ADVERTISEMENT

ಒಬ್ಬ ಕೋವಿದಣ್ಣ ಸಾಲದು

ಸುಮಂಗಲಾ
Published 26 ಏಪ್ರಿಲ್ 2020, 19:49 IST
Last Updated 26 ಏಪ್ರಿಲ್ 2020, 19:49 IST
   

ಬೆಂಗಳೂರಿನ ಗಾಳಿಯಣ್ಣ ತನ್ನದೇ ತಂಗಾಳಿಗೆ ಮುಖವೊಡ್ಡಿ, ನಳನಳಿಸುತ್ತಿದ್ದ ಪಾರ್ಕಿನಲ್ಲಿ ಅಡ್ಡಾಡಿದ. ಲಕ್ಷಗಟ್ಟಲೆ ವಾಹನಗಳ ಕಪ್ಪುಹೊಗೆಯಲ್ಲಿ ಉಸಿರುಗಟ್ಟಿದ್ದ ಗಾಳಿಯಣ್ಣ, ಈಗ ಖಾಲಿ ಹೊಡೆಯುತ್ತಿದ್ದ ರಸ್ತೆಯಲ್ಲಿ, ರಂಗುರಂಗಿನ ಹೂಗಳು ಚೆಲ್ಲಿದ ಫುಟ್‍ಪಾತಿನಲ್ಲಿ ಓಡಾಡುತ್ತ, ‘ವಳ್ಳೆ ಫಾರಿನ್ ಕಂಟ್ರಿಗೆ ಹೋದಂಗೆ ಅನ್ನಿಸ್ತದೆ’ ಎಂದುಕೊಂಡು ಖುಷಿಯಾದ.

ಸಿಳ್ಳೆ ಹಾಕುತ್ತ ಮಡಿಕೇರಿಯತ್ತ ಬಂದ. ಸ್ವಚ್ಛವಾಗಿ ಹರಿಯುತ್ತಿದ್ದ ಕಾವೇರಿಯ ನೋಡಿ, ‘ಅದ್ಯಾರೋ ಗುರುಗಳು ಕಾವೇರಿ ಕೂಗು ಅಭಿಯಾನ ಮಾಡಿದ್ದಕ್ಕೂ ಸಾರ್ಥಕವಾಯ್ತು. ಸ್ಫಟಿಕನೂ ಮೀರಿಸೋ ಹಂಗೆ ನಿನ್ನ ಶುದ್ಧ ಮಾಡವರೆ’ ಎಂದ.

ಕಾವೇರಕ್ಕ ಕಿಲಕಲನೆ ನಕ್ಕಳು. ‘ಆಯಪ್ಪ ಕೂಗಿದ್ದರಿಂದ ಏನೂ ಆಗಿಲ್ಲ. ಜನ ಮನೆವಳಗೆ, ಕೈಗಾರಿಕೆಗಳೂ ಬಂದ್, ನನ್ ಕಡೆಗೆ ಗಲೀಜು ನೀರು ಬಿಡ್ತಾ ಇಲ್ಲ... ಎಲ್ಲ ಕೋವಿದಣ್ಣನ ಮಹಿಮೆ’ ಎಂದಳು.

ADVERTISEMENT

ಅಷ್ಟೊತ್ತಿಗೆ ಗಾಳಿಯಣ್ಣನ ಮೊಬೈಲು ರಿಂಗಣಿಸಿತು. ಡೆಲ್ಲಿಯಲ್ಲಿದ್ದ ಗಾಳಿಯಣ್ಣನ ಹಿರಿಯಣ್ಣನು ಗಂಗಕ್ಕ, ಯಮುನಕ್ಕನ ಜೊತೆಗೆ ತೆಗೆದುಕೊಂಡ ಸೆಲ್ಫಿ ಕಳಿಸಿದ್ದ. ದಮ್ಮಿನ ರೋಗದಿಂದ ಕೆಮ್ಮುತ್ತ ಕಪ್ಪಾಗಿ ಕಂಗೆಟ್ಟಿದ್ದ ಹಿರಿಯಣ್ಣ ಬೆಳ್ಳಗೆ ಬೆಳಗುತ್ತಿದ್ದ, ಗಂಗಕ್ಕ, ಯುಮುನಕ್ಕರಂತೂ ಸ್ವಚ್ಛವಾಗಿ ಫಳಫಳನೆ ಹರಿಯುತ್ತಿದ್ದರು. ಗಾಳಿಯಣ್ಣ ಥಟ್ಟನೆ ಹಿರಿಯಣ್ಣನಿಗೆ ಫೋನಾಯಿಸಿ, ‘ಇಪ್ಪತ್ತು ಸಾವಿರ ಕೋಟಿ ಮೊತ್ತದ ನಮೋ ಯೋಜನೆ ಇಷ್ಟು ಬೇಗ ಸಫಲವಾಯ್ತಾ’ ಅಂತ ಕೇಳಿದ. ‘ನಮೋ ಅಲ್ಲಪೋ, ನಮಾಮಿ ಗಂಗೆ ಯೋಜನೆ. ಕೋಟಿಗಟ್ಟಲೆ ರೂಪಾಯಿಯ ಯೋಜನೆಗಳು ಮಾಡಲಾಗದ್ದನ್ನು ಕೋವಿದಣ್ಣ ಮಾಡಿದಾನೆ. ಪುಣ್ಯ ಬರಲಿ ಅವನಿಗೆ’ ಎಂದ.

‘ನೀವೇ ಪುಣ್ಯವಂತ್ರು. ನನಗೆ, ಮತ್ತೆ ನನ್ ಮಣ್ಣಿನ ಮಕ್ಕಳಿಗೆ ಪಾಡು ತಪ್ಪಿದ್ದಲ್ಲ. ಅತ್ತಾಗೆ ಕೈ ಕೆಸರು ಮಾಡಿಕಂಡು ಕೆಲಸ ಮಾಡೋವ್ರು ಹಸಿದು ಕುಂತವರೆ, ಇತ್ತಾಗೆ ಹೊಟ್ಟೆ ತುಂಬಿದೋರು ಕೈ ತೊಳಕಳಾಕೆ ಅಕ್ಕಿಯಿಂದ ಸ್ಯಾನಿಟೈಸರ್‌ ತಯಾರಿಸ್ತಾರಂತೆ. ಏನೇ ಹೇಳ್ರಪಾ... ಮನುಷ್ಯಂಗೆ ಬುದ್ಧಿ ಕಲಿಸಾಕ ಒಬ್ಬ ಕೋವಿದಣ್ಣ ಸಾಲದು’ ಎಂದು ಇವರ ಮಾತು ಕೇಳಿಸಿಕೊಳ್ಳುತ್ತಿದ್ದ ಭೂತಾಯಿ ನಿಟ್ಟುಸಿರಿಟ್ಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.