ADVERTISEMENT

ಕಾಂಟ್ರವರ್ಸಿ ಕೋರ್ಸ್

ಗುರು ಪಿ.ಎಸ್‌
Published 16 ಏಪ್ರಿಲ್ 2019, 20:16 IST
Last Updated 16 ಏಪ್ರಿಲ್ 2019, 20:16 IST
   

‘ಇಲ್ಲಿ ಕಾಂಟ್ರವರ್ಸಿ ಕೋರ್ಸ್ ಕಲಿಸಲಾಗುತ್ತದೆ’ ಎಂಬ ಬೋರ್ಡ್ ವಿಜಿಯ ಕುತೂಹಲ ಕೆರಳಿಸ್ತು. ಡಿಗ್ರಿ ಮಾಡಿದ್ರೂ ಕೆಲಸ ಸಿಗ್ತಿಲ್ಲ. ಎಲೆಕ್ಷನ್‌ಗಾದ್ರೂ ನಿಂತು ಎಂಪಿ ಆಗ್‌ಬಿಡೋಣ ಅಂದ್ಕೊಂಡಿದ್ದ ವಿಜಿ, ಆ ಕೋಚಿಂಗ್ ಸೆಂಟರ್ ಒಳಗೋದ.

ಲೆಕ್ಚರರ್‌ಗಳು ಒಬ್ಬೊಬ್ಬರಾಗಿ ಕ್ಲಾಸ್ ತಗೊಳ್ತಿದ್ರು. ‘ನೀವು ಊರೊಳಗೊಂದು ಟಾಯ್ಲೆಟ್ ಕಟ್ಟಿಸಿರದಿದ್ದರೂ ಪರವಾಗಿಲ್ಲ. ನಿಮ್ಮ ಬಾಯಿ ಬಚ್ಚಲ ಮನೆ ಆಗಿರಬೇಕು. ದಟ್ ಮೀನ್ಸ್, ಗಲೀಜನ್ನೆಲ್ಲ ನಾಲಿಗೆಯಿಂದ ಹೊರ ಹಾಕ್ತಿರಬೇಕು’ ಪ್ರೊ. ಅಜ್ಜಂ ಖೂನ್ ಹೇಳ್ತಿದ್ರು.

ತುಂಬಿದ ಕ್ಲಾಸ್‌ನಲ್ಲಿ ಬರೀ ಚಡ್ಡಿಯಲ್ಲೇ ನಿಂತಿದ್ರಿಂದ, ಈ ಪ್ರೊಫೆಸರ್ ಗಲೀಜನ್ನೆಲ್ಲ ತನ್ನ ತಲೆಯೊಳಗೇ ತುಂಬ್ಕೊಂಡಿದಾನೆ ಅಂತನಸ್ತು.

ADVERTISEMENT

‘ಎಲೆಕ್ಷನ್‌ನಲ್ಲಿ ಬ್ಲಡ್ ರಿಲೇಷನ್‌ಶಿಪ್’ ಕುರಿತು ಕ್ಲಾಸ್ ತಗೊಂಡಿದ್ರು ಚೀಟಿ ರವಿ ಸಾರ್. ‘ಈ ರವಿ ಯಾಕೆ ಬ್ಲಡ್ ರಿಲೇಷನ್‌ಶಿಪ್ ಬಗ್ಗೆನೇ ಮಾತಾಡ್ತಿರ್ತಾರೆ, ಅಂಥಾ ಗಂಡಂದ್ರು, ಇಂಥಾ ಗಂಡಂದ್ರು ಅಂತಿರ್ತಾರೆ’ ಪಕ್ಕದವನನ್ನ ವಿಜಿ ಕೇಳ್ದ. ‘ಅವರಿಗೆ ಗುಡ್‌ ರಿಲೇಷನ್‌ಶಿಪ್ ಬಗ್ಗೆ ಗೊತ್ತಿಲ್ಲ. ಬ್ಲಡ್ ರಿಲೇಷನ್‌ಶಿಪ್ ಬಗ್ಗೆ ಮಾತ್ರ ಗೊತ್ತಿರೋದು’ ಫಟ್ ಅಂತಾ ಉತ್ತರ ಬಂತು.

‘ನೀವ್ ನಮಗೇ ವೋಟ್ ಹಾಕ್ಬೇಕ್‌‌... ಇಲ್ದಿದ್ರೆ ಗೊತ್ತಲ್ಲ ಅಂತಾ ಹೆದರಿಸ್ಬೇಕು. ಆಗ ನೋಡಿ ಹೆಂಗ್ ಬೀಳ್ತಾವೆ ಮತ’ ಅಂತಾ ನಕ್ರು ಮೋನಿಕಾ ಗಂಧಿ ಮಿಸ್ಸು.

ಒದೆ ಬೀಳದಿದ್ರೆ ಸಾಕು ಅಂದ್ಕೊಂಡು ಮುಂದಿನ ಕ್ಲಾಸ್‌ಗೆ ಹೋದ ವಿಜಿ.

‘ಅಲಿ, ಬಾಹುಬಲಿ, ಭಜರಂಗ ಬಲಿ’ ಎನ್ನುತ್ತಾ ಗಲಿಬಿಲಿಯಲ್ಲೇ ಪಾಠ ಮಾಡ್ತಿದ್ರು ಯೋಗಿ ಮೇಷ್ಟ್ರು. ‘ಅಲಿ, ಭಜರಂಗ ಬಲಿ ಚೆನ್ನಾಗೇ ಇದ್ರಲ್ಲ. ಈ ಸನ್ಯಾಸಿಗೇಕೆ ಸಂಸಾರದ ಚಿಂತೆ’ ಅಂದ್ಕೊಂಡು ವಿಜಿ ಹೊರಗೆ ಬರ್ತಿದ್ದಂತೆ ಪ್ರಿನ್ಸಿಪಾಲ್ ಓಡಿಬಂದ್ರು.

‘ಈ ಕೋರ್ಸ್ ಸದ್ಯಕ್ಕೆ ಬ್ಯಾನ್ ಮಾಡಿದ್ದಾರೆ. ಮೂರು ದಿನ ನೀವ್ಯಾರೂ ಮಾತಾಡಂಗಿಲ್ಲ’ ಅಂತಾ ಲೆಕ್ಚರರ್ಸ್‌ಗೆ ವಾರ್ನಿಂಗ್ ಕೊಟ್ರು. ಅಲ್ಲದೆ, ‘ಕೈ ಕಟ್, ಬಾಯ್ಮುಚ್’ ಅಂದ್ರು. ‘ಕಟ್ ಅಂದ್ರೆ ಯಾರನ್ನ ಕತ್ತರಿಸಲಿ’ ತೋಳೇರಿಸಿಕೊಂಡು ಮುಂದೆ ಬಂದೇ ಬಿಟ್ರು ಚೀಟಿ ರವಿ ಸಾರು.

‘ಇವರಿಂದ ನಾವ್ ಪಾಠ ಕಲಿಯೋದಲ್ಲ. ಮಕ್ಕಳಿಂದ ಇವರಿಗೆ ಪಾಠ ಕಲಿಸಬೇಕು’ ಎಂದುಕೊಳ್ಳುತ್ತಾ ಹೊರ ಬಂದ ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.