ADVERTISEMENT

ಚುರುಮುರಿ | ಸ್ಕೂಲ್ ಡೈರಿ

ಲಿಂಗರಾಜು ಡಿ.ಎಸ್
Published 10 ಜೂನ್ 2020, 1:36 IST
Last Updated 10 ಜೂನ್ 2020, 1:36 IST
ಚುರುಮುರಿ
ಚುರುಮುರಿ   

ತುರೇಮಣೆ ಮನೆ ಮುಂದುಗಡೆ ಅವರ ಹತ್ತೊರ್ಸದ ಮೊಮ್ಮಗ ನಾಲ್ಕಾರು ಮಕ್ಕಳ ಗುಂಪು ಕಟ್ಟಿಕ್ಯಂಡು ಕೂತುದ್ದ. ‘ಸ್ಕೂಲು ಶುರು ಮಾಡಾರಂತೆ. ಸ್ಕೂಲು! ಸ್ಕೂಲಲ್ಲಿ ಡಿಸ್ಟೆನ್ಸು, ಸೈಲೆನ್ಸು ಇರತವಾ!’ ಅಂದ ತುರೇಮಣೆ ಮೊಮ್ಮಗ.

‘ಇರೋನೊಬ್ಬ ಮಗ, ಒಂದೊರ್ಷ ಹೋದ್ರೆ ಹೋಗಲಿ. ಸ್ಕೂಲಿಗೆ ಹೋಗದು ಬ್ಯಾಡ ಅಂತಿದ್ರು ಮಮ್ಮಿ’ ಅಂದ ಇನ್ನೊಬ್ಬ.

‘ಏನ್ರೋ ಸ್ಕೂಲು ಬಾಯ್ಕಾಟ್ ಮಾಡ್ತಿದೀರ?’ ಅಂದೆ ಇವರ ಚರ್ಚೆ ಕೇಳಿ.

ADVERTISEMENT

‘ನಿಮ್ಮನ್ನ ನಂಬಿಕ್ಯಂಡರೆ ಕಡಲೇಪುರಿ ತಿನ್ನಬೇಕಾಯ್ತದೆ. ಒಂದನೇ ಕ್ಲಾಸ್ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡಕೆ ಹೊಂಟಿದೀರ! ಆನ್‍ಲೈನ್ ಬ್ಯಾಡಾ, ಮಕ್ಕಳನ್ನ ಮಕ್ಕಳಾಗಿರಕೆ ಬುಡಿ ಅಂತ ಜನಪರ ಧ್ವನಿ ಎತ್ತುತ್ತಿದ್ದೇವೆ’ ಅಂದ ಅವ.

‘ಏನು ಪುತ್ರಾ ನಿಮ್ಮ ರೋದನೆ?’ ಅಂತ ತುರೇಮಣೆ ಆಚೆ ಬಂದರು.

‘ಅಲ್ಲಾ ಸ್ಕೂಲಿನೋರಿಗೆ ಫೀಸು ತಗಳೋ ಆತುರ, ಅಂಗಡಿಯೋರಿಗೆ ಯೂನಿಫಾರಮ್ಮು ಮಾರೋ ಯೋಚನೆ, ಬುಕ್ ಕಂಪನಿಗೆ ಪುಸ್ತಕ ಮಾರೋ ಅರ್ಜೆಂಟು! ನಮ್ಮುನ್ನೇನು ಕಮಾಡಿಟಿ ಅಂತ ತಿಳಕಂಡಿದೀರಾ ತಾತಾಶ್ರೀ!’ ಅಂದ ಬಾಲಕ.

‘ಅದಕ್ಕೇನು ಮಾಡಬೇಕು ಮಗನೆ?’ ಅಂದೆ ನಾನು.

‘ಮಾಮಾಶ್ರೀ, 1ರಿಂದ 9ನೇ ಕ್ಲಾಸ್‍ವರೆಗೂ ಸಿಲಬಸ್ಸು ಕಟ್ ಮಾಡಿ ಡಿಸೆಂಬರಿಂದ ಮೂರು ತಿಂಗಳು ಸ್ಕೂಲು ಮಾಡಿದ್ರೆ ನಿಮ್ಮದೇನು ಹೋದತ್ತು? ಹೈಸ್ಕೂಲು ಓದಿ ನಾವೇನು ದೇಶ ಆಳಕ್ಕೆ ಹೋಯ್ತಿವಾ! ಇದುಕ್ಕೆ ಇಷ್ಟೆಲ್ಲಾ ಚರ್ಚೆ, ಮಹಾಭಾರತ ಬೇಕಾ?’ ಅಂದ ಈ ಪ್ರಚಂಡ.

‘ಈ ಮೊಳ್ಳೆಮೀನು ಮಾತಿನಗೇ ಚುರುಕಿನ ಸೊಪ್ಪು ಮಡಗಿರತನೆ, ಬ್ಯಾಡಾ ಕಣ ಬಾರೋ’ ಅಂದ್ರು ತುರೇಮಣೆ.

‘ಆಯ್ತು ನಿನ್ನ ಅಭಿಪ್ರಾಯ ಏನಪ್ಪಾ?’ ಅಂದೆ.

‘ಎಲೆಕ್ಷನ್ನಲ್ಲಿ ಪೇಲಾಗಿರಾ ರಾಜಕಾರಣಿಗಳನ್ನೇ ಪಾಸ್ ಮಾಡಿ ಎಂಎಲ್ಲೆ, ಎಂಪಿ, ಮಂತ್ರಿ ಮಾಡಿಕತ್ತಿದ್ದೀರಿ. ಇದರ ಮುಂದೆ ನಮ್ಮದ್ಯಾವ ಲೆಕ್ಕ. ನಮ್ಮನ್ನೂ ಹಂಗೇ ಪಾಸ್ ಮಾಡಿ?’ ಅಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.