ADVERTISEMENT

ಚುರುಮುರಿ | ಎಲೇ ಹೈರಾಣು...

ಮಣ್ಣೆ ರಾಜು
Published 1 ಏಪ್ರಿಲ್ 2020, 4:10 IST
Last Updated 1 ಏಪ್ರಿಲ್ 2020, 4:10 IST
   

‘ಎಲೇ ಮಾನವಾ ಹೇಗಿದ್ದೀಯಾ? ಹಹ್ಹಹ್ಹಾ...’

‘ಯಾವುದು ಈ ಅಶರೀರವಾಣಿ...? ಯಾರು ನೀನು?’

‘ನಾನು ಕೊರೊನಾ ವೈರಾಣು, ಹೇಗಿದೆ ನನ್ನ ಪರಾಕ್ರಮ?!’

ADVERTISEMENT

‘ಎಲೇ ವೈರಾಣು, ನಿನ್ನ ವಿರುದ್ಧ ನಾವು ಯುದ್ಧ ಸಾರಿದ್ದೇವೆ, ಗೆದ್ದೇ ಗೆಲ್ಲುತ್ತೇವೆ’.

‘ಅತ್ಯಾಧುನಿಕ ಯುದ್ಧ ಸಾಮಗ್ರಿ ಸಂಗ್ರಹಿಸಿಕೊಂಡು ಪ್ರಪಂಚ ಗೆಲ್ಲುತ್ತೇವೆ ಎಂದು ಬೀಗಿದ್ದ ದೊಡ್ಡಣ್ಣ, ಚಿಕ್ಕಣ್ಣ ದೇಶಗಳೆಲ್ಲಾ ಸದ್ದಡಗಿ ಸೈಲೆಂಟಾಗಿವೆ. ಇನ್ನೆಲ್ಲಿ ಗೆಲುವು, ಹಹ್ಹಹ್ಹ...’

‘ಅಯ್ಯಾ ವೈರಾಣು, ಬದುಕು ಹೈರಾಣಾಗಿದೆ. ನಮ್ಮ ಮೇಲೆ ನಿನಗೆ ಯಾಕೆ ಇಷ್ಟೊಂದು ದ್ವೇಷ?’

‘ನೀವು ಮಾನವರು ಎಲ್ಲರೊಳಗೆ ಒಂದಾಗಿ ಬಾಳುವುದು ಬಿಟ್ಟು, ಪಶು-ಪಕ್ಷಿ, ಗಿಡ-ಮರ
ಗಳನ್ನೆಲ್ಲಾ ನುಂಗಿ ನೀರು ಕುಡಿದು, ನಾವೇ ಸಾರ್ವಭೌಮರು ಅಂತ ಮೆರೆಯುತ್ತಿದ್ದಿರಿ, ಈಗ ಅನುಭವಿಸಿ’.

‘ಒಲೆ ಹತ್ತಿ ಉರಿದರೆ ನಿಲ್ಲಬಹುದು, ಧರೆ ಹತ್ತಿ ಉರಿದರೆ ಎಲ್ಲಿಗೆ ಹೋಗುವುದು? ಸಾಲ ಮಾಡಿ ತಪ್ಪಿಸಿಕೊಂಡು ಫಾರಿನ್ನಿಗೆ ಹೋದವರಂತೆ ನಾವೂ ಫಾರಿನ್ನಿಗೆ ಹಾರೋಣವೆಂದರೆ, ಅಲ್ಲಿ ಇದಕ್ಕಿಂಥಾ ಅಧ್ವಾನ. ಪಕ್ಕದ ಮನೆಗೂ ಹೋಗಲಾರದೆ ಮನೆ ಸೇರಿಕೊಂಡಿದ್ದೇವೆ’.

‘ಇನ್ನೆಲ್ಲಿಗೆ ಹೋಗ್ತೀರಿ? ಬಸ್ಸು, ರೈಲು, ಏರೋಪ್ಲೇನು ಮೂಲೆ ಸೇರಿವೆ. ವಾಯು, ಜಲ, ನೆಲ ಮಾರ್ಗಗಳೆಲ್ಲವನ್ನೂ ಜೀರೊ ಟ್ರಾಫಿಕ್ ಮಾಡಿದ್ದೇನೆ. ನಿಮ್ಮ ಟ್ರಾಫಿಕ್ ಪೊಲೀಸರು ಯಾವತ್ತಾದ್ರೂ ಹೀಗೆ ಮಾಡಿದ್ದರಾ?’

‘ಇಲ್ಲ ವೈರಾಣು, ದೇಶ, ಭಾಷೆ, ಜಾತಿ, ಧರ್ಮ, ಕುರ್ಚಿ ಅಂತ ಕಿತ್ತಾಡುತ್ತಿದ್ದವರೆಲ್ಲಾ ತೆಪ್ಪಗಾಗಿದ್ದಾರೆ. ತೊಡೆ ತಟ್ಟಿ, ಮೀಸೆ ತಿರುವುತ್ತಿದ್ದ ಪರಾಕ್ರಮಿಗಳೆಲ್ಲಾ ಮನೆ ಸೇರಿದ್ದಾರೆ’.

‘ಅನೀತಿ, ಅನ್ಯಾಯ ಹೋಗಲಾಡಿಸಿ ಧರ್ಮ ಸಂಸ್ಥಾಪನೆ ಮಾಡಲು ಹೀಗೆ ಮಾಡುತ್ತಿದ್ದೇನೆ’.

‘ಹೌದಾ...?! ನೀನು ಯಾವ ಧರ್ಮದ, ಯಾವ ದೇವರ, ಎಷ್ಟನೇ ಅವತಾರ?’

‘ಹೇಳಲ್ಲ, ನನ್ನ ಧರ್ಮ ಹೇಳಿಬಿಟ್ಟರೆ ಬೇರೆ ಧರ್ಮದವರು ಮೈಮೇಲೆ ವೈರಾಣು ಬಿಟ್ಟುಕೊಂಡು ಫಜೀತಿ ಮಾಡಿಕೊಳ್ತಾರೆ, ಹಹ್ಹಹ್ಹ...’

... ನಿದ್ರೆಯಿಂದ ಎಚ್ಚರಗೊಳಿಸಿದ ಹೆಂಡತಿ, ‘ಏಪ್ರಿಲ್ ಫೂಲ್’ ಅಂದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.