ADVERTISEMENT

ಹೊಸ ಇತಿಹಾಸ

ಸುಮಂಗಲಾ
Published 3 ನವೆಂಬರ್ 2019, 19:46 IST
Last Updated 3 ನವೆಂಬರ್ 2019, 19:46 IST
.
.   

ಗೆಳತಿಯ ಮಗಳು ಬಹಳ ಖುಷಿಯಲ್ಲಿದ್ದಳು. ‘ನಾವೆಲ್ಲ ಮೈಸೂರು ಹುಲಿ ಟಿಪ್ಪು ಅಂತ ಸುಳ್ಳುಪಳ್ಳು ಇತಿಹಾಸ ಓದಿದ್ವಿ. ಸ್ಕೂಲು ಪುಸ್ತಕದಾಗ ಆ ಪಾಠನೇ ಕೈಬಿಡೂದಂತ ನಮ್ಮೋರು ಕೆಚ್ಚೆದೆಯಿಂದ ಹೇಳ್ಯಾರ. ಇನ್ನರ ಖರೇ ಹುಲಿ ಯಾರಂತ ನಮ್ಮ ಮಕ್ಕಳಿಗಿ ಗೊತ್ತಾಗತೈತಿ’ ಹೆಮ್ಮೆಯಿಂದ ಉಲಿದಳು.

‘ಆತವ್ವಾ... ಪಾಠದಾಗೇನೋ ತೆಗೆದುಹಾಕ್ಕೀರಿ. ಆದ್ರೆ ಲಾಲ್‌ಬಾಗ್ ಉದ್ಯಾನ, ಮೈಸೂರು ರೇಷ್ಮೆ, ದೇಸೀ ಕ್ಷಿಪಣಿ, ಸ್ವತಂತ್ರ ಮೈಸೂರು ರಾಜ್ಯಕ್ಕಾಗಿ ಬ್ರಿಟಿಷರೊಂದಿಗೆ ಯುದ್ಧ, ಇದ್ನೆಲ್ಲ ಯಾರು ಮದ್ಲು ಮಾಡಿದ್ರು ಅನ್ನೋ ಪ್ರಶ್ನೆಗಿ ಟಿಪ್ಪು ಅಂತ ಉತ್ತರ ಬರತೈತಿ. ಆವಾಗನೂ ಮಕ್ಕಳಿಗೆ ಸತ್ಯ ಹೇಳೂದು ಬ್ಯಾಡೇನು?’

‘ಹೆಸರು ಎದಕ್ಕ ಹೇಳಬೇಕ್ರೀ ಆಂಟಿ... ಅಂವ ಏನ್ ಸ್ವಂತದ್ ರೊಕ್ಕದಾಗ ಅವ್ನೆಲ್ಲ ಮಾಡ್ಯಾನೇನ್ರಿ. ಅರಮನೆ ಖಜಾನೆ ರೊಕ್ಕದಿಂದ ಮಾಡ್ಯಾನ. ರೇಷ್ಮೆ, ಕ್ಷಿಪಣಿ ಎಲ್ಲ ನಮ್ಮಲ್ಲಿ ವೇದಕಾಲದಿಂದ ಅದಾವು. ಮತ್ತ ಈಗಿನವ್ರು ಹಂತಾ ಇತಿಹಾಸದ ಪ್ರಶ್ನಿ ಕೇಳಂಗಿಲ್ರೀ. ಯಾರು ಮತಾಂತರ ಮಾಡಿದ್ರು, ಎಷ್ಟ್ ದೇವಸ್ಥಾನ ಯಾರು ಲೂಟಿ ಮಾಡಿದ್ರು ಅನ್ನೂ ಪ್ರಶ್ನಿ ಕೇಳತಾರ’ ನನ್ನತ್ತ ವಕ್ರನಗು ಬೀರಿದಳು.

ADVERTISEMENT

‘ಯಾರು ಅಂತ ಕೇಳೂ ಮುಂದ ಎದಕ್ಕ ಮಾಡಿದ್ರು, ಆಗಿನ ರಾಜಕೀಯ ಪರಿಸ್ಥಿತಿ ಹೆಂಗಿತ್ತು ಅಂತ ಕೇಳಂಗಿಲ್ಲೇನ್’ ಎಂದೆ.

‘ಅದ್ನೆಲ್ಲ ಕೇಳಾಕ, ಹೇಳಾಕ ಇದೇನ್ ಹರಿಕಥಿಯಲ್ರಿ. ಈಗೇನಿದ್ರೂ ‘ಯಾರು’ ಅನ್ನೋ ಒಂದು ಸಾಲಿನ ಉತ್ತರದ ಪ್ರಶ್ನೆಗಳು ಮಾತ್ರ. ವಿಶ್ವದಲ್ಲೇ ಅತಿ ಎತ್ತರದ ಏಕತಾ ಪ್ರತಿಮೆ, 370ನೇ ವಿಧಿ ರದ್ದತಿ, ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ರತ್ನಗಂಬಳಿ, ಪಿಒಕೆ ಸೇರಿಸಿ ಭಾರತದ ಹೊಸ ನಕಾಶೆ, ಇದ್ನೆಲ್ಲ ಮಾಡಿದ ಚಪ್ಪನ್ನೈವತ್ತಾರು ಇಂಚಿನ ಉಕ್ಕಿನೆದೆಯವರು ಯಾರು? ಸಾಲಿ ಮಕ್ಕಳಿಗೆ ರೊಟ್ಟಿ, ಉಪ್ಪು ಕೊಟ್ಟು, ನೂರಮೂವತ್ತಮೂರು ಕೋಟಿ ರೊಕ್ಕದಲ್ಲಿ ಗಿನ್ನಿಸ್ ದಾಖಲೆ ದೀಪೋತ್ಸವ ಮಾಡಿದ್ದು ಯಾರು? ಇಂಥಾ ಹಿರಿಮೆಗಳನ್ನು ಇತಿಹಾಸದಲ್ಲಿ ಸೇರಿಸಬೇಕ್ರಿ’ ಎನ್ನುತ್ತ ಹೊಸ ಇತಿಹಾಸದ ‘ಕ್ಷಿಪಣಿ’ ಹಾರಿಸಿದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.