ ವಿರೋಧಿಗಳನ್ನೂ ಗೌರವಿಸಿ ಪಕ್ಷ ಹಾಗೂ ದೇಶದಲ್ಲಿ ಒಗ್ಗಟ್ಟು ಬೆಳೆಸುವ ಅವರ ಪ್ರಯತ್ನಗಳು ಅಚ್ಚರಿ ಮೂಡಿಸುತ್ತವೆ. ‘ನನ್ನ ವಿರೋಧಿಗಳು ರಾಷ್ಟ್ರದ್ರೋಹಿಗಳಲ್ಲ. ನನ್ನನ್ನು ಟೀಕಿಸುವವರಿಗೂ ಬೆಂಬಲಿಸುವವರಿಗೂ ಕಾಂಗ್ರೆಸ್‌ನಲ್ಲಿ ಸಮಾನ ಸ್ಥಾನವಿದೆ. ಪರಸ್ಪರ ಸಹಿಷ್ಣುತೆ ಹಾಗೂ ಸಹಕಾರವು ರಾಜಕಾರಣದಲ್ಲಿ ಅಹಿಂಸೆಯ ಲಕ್ಷಣಗಳು’ ಎಂದು ಅವರು ಹೇಳಿದ್ದರು. ಹೀಗೆ ವಿಚಾರ ಮಾಡುವ ನಾಯಕರು ಇಂದು ಇದ್ದಾರೆಯೇ?
ಮೂರು: ಬ್ರಿಟಿಷರ ಆರ್ಥಿಕ ಶೋಷಣೆಯ ವಿರುದ್ಧ ಭಾರತೀಯರನ್ನು ಒಂದುಗೂಡಿಸಲು, ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಖಾದಿ, ಚರಕ ಮತ್ತು ಗ್ರಾಮೋದ್ಯೋಗ ಒಂದು ಪ್ರಬಲ ಅಸ್ತ್ರ ಎಂಬ ತಮ್ಮ ಸಿದ್ಧಾಂತವನ್ನು ಗಾಂಧೀಜಿ ಬೆಳಗಾವಿಯಲ್ಲಿಯೂ ವಿವರಿಸಿದರು. ಆಧುನಿಕ ತಂತ್ರಜ್ಞಾನದಿಂದ ಇಂದಿನ ಭಾರತ ಆಮೂಲಾಗ್ರವಾಗಿ ಬದಲಾಗಿದ್ದರೂ ಆರ್ಥಿಕ ವ್ಯವಸ್ಥೆ ಯಾವಾಗಲೂ ಅಹಿಂಸಾತ್ಮಕವಾಗಿ ಇರಬೇಕು, ಸಮಾನತೆಯನ್ನು ಬೆಳೆಸುವಂಥದ್ದಾಗಿರಬೇಕು ಎಂಬ ಖಾದಿಯ ಮೂಲ ಸಂದೇಶ ಈಗಲೂ ಅರ್ಥಪೂರ್ಣವಾಗಿಯೇ ಇದೆ ಅಲ್ಲವೇ?
ನಾಲ್ಕು: ಹಿಂದೂ– ಮುಸ್ಲಿಂ ಏಕತೆಗಾಗಿ ಗಾಂಧೀಜಿ ಕೊಟ್ಟ ಮಹಾಮಂತ್ರವೆಂದರೆ ‘ಪ್ರತಿ ಹಿಂದೂ ವ್ಯಕ್ತಿಯು ಮುಸಲ್ಮಾನರ ಪಕ್ಷಪಾತಿಯಾಗಬೇಕು ಹಾಗೂ ಪ್ರತಿ ಮುಸಲ್ಮಾನ ವ್ಯಕ್ತಿಯು ಹಿಂದೂಗಳ ಪಕ್ಷಪಾತಿಯಾಗಬೇಕು’. ಈ ರೀತಿ ವಿವಿಧ ಧಾರ್ಮಿಕ ಸಮುದಾಯದವರು ಪರಸ್ಪರರನ್ನು ತಿಳಿದುಕೊಂಡು, ಗೌರವಿಸುತ್ತಾ ಸಹಬಾಳ್ವೆ ನಡೆಸಿದರೆ ಮಾತ್ರ ರಾಷ್ಟ್ರೀಯ ಏಕತೆ, ಸಾಮಾಜಿಕ ಭಾವೈಕ್ಯ ಸಾಧ್ಯ ಎಂಬ ಅವರ ವಿಚಾರ ಇಂದು ಇಡೀ ಜಗತ್ತಿಗೆ ಮಾದರಿ ಎನಿಸುವುದಿಲ್ಲವೇ?
