ADVERTISEMENT

ವಿಶ್ಲೇಷಣೆ: ಲಿಂಗಸೂಕ್ಷ್ಮ ಕುರುಡಾದೊಡೆ...

ಕಿರಣ್‌ ಎಂ. ಗಾಜನೂರು
Published 26 ನವೆಂಬರ್ 2025, 23:50 IST
Last Updated 26 ನವೆಂಬರ್ 2025, 23:50 IST
<div class="paragraphs"><p>ವಿಶ್ಲೇಷಣೆ: ಲಿಂಗಸೂಕ್ಷ್ಮ ಕುರುಡಾದೊಡೆ...</p></div>

ವಿಶ್ಲೇಷಣೆ: ಲಿಂಗಸೂಕ್ಷ್ಮ ಕುರುಡಾದೊಡೆ...

   

ಹೆಣ್ಣು ಭಾಗಿಯಾದ ಅಪರಾಧ ಕೃತ್ಯಗಳು ಅತಿರಂಜಿತವಾಗಿ ಹಾಗೂ ನಾಟಕೀಯವಾಗಿ ಪ್ರಕಟಗೊಳ್ಳುವುದು ಏಕೆ? ಲಿಂಗಸೂಕ್ಷ್ಮ ವೈಚಾರಿಕತೆಯ ಕೊರತೆಯನ್ನು ಸೂಚಿಸುವ ಇಂಥ ಬೆಳವಣಿಗೆಗಳ ನಡುವೆಯೇ, ಪುರುಷಪ್ರಧಾನ ಸಮಾಜದ ಚೌಕಟ್ಟಿನಲ್ಲಿ ಬಿರುಕು ಮೂಡಿಸುವ ಹಾಗೂ ಗಂಡಿನ ನೆರಳಿನಿಂದ ಹೊರಬರುವ ಹೆಣ್ಣಿನ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ.

–––

ADVERTISEMENT

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊದ (ಎನ್‌ಸಿಆರ್‌ಬಿ) ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ವಾರ್ಷಿಕ ಸರಾಸರಿ 4,48,211 ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಿವೆ. ಅವುಗಳಲ್ಲಿ 1,33,676 ಪ್ರಕರಣಗಳು ಭಾರತೀಯ ದಂಡ ಸಂಹಿತೆ ‘ಸೆಕ್ಷನ್‌ 498ಎ’ ಅಡಿಯಲ್ಲಿ ದಾಖಲಾಗುತ್ತಿವೆ. ಇದರ ಅರ್ಥ, ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ವಿವಾಹಿತ ಮಹಿಳೆಯರು ಪತಿ ಅಥವಾ ಸಂಬಂಧಿಕರ ಕಡೆಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯದ ಸಾಲು ಸಾಲು ಘಟನೆಗಳ ನಡುವೆ, ಹೆಣ್ಣಿನಿಂದ ಗಂಡಿನ ಮೇಲೆ ನಡೆಯುವ ದೌರ್ಜನ್ಯದ ಘಟನೆಗಳೂ ಆಗಾಗ ವರದಿಯಾಗುತ್ತವೆ. ಆ ವರದಿಗಳು, ‘ಪತ್ನಿಯಿಂದ ಪತಿಯ ಹತ್ಯೆ’, ‘ಪತಿಗೆ ಮೋಸಮಾಡಿ ಓಡಿಹೋದ ಪತ್ನಿ’– ಹೀಗೆ, ರೋಚಕ ಶೀರ್ಷಿಕೆಯಲ್ಲಿ ಪ್ರಕಟಗೊಂಡು ಜನರ ಗಮನಸೆಳೆಯುತ್ತವೆ. ಇಂಥ ಸುದ್ದಿಗಳು ಸುದ್ದಿವಾಹಿನಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಜನರ ಗಮನಸೆಳೆಯುತ್ತವೆ. ಇವೆಲ್ಲವೂ ಅಪರಾಧ ಪ್ರಕರಣಗಳೇ ಹೌದು. ಆದರೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗಿಂತ, ಮಹಿಳೆ ಭಾಗಿಯಾದ ದೌರ್ಜನ್ಯದ ಪ್ರಕರಣಗಳು ಮಾಧ್ಯಮಗಳನ್ನು ಹೆಚ್ಚು ಸೆಳೆಯುತ್ತಿರುವುದು, ಕಿರುತೆರೆಯ ಕಾರ್ಯಕ್ರಮಗಳಿಗೆ ಕಂಟೆಂಟ್‌ ಆಗಿ ಬಳಕೆಯಾಗುತ್ತಿರುವುದು, ಸಾಮಾಜಿಕ ಜಾಲತಾಣದ ರೀಲ್ಸ್‌ಗಳ ರೂಪದಲ್ಲಿ ಸಮುದಾಯವನ್ನು ವೇಗವಾಗಿ ತಲಪುತ್ತಿರುವುದು ಕುತೂಹಲಕರ.

