ADVERTISEMENT

‘ನೋ ಬ್ಯಾಂಕ್’ ವೈರಸ್!

ಗುರು ಪಿ.ಎಸ್‌
Published 11 ಮಾರ್ಚ್ 2020, 19:34 IST
Last Updated 11 ಮಾರ್ಚ್ 2020, 19:34 IST
   

‘ಯಾಕ್ ಮುದ್ದಣ್ಣ, ತಲೆ‌ ಮೇಲೆ ಟವೆಲ್ ಹಾಕ್ಕೊಂಡು ಕೂತಿದೀಯ...’ ಕೇಳ್ದ ವಿಜಿ.

‘ನಾನೊಂದು ಬ್ಯಾಂಕ್ ಓಪನ್ ಮಾಡಿದ್ದೆ ಸರ್, ‘ನೋ ಬ್ಯಾಂಕ್’ ಅಂತ... ಈಗದನ್ನ ಕ್ಲೋಸ್ ಮಾಡೋ ಪರಿಸ್ಥಿತಿ ಬಂದಿದೆ’.

‘ಹೆಸರಲ್ಲೇ ನೋ ಅಂತ ಇದ್ದಮೇಲೆ ಇನ್ನೆಲ್ಲಿಂದ ಉದ್ಧಾರ ಆಗುತ್ತೆ’ ನಕ್ಕ ವಿಜಿ.

ADVERTISEMENT

‘ನಗಬೇಡಿ ಸರ್... ನಿಮ್ಮ ಕಷ್ಟಗಳಿಗೆ ನೋ ಹೇಳಿ ಅಂತಾ ಟ್ಯಾಗ್‌ಲೈನ್ ಬೇರೆ ಹಾಕ್ಸಿದ್ದೆ. ಆದ್ರೆ ಈಗ ನಂಗೇ ಕಷ್ಟ ಬಂದಿದೆ. ಕಸ್ಟಮರ್ಸ್ ಎಲ್ಲ ಹಿಂದೆ ಬಿದ್ದಿದ್ದಾರೆ... ಫೋನ್ ಮಾಡಿ ಮಾಡಿ ಹೆದರಿಸ್ತಿದಾರೆ’.

‘ದುಡ್ಡು ಸೇಫ್ ಆಗಿರಲಿ ಅಂತ ಬ್ಯಾಂಕಲ್ಲಿ ಇಡ್ತಾರೆ, ನೀನೇ ಹೀಗೆ ಮಾಡಿದ್ರೆ ಹೇಗೆ?’

‘ದುರಾಸೆ ಸರ್‌... ದೊಡ್ಡೋರಿಗೆ ಸಾಲ ಕೊಟ್ಟರೆ ಬ್ಯಾಂಕ್ ಬೇಗ ಉದ್ಧಾರ ಆಗುತ್ತೆ ಅಂತ ಸಣ್ಣಪುಟ್ಟ ಗ್ರಾಹಕರ ಹಣ ಎಲ್ಲ ಸೇರಿಸಿ ಕೊಟ್ಟೆ. ಆದ್ರೆ ದೊಡ್ಡವರೇ ಕೈ ಎತ್ತಿಬಿಟ್ರು. ಸಮಸ್ಯೆಯಿಂದ ಹೊರಬರೋದು ಹೇಗೆ ಹೇಳಿ ಸರ್’.

‘ಬ್ಯಾಂಕು ಮತ್ತು ನಿನ್ನ ಮೊಬೈಲ್ ನಂಬರ್‌ಗೆ ಒಂದ್ ಮೆಸೇಜ್‌ಟೋನ್ ಸೆಟ್ ಮಾಡು. ಯಾರೇ, ಎಷ್ಟೇ ಸಲ ಕಾಲ್ ಮಾಡಿದರೂ ಆ ಮೆಸೇಜ್ ಪ್ಲೇ ಆಗ್ತಿರಲಿ’.

‘ಮೆಸೇಜ್‌ಟೋನ್? ಅದರಲ್ಲಿ ಏನು ಹೇಳಬೇಕು?’‌

‘ಮೊದಲು, ಒಂದೇ ಸಮನೆ ಜೋರಾಗಿ ಅಳಬೇಕು... ನಂತರ, ಗ್ರಾಹಕರೇ ನಮಗೆ ದೇವರು, ಎದೆಗುಂದದಿರಿ. ರಸ್ತೆಗಳಿಗೇ ಬಂಗಾರದ ಟಾರು ಹಾಕುವ ಮಹದುದ್ದೇಶ ನಮ್ಮದಿರುವಾಗ, ಯಃಕಶ್ಚಿತ್ ನಿಮ್ಮ ಹಣ ನಮಗೆ ದೊಡ್ಡದಲ್ಲ. ಸದ್ಯಕ್ಕೆ ಸುಮ್ಮನಿರಿ. ನಾವು ನಷ್ಟದಲ್ಲಿದ್ದೇವೆ ಎಂದು ಹೇಳಿ ಮತ್ತೆ ಜೋರಾಗಿ ಅಳೋದಕ್ಕೆ ಸ್ಟಾರ್ಟ್ ಮಾಡಬೇಕು’.

‘ಸೂಪರ್ ಸರ್, ಆದರೂ ಮತ್ತೆ ಮತ್ತೆ ಕರೆ ಮಾಡ್ತಿದ್ರೆ’.

‘ಇಂಗ್ಲಿಷ್ ಅಥವಾ ಹಿಂದೀಲಿ ಮೆಸೇಜ್ ಇರಬೇಕು. ಕನ್ನಡದಲ್ಲಿದ್ರೆ ಗುರೂಜಿ ಪ್ರವಚನ ಅಂತ ಮತ್ತೆ ಮತ್ತೆ ಕೇಳೋಕೆ ಕರೆ ಮಾಡ್ತಾರೆ’.

‘ಆಗಲೂ ಕಾಲ್ ಮಾಡ್ತಾನೇ ಇದ್ರೆ’.

‘ಕಾಲ್ ರಿಸೀವ್ ಮಾಡಬೇಡ. ಹಣ ವಾಪಸ್ ಸಿಗದಿದ್ರೂ ಪರವಾಗಿಲ್ಲ, ಈ ಮೆಸೇಜ್ ಕೇಳೋಕಾಗಲ್ಲ ಅಂತ ಸುಮ್ಮನಾಗಿಬಿಡ್ತಾರೆ. ಡಿಜಿಟಲ್‌ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರ’ ನಗುತ್ತಾ ಹೊರಟ ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.