ADVERTISEMENT

ಚುರುಮುರಿ: ಕುರ್ಚಿ ರಿಪೇರಿ

ಮಣ್ಣೆ ರಾಜು
Published 28 ಅಕ್ಟೋಬರ್ 2020, 19:31 IST
Last Updated 28 ಅಕ್ಟೋಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕುರ್ಚಿಯಲ್ಲಿ ವಿರಾಜಮಾನರಾಗಿ ಕುಳಿತಿದ್ದ ರಾಜಾಹುಲಿ ಮಹಾರಾಜರಿಗೆ ಕಿರಿಕಿರಿಯ ಅನುಭವವಾಯಿತು.‌

‘ಮಂತ್ರಿಗಳೇ, ಯಾಕೋ ಕುರ್ಚಿ ಶೇಕ್ ಆಗ್ತಿದೆ, ಚೆಕ್ ಮಾಡಿ’ ಎಂದರು.

ಕುರ್ಚಿ ಕಾಲು ಚೆಕ್ ಮಾಡಿದ ಮಂತ್ರಿ, ‘ಪ್ರಭು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ದಿಕ್ಕಿನ ಕಾಲುಗಳು ಅಲ್ಲಾಡುತ್ತಿವೆ’ ಎಂದರು.

ADVERTISEMENT

‘ಯಾಕೆ ಹೀಗಾಯ್ತು? ಯಾರಾದರೂ ಕಾಲು ಎಳೆಯುತ್ತಿದ್ದಾರೆಯೇ?!’

‘ಪ್ರವಾಹದ ಥಂಡಿಗೆ ಹೀಗಾಗಿದೆ. ಮಳೆ ಕಡಿಮೆಯಾದ ಮೇಲೆ ಒಂದು ಮೊಳೆ ಹೊಡೆದರೆ ಕಾಲುಗಳು ಭದ್ರವಾಗುತ್ತವೆ ಬಿಡಿ...’

‘ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ ದಿಕ್ಕಿನ ಕಾಲುಗಳು ಅಲ್ಲಾಡುತ್ತಿಲ್ಲ ತಾನೇ?’ ರಾಜಾಹುಲಿ ಕೇಳಿದರು.

ಆ ಕಾಲುಗಳನ್ನು ಮಂತ್ರಿ ಅಲ್ಲಾಡಿಸಿ ನೋಡಿದರು, ‘ಇಲ್ಲ ಪ್ರಭು, ಸದ್ಯಕ್ಕೆ ಬಿಗಿಯಾಗಿವೆ, ಆದರೂ ದೀರ್ಘ ಬಾಳಿಕೆ ಬರುವುದು ಡೌಟು...’

‘ಕುರ್ಚಿಯ ಎಕ್ಸ್‌ಪೈರಿ ಡೇಟು ಇನ್ನೂ ಎರಡೂ ಮುಕ್ಕಾಲು ವರ್ಷ ಬಾಕಿ ಇದೆ, ಗ್ಯಾರಂಟಿ ಪಿರಿಯಡ್ಡೂ ಮುಗಿದಿಲ್ಲ. ಇಷ್ಟು ಬೇಗ ಕುರ್ಚಿಗೆ ಕಂಟಕ ಬಂದುಬಿಟ್ಟಿತೇ...’ ರಾಜಾಹುಲಿಯವರಿಗೆ ಅರ್ಥವಾಗಲಿಲ್ಲ.

‘ಹುಷಾರು ಪ್ರಭು, ಕುರ್ಚಿ ಕುಸಿದರೆ ಕಷ್ಟ, ಮತ್ತೆ ನಿಮ್ಮನ್ನು ಕೂರಿಸುವವರು ಯಾರೂ ಇಲ್ಲ’.

‘ಕುರ್ಚಿ ರಿಪೇರಿ ತಜ್ಞರನ್ನು ಕರೆಸಿ’.

‘ದೆಹಲಿಯ ತಜ್ಞರನ್ನು ಕರೆಸಿ ರಿಪೇರಿ ಮಾಡಿಸೋಣವೇ ಪ್ರಭು?’

‘ಬೇಡ ಬೇಡ, ಕುರ್ಚಿಯನ್ನು ನಿಭಾಯಿಸುವ ಸಾಮರ್ಥ್ಯ ಇಲ್ಲ ಅಂತ ಅವರು ಆರೋಪ ಮಾಡಬಹುದು, ನಾವೇ ರಿಪೇರಿ ಮಾಡಿಕೊಳ್ಳೋಣ’.

‘ಕುರ್ಚಿ ರಿಪೇರಿ ಸುಲಭ ಪ್ರಭು... ಅನುದಾನದ ಅಂಟು ಹಾಕಿ, ಸಾಂತ್ವನದ ಗಂಟು ಕಟ್ಟಿದರೆ ಕುರ್ಚಿ ಕಾಲುಗಳು ಇನ್ನಷ್ಟು ಕಾಲ ಗಟ್ಟಿಯಾಗಿರುತ್ತವೆ...’ ಎಂದರು ಮಂತ್ರಿ.

‘ಇದನ್ನು ಹೇಳೋಕೆ ನೀವೇ ಬೇಕಾ, ಹೇಗೆ ರಿಪೇರಿ ಮಾಡಿಕೊಳ್ಳಬೇಕು ಅಂತ ನನಗೂ ಗೊತ್ತು ಹೋಗ್ರೀ...’ ಎಂದು ರಾಜಾಹುಲಿ ಮುಖ ಗಂಟು ಹಾಕಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.