ಇದಕ್ಕೆ ಪೂರಕ ಎನ್ನುವಂತೆ ಪ್ರಾಧ್ಯಾಪಕಿಯೊಬ್ಬರು ಮಾತಿನ ನಡುವೆ, ‘ನೋಡಿ, ನಮ್ಮ ಊರು ಎಷ್ಟೊಂದು ಬದಲಾಗಿದೆ; ಹೆಣ್ಣುಮಕ್ಕಳು ಎಷ್ಟು ಮುಂದುವರಿದಿದ್ದಾರೆ; ನಮ್ಮ ನಗರದ ನೈತಿಕತೆ ಅಧಃಪತನಕ್ಕೆ ಇಳಿಯುತ್ತಿದೆ, ಹಿಂದೆ ಹೀಗೆ ಇರಲಿಲ್ಲ’ ಎಂದು ತಮ್ಮ ಆತಂಕ ತೋಡಿಕೊಂಡರು. ಅವರ ಮಾತು ಹಾಗೂ ಮಹಿಳೆಯರು ಭಾಗಿಯಾದ ಅಪರಾಧ ಕೃತ್ಯಗಳ ಬಗೆಗಿನ ಸಮಾಜದ ಕುತೂಹಲದ ಹಿನ್ನೆಲೆಯಲ್ಲಿ ಪ್ರಶ್ನೆಗಳು ಕಾಡತೊಡಗಿದವು. ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳ ವಿದ್ಯಾರ್ಥಿಗಳಾದ ನಮಗೆ, ದೃಶ್ಯ ಮಾಧ್ಯಮಗಳ ‘ಪತ್ನಿಯಿಂದ ಪತಿಯ ಹತ್ಯೆ’ ಎನ್ನುವಂಥ ಅತಿರಂಜಿತ ಸುದ್ದಿ ಹಾಗೂ ‘ನಗರದ ನೈತಿಕತೆಗೆ ಏನಾಗಿದೆ’ ಎನ್ನುವ ಪ್ರಾಧ್ಯಾಪಕಿಯ ಆತಂಕವನ್ನು ಬಿಡಿ ಬಿಡಿ ಪ್ರಕರಣಗಳಾಗಿ ನೋಡಬೇಕೋ ಅಥವಾ ನಮ್ಮ ಸಮಾಜದಲ್ಲಿ ಘಟಿಸುತ್ತಿರುವ ಪ್ರಮುಖ ಸಾಮಾಜಿಕ ವಿದ್ಯಮಾನದ ರೂಪದಲ್ಲಿ ನೋಡಬೇಕೋ ಎನ್ನುವ ತಾತ್ವಿಕ ಸವಾಲೊಂದು ಎದುರಾಗಿತ್ತು.

