‘ಬೀದಿನಾಯಿಗಳ ಉಪಟಳ ನಿವಾರಿಸಿ...’ ಎಂದು ಒತ್ತಾಯಿಸಿ ನಾಯಿಭಯ ಸಂಘದವರು ಪ್ರತಿಭಟನೆ ಆರಂಭಿಸಿದ್ದರು. ‘ಬೀದಿನಾಯಿಗಳಿಗೆ ರಕ್ಷಣೆ ನೀಡಿ...’ ಎಂದು ನಾಯಿ ದಯಾ ಸಂಘದವರು ಹೋರಾಟಕ್ಕೆ ಬಂದರು.
‘ದಿನನಿತ್ಯ ನಾಯಿ ಕಚ್ಚುವ ಪ್ರಕರಣಗಳು ಹೆಚ್ಚಾಗುತ್ತಿವೆ...’ ಅಧಿಕಾರಿ ವರದಿ ಓದಿದರು.
‘ಹಾಗೇ, ಜನರು ನಾಯಿಗಳನ್ನು ಚಚ್ಚುವ ಪ್ರಕರಣಗಳನ್ನೂ ದಾಖಲು ಮಾಡಿ’ ಎಂದರು ದಯಾ ಸಂಘದವರು. ಎರಡೂ ಕಡೆಯವರು ವಾದಕ್ಕಿಳಿದರು.
‘ಬೀದಿನಾಯಿಗಳ ಬೊಗಳಾಟದಿಂದ ನಮಗೆ ರಾತ್ರಿ ನಿದ್ರೆ ಬರುತ್ತಿಲ್ಲ’.
‘ನಾಯಿ ಬೊಗಳಾಡಿದರೆ ಕಳ್ಳರು ಬರುವುದಿಲ್ಲ’.
‘ಗೋಶಾಲೆಯಂತೆ ಸರ್ಕಾರ ಊರ ಹೊರಗೆ ನಾಯಿಶಾಲೆ ತೆರೆದು ನಾಯಿಗಳಿಗೆ ನೆಲೆ ನೀಡಲಿ’.
‘ನೆಲೆ ಬೇಡ, ಉದ್ಯೋಗ ಕೊಟ್ಟರೆ ನಾಯಿಗಳು ತಮ್ಮ ಕಾಲ ಮೇಲೆ ತಾವು ನಿಂತುಕೊಂಡು
ಸ್ವಾವಲಂಬಿಗಳಾಗಿ ಬಾಳುತ್ತವೆ’.
‘ಎಜುಕೇಷನ್ ಇಲ್ಲದ ನಾಯಿಗಳು ಏನು ಉದ್ಯೋಗ ಮಾಡ್ತವೆ?!’
‘ಮನೆ, ಕಚೇರಿ ಕಾವಲಿಗೆ ನಾಯಿಗಳನ್ನು ನೇಮಿಸಿಕೊಳ್ಳಲಿ. ಸಂಬಳ ಬೇಡ, ಊಟ ಕೊಟ್ಟರೆ ಸಾಕು. ನೀವೂ ಬೀದಿನಾಯಿಗಳನ್ನು ಸಾಕಿರಿ’.
‘ಹಸುಗಳನ್ನು ಸಾಕಿದರೆ ಹಾಲು ಕೊಡುತ್ತವೆ, ನಾಯಿಗಳು ಏನು ಕೊಡುತ್ತವೆ?’
‘ಜೀವ ಕೊಡುತ್ತವೆ, ಮೊನ್ನೆ ಊರಿಗೆ ನುಗ್ಗಿದ್ದ ಚಿರತೆಯನ್ನು ಬೀದಿನಾಯಿಗಳು ಓಡಿಸಿ ಎಲ್ಲರನ್ನೂ ರಕ್ಷಿಸಿದ್ದವು... ನಾನು ಬೀದಿನಾಯಿ ಸಾಕಿದ್ದೇನೆ, ಅದು ನನ್ನ ಮಗಳನ್ನು ಕರೆದುಕೊಂಡು ಹೋಗಿ ಸ್ಕೂಲ್ ಬಸ್ ಹತ್ತಿಸುತ್ತದೆ, ಸಂಜೆ ಕರೆದುಕೊಂಡು ಬರುತ್ತದೆ’ ಎಂದ ಒಬ್ಬ.
‘ನಮ್ಮ ನಾಯಿ ಕೊರಳಿಗೆ ಬ್ಯಾಗ್ ನೇತುಹಾಕಿದರೆ ಸಾಕು, ಅಂಗಡಿಗೆ ಹೋಗಿ ಹಾಲು, ತರಕಾರಿ ತರುತ್ತದೆ’ ಎಂದ ಇನ್ನೊಬ್ಬ.
ಎರಡೂ ಸಂಘಗಳವರ ಮನವಿಪತ್ರ ಸ್ವೀಕರಿಸಿದ ಅಧಿಕಾರಿ, ‘ಸರ್ಕಾರಕ್ಕೆ ಕಳುಹಿಸುತ್ತೇನೆ, ನಾಯಿಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ, ಸರ್ಕಾರ ನ್ಯಾಯಯುತ ತೀರ್ಮಾನ
ತೆಗೆದುಕೊಳ್ಳುತ್ತದೆ...’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.