ADVERTISEMENT

ಹುಚ್ಚರ ಸಂತಿ…

ರೇಣುಕಾ ನಿಡಗುಂದಿ
Published 13 ನವೆಂಬರ್ 2018, 20:15 IST
Last Updated 13 ನವೆಂಬರ್ 2018, 20:15 IST
.
.   

ಗಾಂಧೀಜಿಯ ಕೋತಿಗಳಿಗೆ ಬ್ಯಾಸರಾಗಿ ಆಡಾಕ ಒಂದ ಗಿಡಾನೂ ಇರದ ಹಂಗss ಭೂಲೋಕನರ ಸುತ್ತಾಡಿ ಬರೂಣಂತ ಬಂದ್ವು. ಕೆಟ್ಟದ್ದನ್ನು ಮಾತಾಡದ ಕೋತಿ ಮೊದ್ಲ ಬಾಪೂನ ಊರಿಗೇ ಹೋಗೂಣಂತು. ಮೂರೂ ಸೀದಾ ಪಟೇಲರ ಪ್ರತಿಮೆ ಕಡೆಗೇ ಧುಮುಕಿದವು. ಸ್ಮಾರಕ ನಿರ್ಮಾಣದಾಗ ಧ್ವಂಸಗೊಂಡ ಅಡವಿ, ನದಿ, ಭೂಮಿ ಮತ್ ಕೃಷಿ ಪ್ರದೇಶದ ಗತಿ ನೋಡಲಾರದ ಕೋತಿ ಕಣ್ಣುಮುಚಗೊಂತು. ಭೂಮಿ ಕಳಕೊಂಡು, ಪುನರ್ವಸತಿಯೂ, ಪರಿಹಾರಧನವೂ ಸಿಗದ ಗೋಳಾಡುತ್ತಿದ್ದ ಆದಿವಾಸಿಗಳನ್ನು ನೋಡಿ ಕಣ್ಣೀರು ಹಾಕ್ತ ಕುಂತು...

ಇಲ್ಲೇ ಕುಂತ್ಕಂಡುಬಿಟ್ರೆ ತಲಿ ಕೆಡತೇತಿ… ನಡೀರಿ ಅಲ್ಲೆಲ್ಲೋ ರಾಮನ ಭಜನಿ ಕೇಳತೇತಿ– ಅಂತ ಹೇಳಿತು ಮೊದಲಿನ ಕೋತಿ. ಕಿವಿ ಮತ್ತ ಕಣ್ಣು ಮುಚಗೊಂಡಿದ್ದ ಕೋತಿಗೋಳಿಗೆ ‘ಕಣ್ಣು ಕಿವಿ ಎಲ್ಲಾ ತೆರೆಕ್ಕೊಂಡ ನೋಡ್ರಿ ಮಂಗ್ಯಾಗೋಳ… ಎದಕ್ಕ ಬಂದೀರಿ ಮತ್ತ’… ಕಿಚ ಕಿಚ ಕಿಚ ಅಂತ ಬೈತಿತ್ತು.

ರಾಮ ಭಜನಿಯ ಭಕ್ತಿರಸದಾಗ ಮುಳುಗಿದ ಕೋತಿಗಳು ಸೀದಾ ಉತ್ತರಪ್ರದೇಶಕ್ಕೆ ಹಾರಿದ್ವು. ಅಲ್ಲಿ ಹುಚ್ಚರ ಸಂತಿ ನೋಡಿ ದಿಕ್ಕೆಟ್ಟಂಗಾತು. ರಾಮ ಸರಯೂ ನದಿ ದಂಡಿ ಮ್ಯಾಲ ಹಣೆ ಚಚ್ಚಿಕೊಳ್ತಾ ಕುಂತಾನ, ಲಕ್ಷ್ಮಣಾ ಹಲ್ಲು ಕಟಕಟಿಸುತ್ತ ಭುಸುಗುಡುತಾನ, ಪಾಪ ವಾಲ್ಮೀಕಿ ಯಾಕಾರಾ ರಾಮಾಯಣ ಬರೆದನೋ ಅಂತ ಕೈಕೈ ಹಿಸಕೊಂತಿದ್ರು. ವಶಿಷ್ಟರು ಯಾವ ಶಾಪಾನೂ ಕೆಲಸಾ ಮಾಡವಲ್ದು ಅಂತ ಕಂಗಾಲಾಗಿ ನಿಂತಿದ್ರು.

ADVERTISEMENT

ಒಂದಿಷ್ಟು ಮಂದಿ ಊರು, ಕೇರಿ, ನಗರದ ಹೆಸರು ಬದಲಿಸೂದ್ರಾಗ ಮುಳುಗಿದ್ರು. ದೀನ ದಯಾಳ್‌ ಉಪಾಧ್ಯಾಯರು ರೈಲ್ವೆಸ್ಟೇಷನ್ನಾಗ ಕುಂತಿದ್ರು. ಆಗ್ರಾ– ಅಗ್ರಸೇನ, ತಾಜಮಹಲ್ ಅಗ್ರವನ್ ಆಗಬೇಕು, ಮುಜಫ್ಪರನಗರಕ್ಕ ಬೆಂಕಿಹಚ್ಚಿ ಕುಣದಾಂವಾ ಲಕ್ಷ್ಮಿನಗರ ಬೇಕು ಅಂತಿದ್ದ. ಗಾಂಧೀಜಿ ಊರು ಅಹಮದಾಬಾದು– ಕರ್ಣಾವತಿ ಅಂತ ಇನ್ನೊಬ್ಬ, ಕೇಂದ್ರ ಗೃಹ ಸಚಿ ವಾಲಯದ ಟೇಬಲ್ ಮ್ಯಾಲ ಹೆಸರ ಬದಲಿಸಾಕ ಬಂದ ಅರ್ಜಿಗಳು ಉರುಳಾಡತಿದ್ವು. ‘ಇನ್ನಟ ಹೊತ್ತು ಇಲ್ಲಿದ್ರ ನಮಗss ಹುಚ್ಚ ಹಿಡಿತೇತಿ ನಡಿರಲೇ, ನಮ್ಮ ಗಾಂಧಿ ಮುತ್ಯಾನ ಆಶ್ರಮನ ನಮಗ ಪಾಡು’ ಅಂತ ಟಣ್ಣಂತ ಜಿಗಿದವು ಅಲ್ಲಿಂದ…

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.