ADVERTISEMENT

ಚುರುಮುರಿ: ವ್ಯಾಧಿ ಬೂದಿ

ಲಿಂಗರಾಜು ಡಿ.ಎಸ್
Published 27 ಅಕ್ಟೋಬರ್ 2020, 19:31 IST
Last Updated 27 ಅಕ್ಟೋಬರ್ 2020, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ಸಾ, ಮನ್ನೆ ದೇವರಗುಡ್ಡದ ಗೊರವಯ್ಯ ವ್ಯಾಧಿ ಬೂದಿ ಆದೀತಲೇ ಪರಾಕ್‍ ಅಂತ ಭವಿಷ್ಯ ಹೇಳ್ಯದೆ. ಸದ್ಯ ಮಾರೀ ಸೋಂಕು ಕೊರೊನಾ ಬೂದಿ ಆದ್ರೆ ಸಾಕಾಗ್ಯದೆಕಣ್ರಿ ಸಾ’ ಎಂದೆ.

‘ಅಲ್ಲ ಕನೋ, ಮೈಗೆ ಬರೋ ವ್ಯಾಧಿ ಬೂದಿ ಆಗಬೌದು, ಆದ್ರೆ ಬುದ್ಧಿಗೆ ಬಂದಿರಾ ವ್ಯಾಧಿ ಬೂದಿ ಆಗದು ಕಷ್ಟ!’ ಅಂದ್ರು ತುರೇಮಣೆ.

‘ಅದ್ಯಾವುದು ಸಾ ಬುದ್ಧಿಗೆ ಬಂದಿರಾ ವ್ಯಾಧಿ? ಯಾರಿಗೆ ಬಂದದೆ?’ ಅಂತ ಆಶ್ಚರ್ಯದಲ್ಲಿ ಕೇಳಿದೆ.

ADVERTISEMENT

‘ದಿನಾ ಪೇಪರ್ ಓದಕುಲ್ಲವಲಾ! ಈ ಉಪಚುನಾವಣೇಲಿ ಪಿತೃಪಕ್ಸ, ಮಾತೃಪಕ್ಸ, ಪ್ಲವರ್ ಪಕ್ಸಗಳ ತುಂಡರಸರು ತಲಾತಟಿಗೆ ಲಡ್ಡುಲಸೆ ಅಂತ ಗೊಳ್ಳೆನರ ಕಿತ್ತೋಗಗಂಟಾ ಬೈಕ್ಯಂಡು ತಮ್ಮ ತಮ್ಮ ಕೊಳಕೆಲ್ಲಾ ಜನಗಳ ಮುಂದುಕ್ಕೆ ತಂದು ಸುರೀತಾವ್ರೆ!’

‘ರಾಜಕೀಯ ರಾಜಕಾಲುವೆ ಆಗೋಗ್ಯದೆ! ಇವುರೆಲ್ಲಾ ಡೌನ್‍ಲೋಡ್ ಮಾಡಿದ ಕೊಳಕಿನ ದುರ್ವಾಸನೆ ತಡೆಯಕಾಯ್ತಿಲ್ಲ ಸಾ’.

‘ಇದು ಮಲರಂಜನೆ ಕನೋ. ಪೆಟ್ರೋಲ್- ಡೀಸೆಲ್‍ ರೇಟೇರಿಸ್ಯರಂತೆ, ಲಸಿಕೆ ಸಿಕ್ಕಿದೋರಿಗೆ ಸೀರುಂಡೆ ಅಂತ ಪುಕಾರಾಗ್ಯದೆ. ಎತ್ತಿಲ್ಲದೋರಿಗೆ ಕ್ವಾಣನೇ ಸಂಜೀವ ಅಂದಂಗೆ, ಇವರು ನಮ್ಮ ನಾಯಕರು ಅಂತ ಇನ್ನೂ ಓಲೈಸಬೇಕಾಗಿರದು ನಮ್ಮ ದುರಾದೃಷ್ಟಕಪ್ಪ. ಕಾಲಭೈರವ ಅದ್ಯಾವಾಗ ಒಳ್ಳೆ ಬುದ್ಧಿ ಕೊಟ್ಟಾನೋ ಕಾಣೆ!’

‘ಮಂತೆ ಅಷ್ಟಿಲ್ಲದೇ ಸರೀಪ್ ಸಾಯೇಬ್ರು ‘ಸೋರುತಿವುದು ಮನೆಯ ಮಾಳಿಗೆ ಅಜ್ಞಾನದಿಂದ’ ಅಂತ ಪದ ಹಾಡಿಲ್ಲವೇ?’ ಅಂದೆ ನಾನು. ಟೀ ಕುಡೀತಾ ಕುಂತುದ್ದ ವಸಂತ ಮುಲುಕಾಡತೊಡಗಿದ.

‘ಇದ್ಯಾಕ್ಲಾ ಸೊಳ್ಳೆಮನಲೀ ಡ್ರಗ್ ಸಿಂಗಲೀಕರ ಥರಾ ಕುಂತಕಡೇನೇ ಕೊಸೀತಿದ್ದಯ್?’ ಅಂತ ಕೇಳಿದೆ. ಅವ ಮೆಲ್ಲಗೆ ಹತ್ತಿರ ಬಂದು ಕೇಳಿದ-‘ಅಲ್ಲ ಕನೋ, ನಮ್ಮ ಸ್ನೇಯಿತ್ರು ಬಡಾ ಮಕಾನ್ ಸರಿಪ್ ಸಾಯೇಬ್ರು ಪದ ಯಾವಾಗ ಬರೆಯಕ್ಕೆ ಸುರು ಮಾಡಿದ್ರು ಸೋರುತಿವುದು ಮನೆಯ ಮಾಳಿಗೆ ಅಂತ’ ಅಂದ. ಆವನ ಅಜ್ಞಾನದ ಮಾತುಗಳಿಗೆ ಮೂಗಂಡುಗ ಸಿಟ್ಟು ಬಂದೋಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.