ಈ ಪ್ರಕರಣಗಳನ್ನು ಬಿಡಿ ಬಿಡಿಯಾಗಿ ನೋಡಿ, ಇತರ ಅಪರಾಧ ಪ್ರಕರಣಗಳಂತೆ ಇವುಗಳೂ ‘ಅಪರಾಧ ಪ್ರಕರಣಗಳು’, ಇವುಗಳನ್ನು ನಿಯಂತ್ರಿಸಲು ಕಾನೂನು ಸರಿಯಾಗಿ ಜಾರಿಗೊಳ್ಳಬೇಕು, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಆ ಮೂಲಕ ಸಮಾಜದಲ್ಲಿ ನೈತಿಕತೆಯನ್ನು ಪುನರ್‌ ಸ್ಥಾಪಿಸಬೇಕು ಎಂಬ ಮಾದರಿಯ ವಾದಗಳು ಮತ್ತು ಅವುಗಳನ್ನು ಮಂಡಿಸುವವರ ಕಾಳಜಿಗಳನ್ನು ನಾವು ಸಂಪೂರ್ಣವಾಗಿ ಅಲ್ಲಗಳೆಯಲಾಗುವುದಿಲ್ಲ. ಆದರೆ, ಈ ಮಾದರಿಯ ಪ್ರಕರಣಗಳನ್ನು ಮಾಧ್ಯಮಗಳು ಮಂಡಿಸುತ್ತಿರುವ ರೀತಿ ಹಾಗೂ ಇಂಥ ವಿದ್ಯಮಾನಗಳ ಕುರಿತು ವ್ಯಕ್ತವಾಗುತ್ತಿರುವ ಏಕಮುಖ ಕಾನೂನಾತ್ಮಕ, ನೈತಿಕ ಕಾಳಜಿಯನ್ನು ಪೋಷಿಸುತ್ತಿರುವ ಗ್ರಹಿಕೆ ಯಾವುದು ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ. ಈ ಸಾಧ್ಯತೆಯನ್ನು ವಿಶ್ಲೇಷಿಸುವ ಮತ್ತು ಪರಿಹಾರಗಳನ್ನು ಹುಡುಕುವ ಸಮಾಜಶಾಸ್ತ್ರೀಯ ಪ್ರಯತ್ನಗಳನ್ನೂ ನಾವು ಮಾಡಬೇಕಾಗಿದೆ.

ದೆಹಲಿಯ ಬೀದಿಗಳಲ್ಲೊಮ್ಮೆ ಓಡಾಡುತ್ತಿದ್ದ ಸಮಾಜಶಾಸ್ತ್ರಜ್ಞೆ ಪೆಟ್ರೀಷಿಯಾ ಉಬೆರಾಯ್ ಅವರ ಗಮನವನ್ನು, ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಯ ಹಿಂದೆ ಬರೆದ ‘ಬ್ಯೂಟಿಫುಲ್‌ ವೈಫ್‌, ಡೇಂಜರ್‌ ಲೈಫ್‌’ ಎನ್ನುವ ಬರಹ ಸೆಳೆಯಿತು. ಅದರ ಬಗ್ಗೆ ಯೋಚಿಸಿದ ಅವರಿಗೆ– ಆ ಸಾಲುಗಳನ್ನು ಲಾರಿಯ ಮೇಲೆ ಬರೆದವನು/ಬರೆಸಿದವನು ವಿದ್ಯಾವಂತ ಆಗಿಲ್ಲದೆ ಇರುವ ಸಾಧ್ಯತೆ ಹೆಚ್ಚಾಗಿದ್ದರೂ, ‘ಸುಂದರ ಹೆಂಡತಿ’ಯ ಕುರಿತು ಒಂದು ಧೋರಣೆ ಹೊಂದಿದ್ದಾನೆ, ಅಥವಾ ‘ಸುಂದರ ಹೆಂಡತಿ ಅಪಾಯ ತರುತ್ತಾಳೆ’ ಎನ್ನುವ ನಿಲುವಿಗೆ ಸಮ್ಮತಿ ಸೂಚಿಸುತ್ತಿದ್ದಾನೆ; ಆ ಹೇಳಿಕೆಯನ್ನು ಲಾರಿಯ ಹಿಂದೆ ಬರೆಯುವ ಮೂಲಕ ತನ್ನ ಅಭಿಪ್ರಾಯವನ್ನು ಅಧಿಕೃತಗೊಳಿಸುತ್ತಿದ್ದಾನೆ ಅನ್ನಿಸಿತು. ಭಾರತೀಯ ಸಮಾಜದಲ್ಲಿ ಗಂಡಸರು ಹೀಗೆ ಏಕೆ ಯೋಚಿಸುತ್ತಾರೆ ಎನ್ನುವ ಪ್ರಶ್ನೆ ಅವರನ್ನು ಕಾಡತೊಡಗಿತು. ನಂತರ ತಮ್ಮ ಚಿಂತನೆಗಳನ್ನವರು, ‘ಫ್ರೀಡಂ ಅಂಡ್‌ ಡೆಸ್ಟಿನಿ: ಜೆಂಡರ್‌ ಫ್ಯಾಮಿಲಿ ಅಂಡ್‌ ಪಾಪ್ಯುಲರ್‌ ಕಲ್ಚರ್‌ ಇನ್‌ ಇಂಡಿಯಾ’ ಎನ್ನುವ ಪ್ರಬಂಧದಲ್ಲಿ ದಾಖಲಿಸಿದರು; ಲಾರಿಯೊಂದರ ಹಿಂಬದಿ ಬರಹ, ಪ್ರೌಢ ಸಮಾಜಶಾಸ್ತ್ರೀಯ ಶೋಧವಾಗಿ ಬದಲಾಯಿತು.

