ADVERTISEMENT

ಹೊಸ ಹತ್ಯಾರುಗಳು

ಸುಮಂಗಲಾ
Published 24 ಏಪ್ರಿಲ್ 2022, 19:31 IST
Last Updated 24 ಏಪ್ರಿಲ್ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಕ್ಕಣ್ಣ ಕಳೆದ ವಾರದಿಂದ, ‘ಬುಲ್ಡೋಜರ್ ಸಪ್ಲೈದು ಹೊಸ ಬಿಸಿನೆಸ್ ಶುರು ಮಾಡತೀನಿ, ನೀ ಸ್ವಲ್ಪ ಬಂಡವಾಳ ಹಾಕು’ ಎಂದು ಒಂದೇ ಸಮನೆ ವರಾತ ಹಚ್ಚಿತ್ತು.

‘ನಾ ಏನ್ ರೊಕ್ಕದ ಗಿಡ ಹಾಕೀನೇನು? ಹಿಂತಾ ಮನೆಮುರುಕ ಕೆಲಸಕ್ಕೆಲ್ಲ ರೊಕ್ಕ ಇದ್ರೂ ಕೊಡಂಗಿಲ್ಲ’ ಎಂದು ಸಮಾ ಬೈದ ಮೇಲೆ ಸುಮ್ಮನಾದ ಬೆಕ್ಕಣ್ಣ, ಲ್ಯಾಪ್‌ಟಾಪಿನಲ್ಲಿ ತಲೆ ಹುದುಗಿಸಿ ಏನೋ ಮಾಡುತ್ತಲೇ ಇತ್ತು.

‘ನಿನ್ ಬಂಡವಾಳನೂ ಬ್ಯಾಡ, ಬಿಟ್ಟಿ ಉಪದೇಶನೂ ಬ್ಯಾಡ. ಸ್ವಂತ ಡಿಸೈನ್ ಕಂಪನಿ ಶುರು ಮಾಡೀನಿ’ ಎಂದು ಇವತ್ತು ಬೀಗುತ್ತ ಹೇಳಿತು.

ADVERTISEMENT

‘ಏನಲೇ ಅದೂ... ಬಂಡ್ವಾಳಿಲ್ಲದ ಬಡಾಯಿ’ ಎಂದು ಕಿಚಾಯಿಸಿದೆ.

‘ವಿಶೇಷ ಟೂಲ್‌ಗಳನ್ನ ವಿನ್ಯಾಸ ಮಾಡೀನಿ’ ಎಂದು ತೋರಿಸತೊಡಗಿತು.

‘ಇದು ರೌಂಡ್ ಬುಲ್ಡೋಜರ್... ಎಲ್ಲಾದರ ಹಂಗೆ ಇದಕ್ಕೂ ಮುಂದೆ ದೊಡ್ಡ ಬ್ಲೇಡ್ ಇರತೈತಿ. ಇದ್ರ ವಿಶೇಷತೆ ಅಂದರ ಯಾವ ಗಲಭೆಕೋರರ ಮನೆ ನಾಶ ಮಾಡಬೇಕಂತ ಸೂಚನೆ ಕೊಟ್ಟರೆ ಸಾಕು, ಒಳಗಿರೋ ಈ ರೌಂಡ್ ಬ್ಲೇಡ್ ಸುತ್ತಲೂ ಹೊರಗೆ ಚಾಚಿ, ಒಂದ್ ನಿಮಿಷದಾಗೆ ಕೆಲಸ ಮುಗಿಸತೈತಿ. ನಮ್ಮಲ್ಲೂ ಬುಲ್ಡೋಜರ್ ಕಾನೂನು ತರೂಣಂತ ಅಶೋಕಣ್ಣ, ಕಟೀಲಣ್ಣ ಕಟಿಪಿಟಿ ಶುರುಮಾಡ್ಯಾರ. ಈ ಡಿಸೈನ್ ಅವರಿಗೆ ಕಳಿಸತೀನಿ’.

‘ಆಮ್ಯಾಗ ಇವು ಹೊಸಾ ನಮೂನಿ ತ್ರಿಶೂಲ ಗಳು. ನೋಡಕ್ಕ ಕೋಲಿನಂಗೆ ಇರತಾವು, ಈ ಬಟನ್ ವತ್ತಿದರ ಸಾಕು ತ್ರಿಶೂಲವಾಗತೈತಿ. ಇವು ವಿಶಿಷ್ಟ ಮಾಯಾ ಕತ್ತರಿಗಳು, ಅಂದ್ರ ವರ್ಚುವಲ್ ಕತ್ತರಿಗಳು... ಸೂಚನೆ ಕೊಟ್ಟರ ಆತು, ಪಠ್ಯಪುಸ್ತಕದೊಳಗ ಯಾವ್ಯಾವುದಕ್ಕೆ ಕತ್ತರಿ ಹಾಕಬಕು ಅಂತ ಅದೇ ನಿರ್ಧಾರ ಮಾಡಿ ತೆಗೆದುಹಾಕತೈತಿ. ಇದು ನಿಮಗೆ ಅಂದರ ಶ್ರೀಸಾಮಾನ್ಯರಿಗೆ ವಿಶೇಷ ಚಿಪ್. ತೆಲಿಗೆ ಇಂಪ್ಲಾಂಟ್ ಮಾಡಿದರಾತು, ನಾವು ಮತ್ತು ಅವರು, ಅವರಿ ಗೇನ್ ಮಾಡಬಕು ಅಂತೆಲ್ಲ ತಂತಾನೆ ತಿಳೀತೈತಿ’.

ಬೆಕ್ಕಣ್ಣ ಹತ್ತಾರು ಹೊಸ ಹತ್ಯಾರುಗಳ ವಿನ್ಯಾಸದ ಜೊತೆಗೆ, ಇವನ್ನು ಆರ್ಡರ್ ಮಾಡಿದ ಗ್ರಾಹಕರ ಪಟ್ಟಿಯನ್ನೂ ತೋರಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.