‘ನಮಸ್ಕಾರ ಸಾ. ನಾವು ಜಾತಿಗಣತೀಗೆ ಬಂದುದವಿ. ಒಂದಷ್ಟು ಪ್ರಶ್ನೆಗೆ ಉತ್ತರ ಕೊಡಿ. ನಿಮ್ದು ಯಾವ ಜಾತಿ ಸಾ?’
‘ನಾನೂ ಅಡ್ಬಿದ್ದೆ. ನಮ್ಮ ಜಾತಿರತ್ನಗಳಾದ ಸ್ವಾಮಿಗೋಳು, ನಾಯಕರು ಹೇಳಿದ್ದೇ ದಿಟವಾದ ಕೋಡು. ಅದ್ನೇ ಬರ್ಕಳಿ. ಎಲ್ಲಾ ಅನುಕೂಲ ಅವರಿಗೆ. ನಮಗೆ ನಾಯಿಕೆಮ್ಮಲು’.
‘ಶಿಕ್ಷಣ, ಆದಾಯ ಎಷ್ಟು ಸಾ?’
‘ಎರಡೆಮ್ಮೆ ಕಟ್ಟಿದ್ದೆ ಕಪ್ಪಾ. ಎರಡೂ ಬರ್ಕತ್ತಾಗಲಿಲ್ಲ. ಪಿಂಚಣಿ ಟೈಮಾದ್ರೂ ಇನ್ನೂ ಅತಿಥಿ ಉಪನ್ಯಾಸಕನಾಗಿವ್ನಿ. ಆರು ತಿಂಗಳಿಗೊಂದ್ಸಾರಿ ಗೌರವಧನದ ಕಾಸು ಬತ್ತದೆ ಕಯ್ಯಾ’.
‘ವೋಟರ್ ಐಡಿ ಅದಾ ಸಾ?’
‘ನೀನು ದಿಗಿಲಿಕ್ಕಿಸಬ್ಯಾಡ ಸುಮ್ಮಗಿರಪ್ಪೋ. ಐಡಿ ಏನೋ ಅದೆ. ಆದ್ರೆ ಮತವೇ ಕದ್ದುಕೋಗವ್ರಂತಲ್ಲ?’
‘ಅಂಗವೈಕಲ್ಯ?’
‘ಕ್ರೇಟರ್ ಬೆಂಗಳೂರು ಗುಂಡಿಯಿಂದ ರಸ್ತೆ ವೈಕಲ್ಯವಾಗಿ ಸೊಂಟ ಉಳುಕ್ಯದೆ. ನಾಯಕರು ರೋಡು ಇರೋದೇ ಹಿಂಗೆ, ಇರೋದಾದ್ರೆ ಇರ‍್ರೀ ಹೋಗೋದಾದ್ರೆ ಹೋಗ್ರಿ ಅಂದವ್ರೆ’.
‘ಮನೆ ಸ್ವಂತದ್ದಾ ಸಾ?’
‘ಬಾಡಿಗೇದು ಕಯ್ಯಾ. ಸ್ವಂತ ಮನೆ ಕಟ್ಟಿವ್ನಿ. ಆದರೆ ಓಸಿ, ಸಿಸಿ ಇಲ್ಲ ಅಂತ ಸರ್ಕಾರ ಕರಂಟು, ನೀರು ಕೊಟ್ಟಿಲ್ಲ. ಬಾಡಿಗೆ ಮನೇಲೂವೆ ವಿದ್ಯುತ್ತು, ನೀರಿಂದೇ ತೊಂದ್ರೆ ಕಯ್ಯಾ’.
‘ನಿಮ್ಮದು ಜಮೀನು ಎಷ್ಟದೆ ಸಾ?’
‘ಮಾಡೋರಿಲ್ಲದೇ ಭೂಮಿ ಪಾಳು ಬಿದ್ದದೆ. ಕೂಲಿಕಾರರು ಗ್ಯಾರಂಟಿ ಮಜಾ ತಕ್ಕತಿರದ್ರಿಂದ ಕೆಲಸಕ್ಕೆ ಯಾರೂ ಬತ್ತಿಲ್ಲ’.
‘ಪಶುಪಾಲನೆ ಮಾಡ್ತಿದ್ದೀರಾ?’
‘ಮಗಳು ಹೆರಿಗೇಗೆ ಬಂದವುಳೆ. ಸದ್ಯಕ್ಕೆ ಶಿಶುಪಾಲನೆ ಮಾಡ್ತಿವ್ನಿ’.
‘ಸರ್ಕಾರದ ಯೋಜನೆಗಳೇನಾದ್ರೂ ಬಳಸಿಕ್ಯಂದಿದೀರಾ?’
‘ರೇಷನ್ ಕಾರ್ಡಿಲ್ಲ. ಬಿಪಿಎಲ್, ಎಪಿಎಲ್ಲಿನಲ್ಲೂ ನಾವಿಲ್ಲ’.
‘ಮನೇಲಿ ಏನೇನು ಉಪಕರಣಗಳವೆ ಸಾ?’
‘ಟೀವಿ, ಫ್ರಿಜ್ಜು, ಕಂಪ್ಯೂಟರು, ಮೊಬೈಲು, ಸ್ಕೂಟರು ಎಲ್ಲಾನೂ ಸಾಲದ ಕಂತಲ್ಲಿ ತಂದಿರೋ ಕಂತುಪಿತ ಕನಪ್ಪಾ ನಾನು’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.