ADVERTISEMENT

ಚುರುಮುರಿ | ದೇವರಿಗೇ ತಿರುಮಂತ್ರ!

ಬಿ.ಎನ್.ಮಲ್ಲೇಶ್
Published 29 ಮೇ 2020, 19:44 IST
Last Updated 29 ಮೇ 2020, 19:44 IST
   

ತೆಪರೇಸಿ ಕನಸಲ್ಲಿ ಇದ್ದಕ್ಕಿದ್ದಂತೆ ದೇವರು ಪ್ರತ್ಯಕ್ಷನಾಗಿ ‘ಭಕ್ತಾ ಹೇಗಿದ್ದೀ’ ಎಂದು ವಿಚಾರಿಸಿದಾಗ ತೆಪರೇಸಿಗೆ ಆಶ್ಚರ್ಯ! ‘ಓ... ಏನಪಾ ದೇವ್ರೂ... ಅದೇನೋ ಆನ್‍ಲೈನ್‍ನಲ್ಲಿ ದರ್ಶನ ಕೊಡ್ತೀಯ ಅಂತಿದ್ರು, ನೀನೇನು ನನ್ನ ಡ್ರೀಮ್‌ಲೈನ್‍ಗೇ ಬಂದ್‍ಬಿಟ್ಟಿದೀಯ?’ ಎಂದ.

‘ಇನ್ನೇನ್ ಮಾಡ್ಲಿ? ಎಲ್ಲ ಸೇರಿ ನನ್ನ ಗುಡಿ ಬಂದ್ ಮಾಡಿದೀರ. ನನ್ ತಲೆ ಮೇಲೆ ಎರಡು ಹೂ ಹಾಕೋರೂ ಇಲ್ಲ ಅಂದ್ರೆ ಹೆಂಗೆ?’ ದೇವರು ಆಕ್ಷೇಪಿಸಿತು.

‘ಇದಪ್ಪಾ ವರಸೆ, ಯ್ಯೋ ದೇವರು... ನಮಗಿಲ್ಲಿ ಹೊಟ್ಟೆಗೇ ಹಿಟ್ಟಿಲ್ಲ, ನಿನಗೆ ಜುಟ್ಟಿಗೆ ಮಲ್ಲಿಗೆ ಬೇಕಾ? ಇಷ್ಟ್ ದಿನ ಪೂಜೆ-ಪುನಸ್ಕಾರ,
ಅಭಿಷೇಕ, ಒಡವೆ-ವಸ್ತ್ರ ಅಂತ ಮಜಾ ಉಡಾಯಿಸ್ಲಿಲ್ವ? ಕೋಟಿಗಟ್ಲೆ ಕಾಣಿಕೆ ಎಣಿಸ್ಲಿಲ್ವ? ಅದೇನೋ ಕೊರೊನಾ ಅಂತ ಅಟಕಾಯಿಸ್ಕಂಡು ನಾವೆಲ್ಲ ಚಪಾಟೆದ್ದು ಹೋಗಿದೀವಿ. ಈ ಟೈಮಲ್ಲೂ ನಿಂಗೆ ಹೂವು ಹಾಕಿ ಊದುಬತ್ತಿ ಬೆಳಗಬೇಕಾ?’ ತೆಪರೇಸಿಗೆ ಕೋಪ ಬಂತು.

ADVERTISEMENT

‘ಅಂದ್ರೆ ಪೂಜೆ ಮಾಡಲ್ವ? ನನ್ನ ಎದುರಾಕ್ಕತೀಯ? ಜೀವ ಉಳಿಸ್ಕತೀಯಾ?’ ದೇವರು ರಾಂಗಾಯಿತು.

‘ಮತ್ತೆ ಈಗೇನು ಬದುಕಿದೀವಾ? ಇಷ್ಟೆಲ್ಲ ರೋಪ್ ಹೊಡಿತೀಯ, ಆ ಕೊರೊನಾ ಓಡ್ಸೋಕಾಗಲ್ವ? ನಂಗೆ ಟೈಮಿಲ್ಲ, ಅಲ್ಲೆಲ್ಲೋ ಕಿಟ್ ಕೊಡ್ತಾರಂತೆ ನಾನು ಹೋಗಬೇಕು, ಇಲ್ಲದಿದ್ರೆ ರಾತ್ರಿ ಉಪವಾಸ ಅಷ್ಟೆ’.

‘ಅದೆಲ್ಲ ಆಗಲ್ಲ, ಮೊದ್ಲು ನನ್ ಬಾಕಿ ತೀರಿಸಿ ಆಮೇಲೆ ಬೇಕಿದ್ರೆ ಹೋಗು’.

‘ಬಾಕಿನಾ? ನಾನ್ಯಾವ ಬಾಕಿ ಕೊಡಬೇಕು ನಿಂಗೆ?’ ತೆಪರೇಸಿಗೂ ಸಿಟ್ಟು ಬಂತು.

‘ನೆನಪು ಮಾಡ್ಕೊ, ನಿನ್ ಮಗನಿಗೆ ಹುಷಾರಿಲ್ಲದಾಗ ನೂರಾ ಒಂದು ರೂಪಾಯಿ ಹರಕೆ ಕಟ್ಕಂಡಿದ್ದೆ. ಒಂದು ವರ್ಷ ಆತು, ತೀರ್ಸಿದೀಯ?’ ದೇವರು ಪ್ರಶ್ನಿಸಿತು.

ತೆಪರೇಸಿಗೆ ಖುಷಿಯೋ ಖುಷಿ! ‘ಅಪ್ಪಾ ತಂದೆ, ಮರೆತೇಬಿಟ್ಟಿದ್ದೆ. ಆ ದುಡ್ಡನ್ನ ಬಟ್ಟೇಲಿ ಕಟ್ಟಿ ನಿನ್ ಫೋಟೊ ಮುಂದೆ ಇಟ್ಟಿದ್ದೆ. ಸದ್ಯ ಇವತ್ತು ಹಾಲಿಗೆ ದುಡ್ಡಿರಲಿಲ್ಲ, ಅದನ್ನೇ ಬಳಸ್ಕೊತೀನಿ. ನಿನ್ ಬಾಕಿನ ಮುಂದಿನ ವರ್ಷ ತೀರಿಸ್ತೀನಿ’ ಎಂದ. ದೇವರು ಪಿಟಿಕ್ಕೆನ್ನದೆ ಮಾಯವಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.