ADVERTISEMENT

ಟಿ.ವಿ. ಟ್ರೀಟ್‍ಮೆಂಟ್

ಮಣ್ಣೆ ರಾಜು
Published 28 ಏಪ್ರಿಲ್ 2020, 20:00 IST
Last Updated 28 ಏಪ್ರಿಲ್ 2020, 20:00 IST
   

ಶಂಕ್ರಿ ಮನೆಯ ಟಿ.ವಿಗೆ ಕಾಯಿಲೆ ಬಂದಿತ್ತು. ಕಣ್ಣು, ಬಾಯಿ ಬಿಡದೆ ತೆಪ್ಪಗಾಗಿತ್ತು. ಕಾಯಿಲೆ ಟಿ.ವಿ. ಮನೇಲಿದ್ರೆ ನೆಮ್ಮದಿ ಇರುತ್ತಾ? ಡಾಕ್ಟರನ್ನು ಕರೆಸಿ ಟಿ.ವಿಗೆ ಟ್ರೀಟ್‍ಮೆಂಟ್ ಕೊಡಿಸಿ ಎಂದು ಹೆಂಡ್ತಿ-ಮಕ್ಕಳು ಒತ್ತಡ ಹಾಕಿದರು.

ಶಂಕ್ರಿಯ ಫೋನ್ ಕರೆಗೆ ಹ್ಞೂಂಗುಟ್ಟಿ ಟಿ.ವಿ. ಡಾಕ್ಟರ್, ಕಿಟ್ ಸಮೇತ ಬಂದರು. ಒಮ್ಮೆ ಟಿ.ವಿ. ಮುಖವನ್ನು, ಇನ್ನೊಮ್ಮೆ ಮನೆಯವರ ಮುಖವನ್ನು ನೋಡಿದ ಡಾಕ್ಟರ್, ಇಬ್ಬರ ಯೋಗ್ಯತೆಯನ್ನೂ ಅಂದಾಜು ಮಾಡಿಕೊಂಡರು. ‘ಆರೋಗ್ಯವಾಗಿದ್ದ ಟಿ.ವಿಗೆ ಕಾಯಿಲೆ ಏಕೆ ಬಂತು?’ ಸಹಜವಾಗಿ ಕೇಳಿದರು.

‘ದಿನಾ ರಾತ್ರಿ ಇವರು ಕ್ರೈಂ ಸ್ಟೋರಿ ನೋಡ್ತಾರೆ. ಎರಡು ಹೆಣ ಬೀಳುವವರೆಗೂ ಮಲಗುವುದಿಲ್ಲ. ಯಾವ ಎಪಿಸೋಡಿನ ಅದ್ಯಾವ ಮಚ್ಚಿನೇಟು ಟಿ.ವಿಗೆ ಬಿತ್ತೋ ಗೊತ್ತಿಲ್ಲ, ಕಾಯಿಲೆ ಮಲಗಿದೆ’ ಸುಮಿ ಗಂಡನನ್ನು ದೂರಿದಳು.

ADVERTISEMENT

‘ನೀನು ನಿತ್ಯ ಕಣ್ಣೀರು ಸೀರಿಯಲ್ ನೋಡ್ತೀಯ. ಟಿ.ವಿಯಲ್ಲಿ ಕಣ್ಣೀರು ಸ್ಟಾಕ್ ಆಗಿ ಅದರ ಆರೋಗ್ಯ ಹಾಳಾಗಿದೆ’ ಅಂದ ಶಂಕ್ರಿ.

ಟಿ.ವಿಯ ಅಂಗಾಂಗ ಹೊರತೆಗೆದು ತಪಾಸಣೆ ಮಾಡಿದ ಡಾಕ್ಟರ್ ಲೊಚಗುಟ್ಟಿದರು.

‘ಏನಾಗಿದೆ ಡಾಕ್ಟ್ರೆ?’

‘ಟಿ.ವಿಗೆ ಕೊರೊನಾ ವೈರಸ್ ಅಟ್ಯಾಕ್ ಆಗಿದೆ’.

‘ಟಿ.ವಿಗೂ ಕೊರೊನಾ ಸೋಂಕು ಅಂಟುತ್ತಾ?’ ಶಂಕ್ರಿಗೆ ಆತಂಕ.

‘ಹೌದು, ನ್ಯೂಸ್ ಚಾನೆಲ್‍ನವರು ದಿನಗಟ್ಟಲೆ ಕೊರೊನಾ ಕಥೆ ಹೇಳಿ, ಕಾಡಿದ ಪರಿಣಾಮ ಸೋಂಕು ತಗುಲಿದೆ. ನ್ಯೂಸ್ ಚಾನೆಲ್ ನೋಡುವ ಎಲ್ಲರ ಮನೆ ಟಿ.ವಿಗಳಿಗೂ ಕೊರೊನಾ ಅಂಟಿದೆ. ಮೂವತ್ತಾರು ಟಿ.ವಿಗಳಿಗೆ ಚಿಕಿತ್ಸೆ ನೀಡಿದ್ದೇನೆ’.

‘ನಮ್ಮ ಟಿ.ವಿ. ಸತ್ತೇಹೋಗುತ್ತಾ ಡಾಕ್ಟ್ರೆ?!’

‘ಆಯುಷ್ಯ ಗಟ್ಟಿಯಾಗಿದೆ. ವೈರಸ್ಸನ್ನು ಹೊರತೆಗೆದಿದ್ದೇನೆ. ಇನ್ಮೇಲೆ ಟಿ.ವಿಯನ್ನು ಹುಷಾರಾಗಿ ನೋಡಿಕೊಳ್ಳಿ’.

‘ಏನಾದ್ರೂ ಪಥ್ಯ ಅನುಸರಿಸಬೇಕಾ ಡಾಕ್ಟ್ರೆ?’

‘ಹೌದು, ಬೆಳಿಗ್ಗೆ ಯೋಗ, ಧ್ಯಾನದ ಪ್ರೋಗ್ರಾಂ, ಮಧ್ಯಾಹ್ನ ಹೊಸರುಚಿ ಕಾರ್ಯಕ್ರಮ ವೀಕ್ಷಿಸಿ, ರಾತ್ರಿ ಸರಳವಾದ ಸೀರಿಯಲ್ ನೋಡಿ, ಟಿ.ವಿಯ ಆರೋಗ್ಯ ಸುಧಾರಿಸುತ್ತದೆ’ ಎನ್ನುತ್ತಾ ಡಾಕ್ಟರ್ ಫೀಸ್ ಈಸ್ಕೊಂಡು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.