ತಮ್ಮ ಬರಹದಲ್ಲಿ ಪೆಟ್ರೀಷಿಯಾ ಅವರು, ‘ಪ್ರಸ್ತುತ ಆಧುನಿಕತೆ ಪ್ರತಿಪಾದಿಸುವ ವೈಯಕ್ತಿಕ ಸ್ವಾಯತ್ತತೆ, ಆಯ್ಕೆಯ ಸ್ವಾತಂತ್ರ್ಯ ಹಾಗೂ ಪ್ರಣಯ–ಪ್ರೀತಿಯ ಪರಿಭಾಷೆಗಳು ಭಾರತೀಯ ಸಾಂಪ್ರದಾಯಿಕ ಸಾಮಾಜಿಕ ನೀತಿಯೊಂದಿಗೆ ನಿರಂತರ ಸಂಘರ್ಷದಲ್ಲಿವೆ’ ಎನ್ನುವ ಸಂಗತಿಯನ್ನು ಪ್ರಸ್ತಾಪಿಸುತ್ತಾರೆ. ಒಂದು ಕಡೆ, ಆಧುನಿಕತೆ ಮಹಿಳೆಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಯ್ಕೆಯ ಹಕ್ಕಿನ ಕುರಿತು ಅರಿವು ತುಂಬುತ್ತಿದೆ. ಮತ್ತೊಂದು ಕಡೆ, ಮಹಿಳೆಯ ಕುರಿತ ನಮ್ಮ ಸಾಮಾಜಿಕ ನೀತಿಗಳು ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯರಚನೆಯನ್ನು ಆಕೆಯ ಮೇಲೆ ಹೇರುತ್ತಿವೆ ಎನ್ನುವುದನ್ನು ಗುರ್ತಿಸಿದ್ದಾರೆ. ‘ವರ್ತಮಾನದ ಮಹಿಳೆಯ ಅರಿವು–ಅಲೋಚನೆ ಆಧುನಿಕವಾಗಿದ್ದರೂ, ಆಕೆ ಬದುಕನ್ನು ಸಾಂಪ್ರದಾಯಿಕವಾಗಿಯೇ ಕಲ್ಪಿಸಿಕೊಳ್ಳಬೇಕಾದ ವಿಚಿತ್ರ ದ್ವಂದ್ವವೊಂದಕ್ಕೆ ಸಿಲುಕಿದ್ದಾಳೆ’ ಎನ್ನುವ ವಾದವನ್ನು ಪೆಟ್ರೀಷಿಯಾ ಮಂಡಿಸಿದ್ದಾರೆ.

