ADVERTISEMENT

ಚುರುಮುರಿ | ಯಶಸ್ಸಿನ ಕ್ರೆಡಿಟ್ 

ಗುರು ಪಿ.ಎಸ್‌
Published 15 ಮೇ 2025, 0:30 IST
Last Updated 15 ಮೇ 2025, 0:30 IST
   

‘ಸಿಬಿಎಸ್‌ಇ ಸಿಲಬಸ್‌ ಟಫ್‌ ಆಗಿದ್ದರೂ ನನ್ನ ಮಗಳು ಎಸ್‌ಎಸ್‌ಎಲ್‌ಸಿಯಲ್ಲಿ ಎಷ್ಟೊಂದ್‌ ಮಾರ್ಕ್ಸ್‌ ತೆಗೆದಿದ್ದಾಳೆ ನೋಡು’ ಹೆಂಡತಿಗೆ ಹೆಮ್ಮೆಯಿಂದ ಹೇಳಿದೆ. 

‘ನಿಮ್ಮ ಮಗಳು ಮಾತ್ರವಾ? ನನ್ನ ಮಗಳೂ ಹೌದಲ್ವಾ?’ 

‘ನಿನ್ನ ಮಗಳೂ ಇರಬಹುದು, ಆದರೆ ಬುದ್ಧಿವಂತಿಕೆಯೆಲ್ಲಾ ನನ್ನಂಗೆ’ ಎಂದೆ.

ADVERTISEMENT

‘ನೀವೇನ್ರೀ, ಟ್ರಂಪ್‌ ಥರ ಆಡ್ತಿದ್ದೀರ. ಭಾರತ-ಪಾಕಿಸ್ತಾನ ಯುದ್ಧ ತಡೆದಿದ್ದು ನಾನೇ ಅಂತ ಆತ ಕ್ರೆಡಿಟ್‌ ತಗೊಂಡಂಗಾಯ್ತಿದು’ ಎಂದು ವ್ಯಂಗ್ಯವಾಡಿದ ಹೆಂಡತಿ, ‘ನಾನು ಮನೆಯಲ್ಲಿ ಚೆನ್ನಾಗಿ ಹೇಳಿಕೊಟ್ಟಿದ್ದರಿಂದಲೇ ಒಳ್ಳೆಯ ಮಾರ್ಕ್ಸ್‌ ಬಂದಿದೆ ಗೊತ್ತಾ?’ ಎಂದಳು. 

‘ಹಾಗೇನಿಲ್ಲ, ನನ್ನ ಮಗಳಿಗೆ ನನ್ನ ಜೀನ್ಸ್ ಬಂದಿದೆ, ನಮ್ಮ ವಂಶದಲ್ಲಿ ಎಲ್ಲ ಬುದ್ಧಿವಂತರೇ’.

‘1971ರಲ್ಲಿ ಪಾಕ್ ಮೇಲಿನ ವಿಜಯ, ಬ್ರಹ್ಮೋಸ್ ಕ್ಷಿಪಣಿ ಸಾಮರ್ಥ್ಯ, ಇಸ್ರೊ ಸಾಧನೆಗೆಲ್ಲ ತಮ್ಮ ಪಕ್ಷವೇ ಕಾರಣ ಅಂತ ಕಾಂಗ್ರೆಸ್‌ನವರು, ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಕ್ಕೆ ಬಿಜೆಪಿಯವರು ಕ್ರೆಡಿಟ್ ತಗೊಂಡಂಗಾಯ್ತು ಇದು. ನಾನು ಒಳ್ಳೆಯ ಊಟ ಉಣಿಸಿ, ಮಗಳನ್ನ ಚೆನ್ನಾಗಿ ನೋಡ್ಕೊಂಡಿ
ರೋದ್ರಿಂದ ಹೆಚ್ಚು ಅಂಕ ತಗೊಂಡಿದ್ದಾಳೆ’. 

‘ಯುದ್ಧ ಮಾಡಿದ ಸೈನಿಕರ ಬದಲು ಪಕ್ಷಗಳೇ ಎಲ್ಲ ಕ್ರೆಡಿಟ್ ತಗೊಂಡಂಗೆ, ಪಾಠ ಹೇಳಿಕೊಟ್ಟ ಶಿಕ್ಷಕರನ್ನ ಬಿಟ್ಟು ನೀನೇ ಎಲ್ಲ ಕ್ರೆಡಿಟ್ ತಗೊಳ್ತಿದ್ದೀಯಲ್ಲಮ್ಮ’.

‘ಹೀಗೆ ಎಲ್ಲರೂ ಕ್ರೆಡಿಟ್ ತಗೊಳ್ತಿರೋದ್ರಿಂದಲೇ ಪಾಕಿಸ್ತಾನ ಒಳಗಿಂದೊಳಗೇ ಐಎಂಎಫ್‌ನಿಂದ ‘ಕ್ರೆಡಿಟ್’ ತಗೊಂಡು ಬದುಕ್ಕೊಳ್ತು. ಇಲ್ಲದಿದ್ದರೆ ನಮ್ಮ ಸೈನಿಕರು ಆ ದೇಶವನ್ನ ಇಷ್ಟೊತ್ತಿಗೆ ಬೀದಿಪಾಲು ಮಾಡಿರೋರು. ಅದು ಹೋಗ್ಲಿ, ಮಗಳಿಗೆ ಮುಂದೆ ಯಾವ ವಿಭಾಗಕ್ಕೆ ಸೇರಿಸಬೇಕು ಅನ್ನೋದನ್ನ ಚರ್ಚೆ ಮಾಡೋಣ ಬನ್ನಿ’. 

‘ರಾತ್ರಿ 8ಕ್ಕೆ ಮಾತಾಡ್ತೀನಿ’.

‘ಮಾತಾಡೋದಲ್ಲ ಚರ್ಚೆ ಮಾಡೋಣ’. 

‘ಚರ್ಚೆ ಮಾಡೋದು, ಪ್ರಶ್ನೆ ಕೇಳೋದು ಏನಿಲ್ಲ. ನಾನು ಮಾತಾಡ್ತೀನಿ, ನೀನು ಕೇಳಿಸ್ಕೊಬೇಕಷ್ಟೇ’. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.