ADVERTISEMENT

ಚುರುಮುರಿ: ಬೇನೆಯ ಬೇಗೆ

ಬಿ.ಆರ್.ಸುಬ್ರಹ್ಮಣ್ಯ
Published 30 ಅಕ್ಟೋಬರ್ 2020, 19:31 IST
Last Updated 30 ಅಕ್ಟೋಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಮೋಕ್ಷಕ್ಕೆ ಸಾಧನವೀ ಕೊರೊನಾ, ಸೋಂಕೆಂಬುದೇ ಸದ್ಗತಿಗೆ ಪ್ರಧಾನ. ವೀರಮರಣಕ್ಕೆ ವೈರಸ್ಸೇ ಕಾರಣ...’ ಕವನ ಬರೆಯುತ್ತಿದ್ದ ಚಂಬಸ್ಯ, ರುದ್ರೇಶಿಯೆಡೆ ತಿರುಗಿ ‘ಯೆಂಗೈತಲೇ?’ ಎಂದ.

ಆಗ ರುದ್ರೇಶಿ ‘ಇದೇನಲೇ ಅಪಸಕುನದ ಕವನ?’ ಎಂದು ಮುಖ ಸಿಂಡರಿಸಿದ.

‘ಅದ್ಯಾಕ್ಹಂಗೆ ಮಡಿವಂತಿಕಿ ಮಾಡ್ತಿಯ? ಸಾವು ಅಪಸಕುನ ಅಲ್ಲಲೇ. ಮರಣವೇ ಮಾರ್ನವಮಿ ಅಂತ ಕೇಳಿಲ್ಲವೇ?’ ಎಂದ.

ADVERTISEMENT

‘ನೀನೇಳದೂ ದಿಟ ಕಣಲೇ. ಆದ್ರೂ ಏಸ್ ಮಂದಿ ಸದ್ದಿಲ್ದಂಗೆ ಸಿವನ್‍ಪಾದ ಸೇರಿಕ್ಯಂದ್ರು. ನೆನೆಸ್‍ಕ್ಯಂದ್ರೆ ದುಃಖ ಆಗ್ತತಿ!’

‘ಹೌದಲೇ! ಕಲ್ಲುಗುಂಡಿದ್ದಂಗಿದ್ದ ಕಾಳಪ್ಪಜ್ಜ್ ಹೋದ. ಅವ್ನ ಮಗ ಸಿಂಗ್ರಿನೂ ಹೋದ. ನಮ್ ಗೋಪಿಟ್ಟಿ, ಕರೆಮುತ್ಯ, ಪರುಶೀ, ಪುಟ್ಟೀರ... ಎಲ್ಲ ಕ್ಯೂನಲ್ಲಿ ನಿಂತ್‍ಕ್ಯಂದು ಟಿಕೀಟ್ ತಗಂದ್ರು. ಅದುಕ್ಕೇ ನನ್ ಕವನದಲ್ಲಿ, ಕೊರೊನಾ- ನೀನ್ ಮಾಡಿದ್ದು ಸರೀನಾ? ಅಂತ ಪ್ರಶ್ನಿಸ್ತನಿ ನಾನು’.

‘ಆದ್ರೆ, ಸಾಯೋವ್ರೆಲ್ಲ ಕೊರೊನಾದಿಂದ್ಲೇ ಸತ್‍ಹೋಗದುಲ್ಲ. ಕೆಲವ್ರು ಮನಿ ಬೇನೆಯಿಂದಲೂ ಸಾಯ್ತಾರ್ ಕಣ್ಲೇ...’

‘ಮನಿ ಬೇನೆನಾ? ಅದ್ಯಾವ್ದಲೇ ವಸರೋಗ’.

‘ನೋಡಪ್ಪಜ್ಜಿ, ಸಂಜಿಮುಂಜಾನಿ ಬರೇ ರೊಕ್ಕ ರೊಕ್ಕಂತ ಬಂಧು-ಬಳಗ ಸ್ನೇಹಿತ್ರುನ್ನೆಲ್ಲ ದೂರ ಮಾಡ್‍ಕ್ಯತರಲ್ಲ ಅವ್ರು ಸಾಯದು ಮನಿ ಬೇನೆಯಿಂದ. ಲಕ್ಷಗಟ್ಟಲೆ ಲಂಚ ತಗಂದು ಷೇರಿನಾಗೆ ಹಾಕಿ ಕೈ ಸುಟ್‌ಗ್ಯತಾರಲ್ಲ, ಅವ್ರು ಸಾಯದು ಮಾರ್ಕಿಟ್ ಅಟ್ಯಾಕ್‍ನಿಂದ. ಹಡಬೆ ರೊಕ್ಕ ತಂದು ಬಾಜಿ ಕಟ್ಟತಾರಲ್ಲ, ಅವ್ರಿಗೆ ಬೆಟ್ಟಿಂಗ್ ಹ್ಯಾಮರೇಜ್ ಆಕ್ಕತಿ. ಪ್ರಶಸ್ತಿ,
ಪದವಿ, ಪವರ‍್ರಿಗಾಗಿ ಲಾಬಿಗಳನ್ನು ಮಾಡೋರ‍್ಗೆ ಪವರ್ ಸಿರೋಸಿಸ್ ಬರ್ತತಿ. ಈ ಥರ ವಸವಸ ರೋಗಗಳು ಜಗ್ಗಿ ಅದಾವು, ತಿಳ್‍ಕ್ಯ’.

‘ಎಜ್ಜಾಟ್ಲಿ ರೈಟ್ ಕಣಲೇ ರುದ್ರಿ. ಇಪ್ಪಟ್ಟ್ ಇದೇ ಸಬ್ಜೆಕ್ಟ್ ಇಟ್‌ಗ್ಯಂದು ಒಂದು ಪವರ್‌ಫುಲ್ ಕವನ ಬರಿತನಿ’ ಎಂದ ಚಂಬಸ್ಯ ಮತ್ತೆ ಪೆನ್ ಕೈಗೆತ್ತಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.