1990ರ ದಶಕದ ನಂತರ ಭಾರತದಲ್ಲಿ ಜರುಗಿದ ಆರ್ಥಿಕ ಉದಾರೀಕರಣ ನಮ್ಮ ಕುಟುಂಬ ಮತ್ತು ಸಾಮಾಜಿಕ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಈ ವಿದ್ಯಮಾನದಿಂದ ಹುಟ್ಟಿದ ‘ನವ ಮಧ್ಯಮವರ್ಗದ ಮಹಿಳೆ ತಕ್ಕಮಟ್ಟಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾಳೆ. ಈ ಬೆಳವಣಿಗೆ ಆಕೆಗೆ ಕೌಟುಂಬಿಕ ದೌರ್ಜನ್ಯ ಹಾಗೂ ಏಕಮುಖ ವೈವಾಹಿಕ ಸಂಬಂಧಗಳನ್ನು ಪ್ರಶ್ನಿಸುವ ಚೈತನ್ಯ ನೀಡಿದೆ ಎನ್ನುವುದು ಪೆಟ್ರೀಷಿಯಾ ಅವರ ವಿಶ್ಲೇಷಣೆ. ಇದಕ್ಕೆ ಪೂರಕ ಎನ್ನುವಂತೆ ಲೋಕಮತ್‌ನಲ್ಲಿ ಪ್ರಕಟವಾದ (ಫೆಬ್ರುವರಿ 1, 2025ರ ಸಂಚಿಕೆ)  ಅಂತರರಾಷ್ಟ್ರೀಯ ಅಧ್ಯಯನ ವರದಿ, ಬಹುತೇಕ ಮಹಿಳೆಯರು ಸಾಂಪ್ರದಾಯಿಕ ಕೌಟುಂಬಿಕ ಪಾತ್ರದ ಬದುಕಿಗಿಂತ ವೃತ್ತಿಬದುಕನ್ನು ಪ್ರಸ್ತುತ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿದೆ. ಹೆಣ್ಣುಮಕ್ಕಳ ವಿವಾಹ ಕುರಿತಾದ ಜಾಗತಿಕ ಸಮೀಕ್ಷೆಯ ಸಂಶೋಧನೆಯಲ್ಲಿ ತೊಡಗಿರುವ ಮಾರ್ಗನ್ ಸ್ಟಾನ್ಲಿ ಅವರ ವರದಿಯ ಪ್ರಕಾರ, 2030ರ ಹೊತ್ತಿಗೆ ವಿಶ್ವದಾದ್ಯಂತ 25ರಿಂದ 44 ವರ್ಷದೊಳಗಿನ ಸುಮಾರು ಶೇ 45ರಷ್ಟು ಹೆಣ್ಣುಮಕ್ಕಳು ಮಕ್ಕಳಿಲ್ಲದ ಒಂಟಿ ಬದುಕನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಈ ಅಂಶ ನಮ್ಮ ಕೌಟುಂಬಿಕ ಮತ್ತು ಸಾಮಾಜಿಕ ರಚನೆಗಳಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಗಬಹುದು.

ಹೆಣ್ಣುಮಕ್ಕಳು ಮದುವೆಯಾಗುವ ಬದಲು ಒಂಟಿಯಾಗಿ ಬದುಕಲು ಏಕೆ ಬಯಸುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಕುರಿತು ಯೋಚಿಸಿದರೆ, ಅದು ಅವರ ಆಯ್ಕೆಯ ಬದಲಾಗಿ– ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯ ರಚನೆ, ಅಲ್ಲಿನ ಪುರುಷ ಪ್ರಾಧಾನ್ಯದ ಏಕಮುಖ ತೀರ್ಮಾನಗಳು, ಅದರ ಭಾಗವಾದ ದೌರ್ಜನ್ಯಗಳ ಭಾಗವಾಗಲು ಆಕೆ ಸಿದ್ಧಳಿಲ್ಲ ಎನ್ನುವುದು– ಇವೆಲ್ಲ ನಮ್ಮೆದುರು ನಿಲ್ಲುತ್ತವೆ.

