ADVERTISEMENT

ಬಲಿದಾನದ ಕಥೆ

ಲಿಂಗರಾಜು ಡಿ.ಎಸ್
Published 4 ನವೆಂಬರ್ 2019, 20:03 IST
Last Updated 4 ನವೆಂಬರ್ 2019, 20:03 IST
   

‘ಇದೇನ್ಸಾರ್ ಸಿಎಂ ಸಾಯೆಬ್ರಿಗೆ ಈ ಪಾಟಿ ಕಷ್ಟ ಬತ್ತಾ ಅದೆ! ಒಳ್ಳೇರಿಗೆ ಕಾಲ ಅಲ್ಲ ಸಾ. ಪಾಪ ಇವರೇ ಹೋಗಿ ತಂತಿಮ್ಯಾಲೆ ಕುತುಗಂಡ್ರಲ್ಲಾ ಸಾರ್!’ ಅಂದೆ. ‘ಹ್ಞೂಂ ಕನೋ ಸಿಎಮ್ಮಾಗಿ ನೈಂಟಿ ದಾಟಿದ್ರೂ ನೆಮ್ಮದಿಯಾಗಿ ಆಡಳಿತ ಮಾಡಕ್ಕಾಯ್ತಿಲ್ಲ’ ಅಂದ್ರು ತುರೇಮಣೆ.

‘ಹ್ಞೂಂಕನೇಳಿ ಸಾ ಕಾಂಗೈಗಳು, ಸ್ವಪಕ್ಷೀಯರು ಸುತ್ತಲೂ ಕಾಯ್ತಾ ನಿಂತವುರೆ. ಕುಮಾರಣ್ಣ ಕೈಮ್ಯಾಲೆ ಟವಲ್ ಮುಚ್ಚಿಕ್ಯಂದು ಯಡೂರಪ್ಪಾರ ಬೆಳ್ಳಿಡ್ದು ದನೀನ ವ್ಯಾಪಾರಕ್ಕೆ ನಿಂತವರೆ! ಇದು ಸಾಲದು ಅಂತ ಹುಬ್ಳಿ ಆಡಿಯೊ, ಸ್ವಾಮುಗೋಳ ಧಮಕಿ, ಅನರ್ಹರ ನೋವು, ಅರ್ಧರಾತ್ರೀಲಿ ಎದ್ದು ಡಿಸಿಎಂ ಆದೋರ ಆವೇಶ ಒಂದಾ ಎರಡಾ!’ ಅಂದೆ. ‘ಹ್ಞೂಂ ಕನಯ್ಯಾ ಎಲ್ಲಾ ಸೇರಿಕ್ಯಂಡು ಅವರಿಗೆ ಇನ್ನಿಲ್ಲದಂಗೆ ಚುಚ್ಚಿ ಚುಚ್ಚಿ ಚುಚ್ಚಿ ಚುಚ್ಚಿ ಶಾನೆ ನೋವು ಕೊಡತಾವರೆ’ ಅಂತ ಉಸೂರಂದ್ರು.

‘ಸಾರ್ ಸ್ಕೂಲಲ್ಲಿ ಟಿಪ್ಪು ಪಾಠ ತಗದಾಕ್ತೀವಿ ಅಂದುದ್ದೂ ಎಡವಟ್ಟಾಗಿಬುಟ್ಟದೆ. ಟಿಪ್ಪು ಪಾಠ ತೆಗೆದ್ರೆ ಅದೇ ಥರದ ಸ್ವಾತಂತ್ರ ಹೋರಾಟಗಾರರ ಜೀವನದ ಕಥೆ ಸೇರಿಸಬಕು ಸಾ’ ಅಂದೆ.

ADVERTISEMENT

‘ಹ್ಞೂಂ ದಿಟ ಕನೇಳ್ಲಾ, ಆದ್ರೆ ಯಾರ ಪಾಠ ಸೇರಿಸಿ ಅಂತ ಸುರೇಸಣ್ಣನಿಗೆ ಏಳದು?’ ಅಂದ್ರು ತುರೇಮಣೆ.

‘ಸಾ ನನ್ನ ತಾವು ಒಂದು ಗಂಭೀರವಾದ ವಿಚಾರ ಅದೆ. ತಾವು ಸಾವಧಾನವಾಗಿ ಕೇಳಿ ಒಪ್ಪಿಗೆ ಆದ್ರೆ ರವಿಮಾಮನಿಗೆ ಹೇಳಿ ಒಂದು ರಾಜ್ಯೋಸ್ತವ ಪ್ರಶಸ್ತಿಯೋ, ಒಂದು ಅಕಾಡಮ್ಮಿ ಅಧ್ಯಕ್ಷನ್ನೋ ಮಾಡಿಸ್ತೀರಾ?’ ಅಂತ ಕೇಳಿದೆ. ‘ಆಯ್ತು ಕನೇಳು ಮನಿಯಾಳ. ಯಾವ ವಿಚಾರವ ಇಸ್ಕೂಲು ಪಾಠದಗೆ ಸೇರಿಸಬಕು?’ ಅಂದ್ರು.

‘ಅವರು ತಿಂಗ್ಳಾನುಗಟ್ಟಲೆ ಮನೆ-ಮಠ ಬುಟ್ಟು, ಯೆಡ್ತಿ ಮಕ್ಳ ಮಕ ನೋಡದೇ ಮುಂಬೈ-ಡೆಲ್ಲೀಲಿ ಹೋರಾಟ ಮಾಡಿದ ತ್ಯಾಗಜೀವಿಗಳು ಸಾ. ಸಾಂದರ್ಭಿಕ ಸರ್ಕಾರ ಕ್ಯಡವಿ ಸ್ವಾತಂತ್ರ ಕೊಡಿಸಿದ ಬಲಿದಾನದ ಕತೆ ಸ್ಕೂಲು ಪುಸ್ತುಕದಲ್ಲಿ ಬಂದ್ರೆ ಅನರ್ಹರಿಗೆ ಗೌರವ, ಭಾವೀ ರಾಜಕಾರಣಿಗಳಿಗೆ ಮಾರ್ಗದರ್ಶನ ಕೊಟ್ಟಂಗಾಯ್ತದೆ ಅಲ್ಲುವ್ರಾ ಸಾರ್?’ ಅಂದೆ. ನೀವೂ ವಸಿ ಯೋಚ್ನೆ ಮಾಡಿ ನೋಡಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.