ADVERTISEMENT

ಏನಿಲ್ಲ... ಏನೇನಿಲ್ಲ!

ಗುರು ಪಿ.ಎಸ್‌
Published 19 ಜನವರಿ 2020, 20:00 IST
Last Updated 19 ಜನವರಿ 2020, 20:00 IST
   

‘ಏನಿಲ್ಲ, ಏನಿಲ್ಲ... ಏನೇನಿಲ್ಲ’ ಎಂದು ಹಾಡುತ್ತ ಬಂದ ಮುದ್ದಣ್ಣ. ‘ಕವಿಯಾದವನು, ಗಾಯಕನೂ ಆಗೋಕೆ ಹೊರಟಂಗಿದೆ’ ಕಿಚಾಯಿಸಿದ ವಿಜಿ.

‘ಕಲಬುರ್ಗಿ ಸಾಹಿತ್ಯ ಸಮ್ಮೇಳನಕ್ಕೆ ಹೋಗ್ತಿದೀನಿ ಸರ್‌... ಅಲ್ಲಿ ನಾನೂ ಕವನ ವಾಚನ ಮಾಡ್ಬೇಕು. ಅದನ್ನ ರಾಗವಾಗಿ ಹೇಳೋದನ್ನ ಅಭ್ಯಾಸ ಮಾಡ್ತಿದ್ದೆ’.

‘ಯಾವ ಕವನ ಬರೆದಿದ್ದೀಯಾ?’

ADVERTISEMENT

‘ನಮ್ಮ ಭಾಗವತರು, ಸರ್ಕಾರಕ್ಕೂ ತಮ್ಮ ಸಂಘಟನೆಗೂ ಸಂಬಂಧ ಇಲ್ಲ ಅಂತ ಹೇಳಿದಾರಲಾ ಸರ್. ಆ ಮಾತನ್ನೇ ಸ್ಫೂರ್ತಿ
ಯಾಗಿಟ್ಟುಕೊಂಡು ಬರೆದಿದ್ದೀನಿ’.

‘ರಾಗವಾಗಿ ಹೇಳು ಕೇಳೋಣ’

‘ಉಪೇಂದ್ರ ಫಿಲ್ಮ್‌ ಟ್ಯೂನ್‌ನ ತಲೆಯಲ್ಲಿ
ಇಟ್ಕೊಂಡು ಈ ಕವನ ಕೇಳಿ ಸರ್... ಏನಿಲ್ಲ, ಏನಿಲ್ಲ, ಸಂಘ–ಸರ್ಕಾರ ನಡುವೆ ಏನಿಲ್ಲ, ಏನೇನಿಲ್ಲ...’

‘ಅಲ್ವೊ, ಏನೇನಿಲ್ಲ ಅಂದರೆ ಎಲ್ಲವೂ ಇದೆ ಅಂತಾನೇ ಅರ್ಥ ಬರಲ್ವಾ’ ಕೇಳಿದ ವಿಜಿ.

‘ಅದೇ ಪದ್ಯದ ಟೆಕ್ನಿಕ್ಕು ಸರ್... ಒಂದೇ ಪದದಲ್ಲಿ ಎರಡೆರಡು ಅರ್ಥ ಬರು
ವಂತಿರಬೇಕು’ ಕಾಲರ್‌ ಏರಿಸಿಕೊಂಡ ಮುದ್ದಣ್ಣ.

‘ನಿಜದಂತಿರುವುದು ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ...’‘ನಿಲ್ಸು, ನಿಲ್ಸು... ಆ ಹಾಡಿನ ಸಾಹಿತ್ಯವನ್ನೇ ಕದೀತಿದಿಯಲ್ಲ... ನಾಚಿಕೆಯಾಗಲ್ವ ನಿನಗೆ’ ಸಿಟ್ಟಿನಿಂದ ಹೇಳ್ದ ವಿಜಿ.

‘ಏಯ್‌, ಪೂರ್ತಿ ಕೇಳಿಸಿಕೊಳ್ಳಿ ಸರ್. ಸಮ್ಮೇಳನವದು ಸಾಹಿತ್ಯವಲ್ಲ, ಸಾಹಿತ್ಯವೇ ಸಮ್ಮೇಳನವಲ್ಲ ಅಂತ ಬದಲಾಯಿಸಿದೀನಿ... ಕಂಟಿನ್ಯೂ ಮಾಡಲಾ?’

‘ಮುಂದೆ ನಾನೇ ಹೇಳ್ತೀನಿ ಕೇಳು... ಕಲ್ಯಾಣವದು ಕರ್ನಾಟಕವಲ್ಲ, ಕರ್ನಾಟಕದಲ್ಲಿ ಕಲ್ಯಾಣ ಇಲ್ಲ...ಏನಿಲ್ಲ... ಏನೇನಿಲ್ಲ...’ ವಿಜಿ ಹಾಡತೊಡಗಿದ.

‘ಇದೊಂಥರಾ ಪೌರತ್ವ ತಿದ್ದುಪಡಿ ಕಾಯ್ದೆಗೂ, ಭಾರತೀಯ ಮುಸ್ಲಿಮರಿಗೂ ಸಂಬಂಧ ಇಲ್ಲ ಅಂತ ಹೇಳ್ದಂಗಾಯ್ತು’ ಕಣ್ಣು ಮಿಟುಕಿಸಿದ ಮುದ್ದಣ್ಣ.

‘ಇನ್ನೊಂದು ಸಾಲು ಹೊಳೆದಿದೆ. ಕೇಳು... ಏನಿಲ್ಲ, ಏನಿಲ್ಲ... ಸರ್ಕಾರ– ಅಭಿವೃದ್ಧಿ ನಡುವೆ ಏನಿಲ್ಲ... ಏನೇನೂ ಇಲ್ಲ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.