ಬದಲಾದ ಕಾಲಮಾನದಲ್ಲಿ ಮಹಿಳೆ ತನ್ನದೇ ಆಯ್ಕೆಯ ಹಕ್ಕನ್ನು ತುಸು ಮಾತ್ರ ಚಲಾಯಿಸಲು ಪ್ರಯತ್ನಿಸುತ್ತಿದ್ದಾಳೆ. ಆ ಸಣ್ಣ ಪ್ರಯತ್ನವೇ ಶತಮಾನಗಳ ಕಾಲ ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯನ್ನು ಹೆಣ್ಣಿನ ಮೇಲೆ ಹೇರಿದ್ದ ಸಮಾಜಕ್ಕೆ ಸವಾಲಾಗಿ ಬದಲಾಗಿದೆ ಹಾಗೂ ಅದರ ಭಾಗವಾಗಿಯೇ ನಾವು ‘ಸುಂದರಿ ಹೆಂಡತಿಯಿಂದ ಜೀವಕ್ಕೆ ಅಪಾಯಕರ’ ಎನ್ನುವ ಅರ್ಥದ ಬರಹವನ್ನೂ, ಹೆಣ್ಣು ಭಾಗಿಯಾದ ಅಪರಾಧ ಕೃತ್ಯಗಳ ಅತಿರಂಜಿತ ಹಾಗೂ ನಾಟಕೀಯ ವರದಿಗಳನ್ನೂ ಗುರ್ತಿಸಬೇಕಾಗಿದೆ. ಪೆಟ್ರೀಷಿಯಾ ಉಬೆರಾಯ್ ಸಹ ತಮ್ಮ ಲೇಖನದಲ್ಲಿ, ವರ್ತಮಾನದ ಪುರುಷ ಪ್ರಾಧಾನ್ಯ ನಿರೂಪಿತ ಜನಪ್ರಿಯ
ಸಂಸ್ಕೃತಿ (ಪಾಪ್ಯುಲರ್‌ ಕಲ್ಚರ್) ಮಹಿಳೆಯ ಕುರಿತಾದ ಸಾಂಪ್ರದಾಯಿಕ ಚಿತ್ರಣವನ್ನೇ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಮೂಲಕ ಗಟ್ಟಿಗೊಳಿಸುತ್ತಿರುವುದು ಈ ಮಾದರಿಯ ವರ್ತನೆಗೆ ಕಾರಣ ಎನ್ನುವ ವಿಶ್ಲೇಷಣೆಯನ್ನು ಮುಂದಿಟ್ಟಿದ್ದಾರೆ.

ಇಂತಹ ಸಮಯದಲ್ಲಿ ಒಂದು ಸಮಾಜವಾಗಿ ನಮ್ಮ ಮುಂದಿರುವ ಆಯ್ಕೆ, ಹೆಣ್ಣಿಗೆ ಇರುವ ನೈಸರ್ಗಿಕ ಆಯ್ಕೆಯ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಸಾಮಾಜಿಕ ಸ್ಥಿತಿಯನ್ನು ನಿರ್ಮಿಸುವುದಾಗಿದೆ. ಶಿಕ್ಷಣ, ಸಂಗಾತಿಯ ಆಯ್ಕೆ, ಮದುವೆ ಸೇರಿದಂತೆ ಯಾವುದೇ ವಿಷಯದಲ್ಲಿ ಆಕೆಯ ಆಯ್ಕೆಯ ಹಕ್ಕನ್ನು ಗೌರವಿಸುವುದರ ಜೊತೆಗೆ, ಆ ಆಯ್ಕೆಯ ನೈತಿಕ ಹೊಣೆಗಾರಿಕೆಯನ್ನು ನಿಭಾಯಿಸುವ ಕೌಶಲ ಹಾಗೂ ಅವಕಾಶವನ್ನು ಕಲ್ಪಿಸಿಕೊಡಬೇಕಿದೆ. ಇದು ಸಾಧ್ಯವಾಗುವುದು, ಹೆಣ್ಣು–ಗಂಡು ಇಬ್ಬರಿಗೂ ಲಿಂಗಸೂಕ್ಷ್ಮತೆ ಮತ್ತು ಲಿಂಗಸಮಾನತೆ ಕುರಿತ ದೀರ್ಘಾವಧಿಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅರಿವು ದೊರೆತಾಗ ಮಾತ್ರ.

.....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.