ಐದು: ಅಂಬೇಡ್ಕರ್ ಅವರು ರಾಷ್ಟ್ರಮಟ್ಟದಲ್ಲಿ ಸಾರ್ವಜನಿಕ ಜೀವನಕ್ಕೆ ಪದಾರ್ಪಣೆ ಮಾಡುವುದಕ್ಕಿಂತ ಅನೇಕ ವರ್ಷಗಳ ಹಿಂದೆಯೇ ಗಾಂಧೀಜಿ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಟ ನಡೆಸಿದ್ದರು. ಇದಕ್ಕೆ ಬೆಳಗಾವಿ ಅಧಿವೇಶನವೇ ನಿದರ್ಶನ. ಅವರು ಪ್ರಖರವಾಗಿ ಹೇಳಿದ್ದ ಮಾತುಗಳು ಹೀಗಿದ್ದವು: ‘ಅಸ್ಪೃಶ್ಯತೆ ಒಂದು ವಿಷ. ಅದನ್ನು ಕಿತ್ತುಹಾಕದೇ ಹೋದರೆ ಅದು ಸ್ವರಾಜ್ಯಕ್ಕೆ ಒಂದು ಆತಂಕ ಹಾಗೂ ಹಿಂದೂ ಸಮಾಜಕ್ಕೆ ಘಾತಕ. ಕಾಂಗ್ರೆಸ್ಸಿಗರಾದ ಹಿಂದೂಗಳು ಈ ಆತಂಕವನ್ನು ತೆಗೆದುಹಾಕಬೇಕು. ರಾಜಕೀಯ ಗುರಿಗಳನ್ನು ಸಾಧಿಸಲು ದಲಿತವರ್ಗವನ್ನು ಉಪಯೋಗಿಸಿಕೊಳ್ಳುತ್ತಿರುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಹಿಂದೂಗಳಿಗೆ ನಾನು ಎಚ್ಚರಿಕೆ ಕೊಡಬಯಸುತ್ತೇನೆ. ಅಸ್ಪೃಶ್ಯತಾ ನಿವಾರಣೆಯ ಮೂಲಕ ದಲಿತ ವರ್ಗಗಳಿಗೆ ಮತ್ತೆ ಸ್ವಾತಂತ್ರ್ಯವನ್ನು ತಂದುಕೊಡುವ ವರೆಗೆ ಹಿಂದೂಗಳಿಗೆ ಸ್ವರಾಜ್ಯವನ್ನು ಕೇಳುವ ಹಕ್ಕಿಲ್ಲ’.
ಅಸ್ಪೃಶ್ಯತಾ ನಿವಾರಣೆಯು ಕೃತಿಯಿಂದ ಸಾಧ್ಯವೇ ವಿನಾ ಭಾಷಣದಿಂದಲ್ಲ ಎಂಬುದು ಗಾಂಧೀಜಿಯ ನಂಬಿಕೆಯಾಗಿತ್ತು. ಅದಕ್ಕಾಗಿ ಅಧಿವೇಶನ ಸ್ಥಳದಲ್ಲಿ ಸಫಾಯಿ ಕೆಲಸ ಮಾಡುವ ಕಾಂಗ್ರೆಸ್ ಸೇವಾದಳದ ಸ್ವಯಂಸೇವಕರಲ್ಲಿ ಮೇಲ್ವರ್ಗದವರೇ ದೊಡ್ಡ ಸಂಖ್ಯೆಯಲ್ಲಿ ಇರಬೇಕು ಎಂದು ಕಡ್ಡಾಯ ಮಾಡಿದರು. ಹೀಗಾಗಿ, ಎನ್.ಎಸ್.ಹರ್ಡೀಕರ್ ಅವರ ನೇತೃತ್ವದಲ್ಲಿ ಕಾಕಾ ಕಾರಖಾನೀಸ, ಮನೋಜ ಪಾಟೀಲ ಅವರ ಅಜ್ಜ ವಾಮನರಾವ್ ದೇಸಾಯಿ ಅವರಂತಹ ಅನೇಕ ಸವರ್ಣೀಯರು ಸಂತೋಷದಿಂದ ಪಾಯಖಾನೆ ಸ್ವಚ್ಛ ಮಾಡಿದರಷ್ಟೇ ಅಲ್ಲ ಜೀವನದುದ್ದಕ್ಕೂ ದಲಿತೋದ್ಧಾರದ ಕಾರ್ಯ ನಡೆಸಿದರು. ಈ ರೀತಿ ಸಮಾಜದಲ್ಲಿ ಹೊಸ ಜಾಗೃತಿ ತಂದ ಬೆಳಗಾವಿ ಅಧಿವೇಶನವನ್ನು, ಅದರ ಆದರ್ಶಗಳನ್ನು ನಾವು ಮರೆಯಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.