ADVERTISEMENT

ಕ್ರಾಂತಿ ಮಾಡ್ತೀನಿ!

ಗುರು ಪಿ.ಎಸ್‌
Published 14 ಜನವರಿ 2020, 20:00 IST
Last Updated 14 ಜನವರಿ 2020, 20:00 IST
ಚುರುಮುರಿ
ಚುರುಮುರಿ   

‘ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣ್ತಿದೆ. ಕಣ್ಣುಗಳಲ್ಲಿ ಹೊಳಪಿದೆ. ಉತ್ಸಾಹ ಮುಗಿಲು ಮುಟ್ಟಿದೆ. ಹಬ್ಬದ ಈ ಸಂದರ್ಭದಲ್ಲಿ ತುಂಬಾ ಖುಷಿಯಲ್ಲಿದೀಯಲ್ಲ ಮುದ್ದಣ್ಣ, ಯುದ್ಧವನ್ನೇನಾದರೂ ಗೆದ್ಯಾ’ ಕಾಲೆಳೆದ ವಿಜಿ.

‘ಇನ್ನೂ ಗೆದ್ದಿಲ್ಲ ಸರ್, ಸಂಕ್ರಾಂತಿಗೆ ‘ಸಮ್’ಕ್ರಾಂತಿ ಮಾಡಣ ಅಂದ್ಕಡಿದೀನಿ’.

‘ಹೌದಾ, ಏನ್ ಕ್ರಾಂತಿ ಮಾಡ್ತೀಯ?’

ADVERTISEMENT

‘ಕವಿಯಾಗ್ತೀನಿ, ಕಥೆ-ಕಾದಂಬರಿ ಬರೆದು ಕ್ರಾಂತಿ ಮಾಡ್ತೀನಿ’.

‘ಯಾವ ಪಕ್ಷದ ಕವಿ ಆಗಬೇಕು ಅಂತ ಈಗ್ಲೇ ಡಿಸೈಡ್ ಮಾಡು. ಏಕೆಂದರೆ, ನಿನ್ ಆಪೋಸಿಷನ್ ಪಾರ್ಟಿಯವ್ರು ಅಧಿಕಾರಕ್ಕೆ ಬಂದ್ರೆ ಸಮ್ಮೇಳನದ ಅಧ್ಯಕ್ಷ ಆದ್ರೂ ಕೆಳಗೆ ಇಳಿ
ಅಂತ ಹೆದರಿಸಿಬಿಡ್ತಾರೆ. ಇನ್ನೊಂದ್ ಮಾತು,
ಪೆಟ್ರೋಲ್ ಬಾಂಬ್ ದಾಳಿ ಹೆಂಗೆ ಎದುರಿಸ
ಬೇಕು ಅನ್ನೋದನ್ನೂ ಕಲೀಬೇಕಾಗುತ್ತೆ ನೀನು’.

‘ಹಾಗಾದ್ರೆ ಕವಿ ಆಗಲ್ಲ ಸಾರ್, ಶಾಸಕ ಆಗಿ ಕ್ರಾಂತಿ ಮಾಡ್ತೀನಿ’.

‘ಕ್ರಾಂತಿ ಮಾಡ್ತೀವಿ ಅಂತ ಸರ್ಕಾರ ಬೀಳಿಸಿ, ಗೆದ್ದ ಶಾಸಕರೇ ಈಗ ಮಂತ್ರಿಯಾಗೋಕಾಗದೆ ಮೂಲೇಲಿ ಕೂತಿದಾರೆ, ನನ್ನನ್ನ ಯಾವಾಗ ಹಾಕ್ಕೋತೀಯ ಅಂತ ಅವರವರ ಸೂಟ್‌ಗಳೇ ಅವರ ವಿರುದ್ಧ ದಂಗೆ ಏಳ್ತಿದಾವಂತೆ’ ನಕ್ಕ ವಿಜಿ.

‘ಈ ಪಕ್ಷ, ಸಿದ್ಧಾಂತ, ಜಾತಿ, ಧರ್ಮ ಎಲ್ಲ ಬಿಟ್ಟು ಮೊದಲು ಮಾನವನಾಗ್ತೀನಿ ಸಾರ್, ಎಲ್ಲ ಮೀರುವ ಮೂಲಕ ಕ್ರಾಂತಿ ಮಾಡ್ತೀನಿ’.

ಇನ್ನೂ ಜೋರಾಗಿ ನಗಲಾರಂಭಿಸಿದ ವಿಜಿ, ‘ನೀನು ಯಾವ ಧರ್ಮ ಅಂತ ರೆಕಾರ್ಡ್ ಕೊಡದಿದ್ರೆ ನಿನ್ನನ್ನ ಪ್ರಜೆ ಅಂತಾನೇ ಪರಿಗಣಿಸಲ್ಲ, ಇನ್ನು ಎಲ್ಲ ಮೀರಿ ಮಾನವನಾಗ್ತಾನಂತೆ ಇವ್ನು’.

‘ಹಾಗಾದರೆ, ಕ್ರಾಂತಿ ಹೇಗೆ ಮಾಡ್ಲಿ ಸರ್’.

‘ಬೆಳಿಗ್ಗೆ ಅಥವಾ ಸಂಜೆ ಬೆಂಗಳೂರು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಲಾರಿಯಲ್ಲಿ ಒಂದ್ ರೌಂಡ್ ಹಾಕ್ಕೊಂಡು ಬಾ. ಅದಾಗದಿದ್ರೆ, ಮಂಗಳೂರು ಪಂಪ್‌ವೆಲ್ ಫ್ಲೈ ಓವರ್ ಮೇಲೆ ಕಾರನ್ನ ಓಡಿಸೋ ನಿನ್ನ ಕನಸನ್ನ ನನಸು ಮಾಡಿಕೋ. ಅದೂ ಸಾಧ್ಯ ಆಗದಿದ್ರೆ ಅಟ್‌ಲೀಸ್ಟ್ ಹುಬ್ಬಳ್ಳಿ ರಸ್ತೆಗಳಲ್ಲಿ ಬೈಕ್‌ನಲ್ಲಿ ಇಡೀ ದಿನ ಸುತ್ತಾಕು...’

‘ಸರ್, ಹೆಂಡ್ತಿ ಕೊತ್ತಂಬರಿ ಸೊಪ್ಪು ತರೋಕೆ ಹೇಳಿದ್ಲು, ಬರ್ತೀನಿ’ ಎನ್ನುತ್ತಾ ಹೊರಟ ಮುದ್ದಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.