ADVERTISEMENT

ಚುರುಮುರಿ: ನವಬೇತಾಳಗಳು!

ಸುಮಂಗಲಾ
Published 19 ಡಿಸೆಂಬರ್ 2021, 19:31 IST
Last Updated 19 ಡಿಸೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾತ್ರಿ ಹತ್ತಾಗುತ್ತಿದ್ದಂತೆ ಬೆಕ್ಕಣ್ಣ ಸ್ವೆಟರ್ ಹಾಕಿಕೊಂಡು ‘ನನಗೊಂದು ಬ್ಯಾಟರಿ ಕೊಡು’ ಎಂದಿತು. ‘ಎಲ್ಲಿಗೆ ಹೊಂಟೀಯಲೇ’ ಎಂದೆ ಗಾಬರಿಯಿಂದ.

‘ಅಡ್ಡಬಾಯಿ ಹಾಕಬ್ಯಾಡ. ಹಿಂದೆಲ್ಲ ರಾಜರು ರಾತ್ರಿ ವೇಷ ಮರೆಸಿಕ್ಯಂಡು ನಗರದೊಳಗೆ ಸುತ್ತಾಡಿ, ಪರಿಸ್ಥಿತಿ ಪರಿಶೀಲಿಸುತ್ತಿದ್ದರಲ್ಲ, ಹಂಗ ನಮ್ಮ ಮೋದಿಮಾಮನೂ ರಾತ್ರಿ ಅಯೋಧ್ಯಾವಳಗೆ ಅಡ್ಡಾಡಿ ಅಭಿವೃದ್ಧಿ ಪರಿಶೀಲನೆ ನಡಸಿದ್ರಂತ. ನಾನೂ ರಾತ್ರಿ ಪರಿಶೀಲನೆ ಮಾಡಾಕೆ ಹೊಂಟೀನಿ’ ಎಂದಿತು.

‘ನಿಂದ್ಯಾವ ಅಯೋಧ್ಯಾನಗರಿ ಐತಲೇ ಪರಿಶೀಲನೆ ನಡೆಸಾಕೆ’

ADVERTISEMENT

‘ನಮ್ಮ ಬೀದಿ ಐತಲ್ಲ... ಅದೇ ನನ್ನ ಸಾಮ್ರಾಜ್ಯ’ ಎಂದು ಬೀಗುತ್ತ ಹೊರಟಿತು. ನಾಕು ಹೆಜ್ಜೆ ಹೋಗುವಷ್ಟರಲ್ಲಿ ಬೆಕ್ಕಣ್ಣನ ಬೆನ್ನಿಗೆ ಮುದಿಬೇತಾಳ ಅಮರಿಕೊಂಡಿತು. ‘ಕೇಳಿದ್ದಕ್ಕೆ ಸರಿಯಾಗಿ ಉತ್ತರಿಸದಿದ್ದರೆ ತಲೆ ಸಾವಿರ ಹೋಳು ಮಾಡುವೆ’ ಎಂದು ಗುಡುಗಿ ಪ್ರಶ್ನಿಸತೊಡಗಿತು.

‘ಯುಪಿ+ಯೋಗಿ=ಉಪಯೋಗಿ, ಇದು ಯೋಗಸಂಧಿಯೋ ಅಥವಾ ಉಪಸಂಧಿಯೋ?’

‘ಹ್ಹೆಹ್ಹೇ... ಇದು ಯೋಗಸಂಧಿಯೂ ಅಲ್ಲ, ಉಪಸಂಧಿಯೂ ಅಲ್ಲ, ಚುನಾವಣಾಸಂಧಿ’ ಬೆಕ್ಕಣ್ಣ ಪಕಪಕನೆ ನಕ್ಕಾಗ ಅವಮಾನಗೊಂಡ ಬೇತಾಳ ಮತ್ತೊಂದು ಪ್ರಶ್ನೆ ಎಸೆಯಿತು. ‘ವಿಧಾನಸಭೆಯ ಮಾಜಿ, ಹಾಲಿ ಅಧ್ಯಕ್ಷರ ನಡುವಣ ಸಂಬಂಧವು ಅರಿಸಮಾಸವೇ?’

‘ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತೆ ಮಾಜಿಗಳು ಹಾಸ್ಯ ಮಾಡಿದರೆ ಹಾಲಿಗಳು ನಕ್ಕು ತಲೆಯಾಡಿಸುವರು, ಅವರಿಬ್ಬರ ನಡುವೆ ಇದೀಗ ಸುಸ್ವರಸಂಧಿಯ ಮಿತ್ರಸಮಾಸವುಂಟು’.

ಬೇತಾಳ ಕೊನೇದಾಗಿ ಕೇಳಿತು, ‘ದೇಶದಲ್ಲೀಗ ಕೊರೊನಾದ ರೂಪಾಂತರ ತಳಿಗಳಿಗಿಂತ ಅಪಾಯಕಾರಿಯಾಗಿ ಹಬ್ಬುತ್ತಿರುವ, ಕೈಕೈಹಿಡಿದು ಸಾಗುತ್ತಿರುವ ತ್ರಿವಳಿಗಳು ಯಾರು?’

‘ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯಗಳು, ಸುಳ್ಳುಸುದ್ದಿಗಳು ಮತ್ತು ನಾಲಿಗೆವೀರರ ಸಂತತಿ- ಇವೇ ಆ ತ್ರಿವಳಿಗಳು. ಇವೀಗ ಎಲ್ಲರ ಬೆಂಬತ್ತಿದ ನವಬೇತಾಳಗಳಾಗಿವೆ...’ ಎನ್ನುತ್ತಿದ್ದಂತೆ ‘ಅಯ್ಯೋ... ಇದ್ಯಾವುದೋ ನವಬೇತಾಳ’ ಎಂದು ಬೆದರಿದ ಮುದಿಬೇತಾಳ ಬೆಕ್ಕಣ್ಣನ ಬೆನ್ನಿನಿಂದಿಳಿದು ಓಡಿಹೋಯಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.