ADVERTISEMENT

ಚುರುಮುರಿ | ಕೋವಿಡ್–19ಗೆ ಎಎಂಐ-21ಡಿ ಔಷಧ

ಲಿಂಗರಾಜು ಡಿ.ಎಸ್
Published 31 ಮಾರ್ಚ್ 2020, 2:44 IST
Last Updated 31 ಮಾರ್ಚ್ 2020, 2:44 IST
   

‘ಗುಡ್ಡೆಬಾಡು ತಕಂದು ಹಂಗೇ ತುರೇಮಣೆ ನೋಡಿಕ್ಯಂಡು ಬರುಮಾ ಬಾ’ ಅಂತ ಯಂಟಪ್ಪಣ್ಣ ನಾನು ಇಬ್ಬರೂ ಹೊಂಟೊ. ಬಾಗಿಲು ತೆಗೆದ ಶ್ರೀಮತಿ ತುರೇಮಣೆ ‘ಬೆವರು ಕಡೆಯಂಗೆ ಹಿಟ್ಟು ರುಬ್ಬಿದ್ರೆ ಕೊರೊನಾ ಬರಲ್ಲವಂತೆ, ನಿಮ್ಮನೇರು ಯೇಳಿದ್ರು. ಅದುಕ್ಕೆ ಅಡುಗೆ ಕ್ವಾಣೇಲಿ ದ್ವಾಸೆ ಹಿಟ್ಟು ರುಬ್ಬಿಸ್ತಾವನಿ ಕನಾ ನೋಡೋಗಿ’ ಅಂದ್ರು.

ಕಿಟಕೀಲಿ ನೋಡಿದರೆ ತುರೇಮಣೆ ಬೆವರು ಸುರಿಸಿಕ್ಯಂಡು ‘ಹೇ ಕೊರೊನಾ ಕಿಲ್ಲಯ್ಯ, ಚೀನಿ ಮುಲ್ಲಗಿವಿ ಗುರುವೇ ಕ್ವಾರಂಟೈನಿಗೆ ದಯಮಾಡವರೆ, ಕ್ವಾರಂಟೈನು ನೀಡವ್ವಾ ಕೋವಿಡಣ್ಣ ದೇವರಿಗೇ...’ ಅಂತ ಹಾಡ್ತಿದ್ರು. ಇದೇ ಐನ್ ಟೈಮು ಅಂತ ಯಂಟಪ್ಪಣ್ಣ ‘ಸಿಸ್ಟರ್, ಈರುಳ್ಳಿ, ಮೆಣಸಿನಕಾಯಿನೂ ಕತ್ತರಿಸಕೆ ಕೊಡೀ, ಕಣ್ಣಲ್ಲಿ ನೀರು ಬಂದ್ರೆ ಒಳ್ಳೇದು!’ ಅಂತ ಫಿಟಿಂಗ್ ಇಟ್ರು.

‘ಹ್ಞೂಂ ಕಣ್ರಿ, ಯಂಟಪ್ಪಣ್ಣನೇ ಅವರ ಮನೇಲಿ ದಿನಾ ದೇವರ ಸಾಮಾನು ತೊಳೆಯದು’ ಅಂತ ನಾನೂ ತಾರೀಫ್‌ ಮಾಡಿದೆ.

ADVERTISEMENT

ಕಾಫಿ ಕುಡಿಯುವಾಗ ಯಂಟಪ್ಪಣ್ಣನಿಗೆ ಮನೆಯಿಂದ ಫೋನು ಬಂತು. ‘ಅಮ್ಮಯ್ಯಾ ವಸ್ತಾ ಉಂಡಾನು’ ಅಂದು ಫೋನಿಟ್ಟರು. ಅಷ್ಟರಲ್ಲಿ ತುರೇಮಣೆ ಆಗಮನವಾಯ್ತು. ‘ಅಲ್ರೋ, ಲಾಕ್‍ಡೌನ್ ಇದ್ರೂ ಪರೋಡಿಗಳಂಗೆ ಕೊರೊನಾಕ್ಕೆ ನನ್ನ ಗೊಂಜಾಯಿ ಅಂತ ಆಚೆ ಬಂದಿದೀರಲ್ಲಾ ನನ ಮಕ್ಕಳ, ಹಿಂಗೇ ತಿರುಗಿದ್ರೆ ನಿಮ್ಮೆಸರಲ್ಲಿ ಕಾಗೆಕೂಳು ಗ್ಯಾರೆಂಟಿ!’ ಅಂದ್ರು.

‘ಅದೀಯೇ ಸಾ, ಕೊರೊನಾಕ್ಕೆ ಏನಾದ್ರೂ ಔಸದಿ ಅದಾ ಅಂತ ತಿಳಕೋಗಕ್ಕೆ ಬಂದೋ’ ಅಂತ ಅಡ್ಡಗ್ಯಾನ ಮಾಡಿದೆ. ‘ನೋಡ್ರಲಾ, ಎರಡು ತುಂಡು ಬಾಡುಗೋಸ್ಕರ ಯದಾರಿಲ್ಲದೆ ಬಂದಿರಾ ನಿಮ್ಮಂತ ಲೋಲಪ್ಪಗಳಿಗೆ ಎಎಂಐ-21ಡಿ ಸರಿಯಾದ ಔಸದಿ’ ಅಂದರು ತುರೇಮಣೆ. ನನಗೆ ಅರ್ಥಾಗಲಿಲ್ಲ. ‘ಹಂಗಂದ್ರೇನು ಬುಡಸೇಳಿಸಾ?’ ಅಂತ ಕ್ಲಾರಿಫಿಕೇಶನ್ ಕೇಳಿದೆ.

‘ಅಯ್ಯೊ ಅಪಾಪೋಲಿ ನನ ಮಗನೇ. ಬುಡಸಾಕೆ ಅದೇನು ವರ್ಸತೊಡಕಿನ ನಲ್ಲೀಮೂಳೇನ್ಲಾ! ಎಎಂಐ-21ಡಿ ಅಂದ್ರೆ ಅಮಿಕ್ಕಂಡು ಮನೇಲೇ ಇರಿ 21 ದಿನ ಅಂತ. ಮೊದಲು ಕಡೀರಿ ಇಲ್ಲಿಂದ ಮನಿಯಾಳ ನನ ಮಕ್ಕಳಾ’ ಅಂತ ಚೆನ್ನಾಗಿ ಮಕ್ಕುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.