ADVERTISEMENT

ಟೋಪಿ ಬೇಕೇ ಟೋಪಿ!

ಪ್ರೊ.ಎಸ್.ಬಿ.ರಂಗನಾಥ್
Published 22 ಜನವರಿ 2020, 20:15 IST
Last Updated 22 ಜನವರಿ 2020, 20:15 IST
   

‘ಭಲೆ ಭಲೆ ಟೋಪಿ! ಕೋಟಿ ಬೆಲೆಯ ಟೋಪಿ!’ ಎನ್ನುತ್ತಾ ಬಂದ ಚನ್ನೇಶಿಯನ್ನು ಚಿಕ್ಕೇಶಿ ಕೇಳಿದ, ‘ನಂಗೆ ಬೇರೆ ಟೋಪಿಗಳು ಗೊತ್ತು, ನೀನು ಹೇಳ್ತಿರೋದು ಎಂಥದ್ದೋ?’

‘ಮೊದ್ಲು ನಿಂಗೆ ಗೊತ್ತಿರೋ ಟೋಪಿಗಳ ವಿಷಯ ಹೇಳು’ ಎಂದ ಚನ್ನೇಶಿ.

‘ಚಿಕ್ಕಂದಿನಲ್ಲಿ ಅಜ್ಜಿ ಸಂತೆಯಲ್ಲಿ ಕೊಡಿಸುತ್ತಿದ್ದ ರಟ್ಟಿನ ಟೋಪಿ, ಸ್ಕೂಲಲ್ಲಿ ಸೇವಾದಳ ಟೋಪಿ, ರಾಜಕೀಯದ ಗಾಂಧಿಟೋಪಿ, ಮುಷ್ಕರ ಮಾಡುವಾಗಿನ ಕೆಂಪು ಟೋಪಿ, ಆಗ ಬೆತ್ತದ ರುಚಿ ತೋರಿಸುತ್ತಿದ್ದ ಪೊಲೀಸಪ್ಪಗಳ ಖಾಕಿ ಟೋಪಿ ಗೊತ್ತು... ನೀ ಹೇಳ್ತಿರೋ ದುಬಾರಿ ಟೋಪಿ ಚಿನ್ನದ್ದೋ ವಜ್ರದ್ದೋ?’

ADVERTISEMENT

‘ಅದ್ಯಾವುದೂ ಅಲ್ಲಯ್ಯಾ? ನಾನು ಹೇಳ್ತಿರೋದು ಆಸ್ಟ್ರೇಲಿಯಾದ ಕ್ರಿಕೆಟ್ ಸ್ಪಿನ್ ಬೌಲಿಂಗ್ ಶೂರ ಶೇನ್ ವಾರ್ನ್‌ರ ಹಸಿರು ಟೋಪಿ ವಿಷ್ಯ. ಅದು ₹ 5 ಕೋಟಿಗೆ ಹರಾಜಾಗಿ ಆ ಹಣವನ್ನು ವಾರ್ನ್, ಆಸ್ಟ್ರೇಲಿಯಾದ ಭೀಕರ ಕಾಳ್ಗಿಚ್ಚಿನ ಸಂತ್ರಸ್ತರಿಗೆ ನೀಡಿದ್ದಾರೆ. ಟೀಮಲ್ಲಿ ಅವರಿದ್ದಿದ್ರೆ ಮೊನ್ನೆ ಚಿನ್ನಸ್ವಾಮಿ ಸ್ಟೇಡಿಯಮ್ಮಲ್ಲಿ ನಮ್ಮ ಬೆವರಿಳಿಸ್ತಿದ್ರು. ಆದ್ರೂ ಕಾಂಗರೂಗಳು ವಾಂಖೇಡೆ ಸ್ಟೇಡಿಯಂನಲ್ಲಿ ನಮ್ಮನ್ನ ಮಣ್ಣು ಮುಕ್ಕಿಸಿದ್ರಲ್ಲಯ್ಯಾ’.

‘ಅದ್ಸರಿ, ಈ ಟೋಪಿಗಳ ವಿಷಯವೇನು?

‘ಜನಸೇವೆ ಮಾಡಲು ಕಳೆದ ನಾಲ್ಕು ತಿಂಗಳಿಂದ ತುದಿಗಾಲಲ್ಲಿರೋ ನಮ್ಮ ಸಪ್ತಾದಶ ದೇ.ಭ.ರು. ಹಾಕಿಸಿಕೊಂಡಿರೋ ಟೋಪಿಯು ವಾರ್ನ್‌ರ ಟೋಪಿಗಿಂತ ಭಿನ್ನ. ಜನಹಿತಕ್ಕಾಗಿ ಅನರ್ಹಗೊಂಡ ದೇ.ಭ.ರು ಜ(ಧ)ನ ಬಲದಿಂದ ಅರ್ಹರಾಗಿ ದೇಶಸೇವೆಗೆ ಹೋದರೆ ಎದುರಾಗುವ ‘ನಾಳೆ ಬಾ’ ಫಲಕ! ಭಾಜಪ್ಪನವರು ಒಪ್ಪಿದರೂ ಸಮ್ಮತಿಸದ ಕಪ್ಪು ಟೋಪಿಯ ಗಣವೇಷಧಾರಿ ತ್ರಿಮೂರ್ತಿಗಳು! ಶೂನ್ಯಮಾಸ, ದಾವೋಸ್ ಸಮ್ಮೇಳನ, ದೆಹಲಿ ಚುನಾವಣೆ– ಇದೀಗ ನಡ್ಡಾ ಪದಗ್ರಹಣದಿಂದ ಕಗ್ಗಂಟಾಗಬಹುದಾದ ಸಂಪುಟ ವಿಸ್ತರಣೆಗೆ ಕೂಡದ ಮುಹೂರ್ತ. ಇಷ್ಟೆಲ್ಲಾ ಇದ್ರೂ ಛಲ ಬಿಡದ ತ್ರಿವಿಕ್ರಮನಂತೆ, ಅದೃಶ್ಯ ಮಕ್ಮಲ್ ಟೋಪಿ ಧರಿಸಿ ಕಾಯ್ತಿರೋ ದೇ.ಭ.ರು!’

‘ಸದ್ಯಕ್ಕೆ ಸಂಕಟ ವಿಸ್ತರಣೆಯೇ ಗ್ಯಾರಂಟಿ ಅನ್ನು!’ ಚಿಕ್ಕೇಶಿ ಕಣ್ಣು ಹೊಡೆದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.