
‘ಮಂಜಮ್ಮ, ಈ ಚಾಟ್ ಜಿಪಿಟಿ ಗೋ ಅಂದ್ರೇನು?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ಅದೇನಂತ ನಮ್ಗೇ ಗೊತ್ತಿಲ್ಲ, ಪಾಪ, ಚಾ ಮಾಡೋ ಮಂಜಮ್ಮಗೆ ಗೊತ್ತಾಕ್ಕತಾ? ನೀನೊಳ್ಳೆ...’ ಗುಡ್ಡೆ ರೇಗಿದ.
‘ಏನ್ ಮಬ್ಬದೀರಲೆ... ಚಾಟ್ ಜಿಪಿಟಿ ಅಂದ್ರೆ ಗೂಗಲ್‌ನ ಅಣ್ಣ ಇದ್ದಂಗೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಏನ್ ಕೇಳಿದ್ರು ಉತ್ತರ ಕೊಡುತ್ತೆ...’ ತೆಪರೇಸಿ ತನ್ನ ಪಾಂಡಿತ್ಯ ಪ್ರದರ್ಶಿಸಿದ.
‘ಏನ್ ಕೇಳಿದ್ರೂ ಉತ್ತರ ಕೊಡುತ್ತಾ? ಬಿಹಾರದಲ್ಲಿ ಯಾರು ಗೆಲ್ತಾರೆ, ನಮ್ಮಲ್ಲಿ ನವೆಂಬರ್ ಕ್ರಾಂತಿ ಆಗುತ್ತಾ, ಬ್ರೆಜಿಲ್ ಹುಡುಗಿ ಹರಿಯಾಣದಲ್ಲಿ ಹೆಂಗೆ ವೋಟ್ ಹಾಕಿದ್ಲು, ಮೈಸೂರು ಹಾಕದೆ ಮೈಸೂರ್ ಪಾಕು, ಮದ್ದೂರು ಹಾಕದೆ ಮದ್ದೂರು ವಡೆ ಹೆಂಗೆ ಮಾಡಬೋದು ಎಲ್ಲ ಹೇಳುತ್ತಾ?’ ಮಂಜಮ್ಮ ಕೇಳಿದಳು.
‘ಹೇಳುತ್ತೆ, ಅದೊಂಥರಾ ಡಾಟಾ ದೇವರಿದ್ದಂಗೆ...’
‘ಅಲೆ ಇವ್ನ… ಅರ್ಜೆಂಟ್ ಸಾಲ ಬೇಕು ಅಂದ್ರೆ ಕೊಡುತ್ತಾ? ಈ ಮಂಜಮ್ಮನ ಬಾಕಿ ಬಿಸಾಕ್ತಿದ್ದೆ ಅತ್ಲಾಗೆ...’ ಎಂದ ಗುಡ್ಡೆ.
‘ಅಲ್ಲ ಈ ಜಿಪಿಟಿ ಪಿಪಿಟಿ ಯಾಕೀಗ?’ ಕೊಟ್ರೇಶಿ ಕೊಕ್ಕೆ.
‘ಯಾಕಂದ್ರೆ ಈ ಚಾಟ್ ಜಿಪಿಟಿ ಗೋ ಅನ್ನೋದನ್ನ ಆ ಕಂಪನಿಯೋರು ಒಂದು ವರ್ಷ ಫ್ರೀ ಕೊಡ್ತಾರಂತೆ...’ ಎಂದ ದುಬ್ಬೀರ.
‘ಆಹಾ... ಫ್ರೀ ಅನ್ನೋದು ಎಲ್ಲಿ ಕಂಡ್ರೂ ಬಿಡಲ್ಲ ನೀನು. ಬಿಹಾರಕ್ಕಾದ್ರು ಹೋಗು, ಅಲ್ಲಿ ವೋಟಿಗೆ ₹35 ಸಾವಿರ ಕೊಡ್ತಾರಂತೆ...’ ಮಂಜಮ್ಮ ನಕ್ಕಳು.
‘ಅದು ಗೆದ್ದ ಮೇಲೆ, ಈಗಲ್ಲ...’ ಎಂದ ತೆಪರೇಸಿ.
‘ಸ್ವಲ್ಪ ಅಡ್ವಾನ್ಸ್ ಕೇಳಿದ್ರಾತಪ...’
‘ಒಳ್ಳೆ ಐಡಿಯಾ... ಅದಿರ್ಲಿ, ಈ ಚಾಟ್ ಜಿಪಿಟಿ ಸರಿ, ಗೋ ಅಂದ್ರೇನು?’ ಗುಡ್ಡೆ ಕೇಳಿದ.
‘ಗೋ ಅಂದ್ರೆ ಇಲ್ಲಿಮಟ ತಾರಾತಿಗಡಿ ಬಾರಾವಿದ್ಯೆ ಮಾತಾಡಿದ್ದು ಸಾಕು, ಎದ್ದು ನಡೀರಿ ಅತ್ಲಾಗೆ ಅಂತ...’
ಮಂಜಮ್ಮನ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.