ADVERTISEMENT

ಚುರುಮುರಿ: ನ್ಯೂ ನಾರ್ಮಲ್

ಲಿಂಗರಾಜು ಡಿ.ಎಸ್
Published 28 ಡಿಸೆಂಬರ್ 2020, 19:31 IST
Last Updated 28 ಡಿಸೆಂಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಈ ವರ್ಸೊಪ್ಪತ್ತೂ ಮಕ್ಕೆ ಮಾಸ್ಕಾಕಿಕ್ಯಂಡು, ಕೈತೊಕ್ಕಂಡು, ದೂರ ನಿಂತುಗಂಡು ಶಂಕೆ ಆವಸಿಕ್ಯಂಡಂಗಾಗ್ಯದೆ ಕಣಲಾ. ನರಾದ ನರೆಲ್ಲಾ ಜೋಮು ಹಿಡಿದೋಗವೆ. ಸಾಕಪ್ಪಾ ನ್ಯೂ ನಾರ್ಮಲ್ ಸವಾಸ!’ ಅಂತ ತುರೇಮಣೆ ಕಣಿ ಹೊಡಿತಿದ್ರು.

‘ನಿಮಗೇನು ತೊಂದ್ರಾದುದ್ದು ಬುಡಿಸಾ. ಕ್ಯಾಮೆ ಬುಟ್ಟು ಬಾಡು ಅಂದ್ರೆ ಬಳ್ಳಾರಿಗಂಟ ಹೋಯ್ತಿದ್ದೋರು ಈಗ ತೊಂದ್ರಾಗದೆ!’ ಅಂದ ಮಾತು ಅವರಿಗೆ ಸಿಟ್ಟು ತರಿಸಿತ್ತು.

‘ಅಯ್ಯೋ ಬೊಡ್ಡಿಹೈದ್ನೆ, ನ್ಯೂ ನಾರ್ಮಲ್ ಪಾಲೋ ಮಾಡಿದ್ರೂ ಕೊರೊನಾ ಜುಮ್ಮನ್ನಲಿಲ್ಲ. ಆದರೆ ನ್ಯೂ ಅಬ್‍ನಾರ್ಮಲವ ತಡೆಯಕಾಯ್ತಿಲ್ಲ ಕನೋ!’ ಅಂತ ಬುಸುಗರೆದರು.

ADVERTISEMENT

‘ನ್ಯೂ ನಾರ್ಮಲ್ ಕೇಳಿವ್ನಿ. ಅದ್ಯಾವುದು ಅಬ್‍ನಾರ್ಮಲ! ಬುಡುಸೇಳಿ’ ಅಂದೆ.

‘ಸುಮ್ಮಗಿರಪ್ಪ, ಕೆದಕಕೋದ್ರೆ ಬಲು ನಾರ್ತದೆ. ಆದ್ರೂ ಕೇಳು! 2021ಕ್ಕೂವೆ ದಿನಸಿ, ಪೆಟ್ರೋಲು, ಚಿನ್ನದ ರೇಟು ಇಳೀತು ಅಂತಿದ್ದಂಗೇ ಏರಿರ್ತದೆ. ರಾಜಕಾರಣಿಗಳು ನಮ್ಮನ್ನ ಕುರಿಗಳು ಅಂದುಕ್ಯಂಡು ಲೇವಡಿ ಮಾತಲ್ಲೇ ವರ್ಸೊಪ್ಪತ್ತೂ ಕಳೀತರೆ. ಕುಮಾರಣ್ಣ ನನಗೂ ಟೇಮು ಬತ್ತದೆ ಅಂತ ವರ್ಸೆಲ್ಲಾ ಕಣ್ಣೀರಾಕ್ತದೆ, ಹುಲಿಯಾ ಜನ ತಪ್ಪುತಿಳಕತರೆ ಅಂತ ಜುಲುಮೆಗೆ ಗುರುಗುಟ್ಟತಿರತದೆ. ಮಂತ್ರಿ ಕನಸು ಕಂಡೋರ್ನ, ಮೀಸಲಾತಿ ಕೇಳಿದೋರ್ನ ಸಮಾಧಾನಿಸಿ ಕುರ್ಚಿ ಭದ್ರ ಮಾಡಿಕ್ಯಳ
ದ್ರಗೇ ರಾಜಾವುಲಿ ವರ್ಸ ಕಳದೋಯತದೆ. ಪಾರಿನ್ನಿನವು ಡ್ರಗ್ ತರುತ್ಲೇ ಇರತವೆ. ಲಂಚ ಸಾಮ್ರಾಜ್ಯದ ಅಕ್ರಮ ಆಚಿಗೆ ಬಂದು ಹಂಗೇ ಇಂಗೋಯ್ತದೆ. ರೈತರು ಡೆಲ್ಲಿ ಚಳೀಲಿ ನಿಗತಕ್ಯಂಡ್ರೂ ಮೋದಿ ಕ್ಯಾರೆ ಅನ್ನದೇ ಮನ್‍ ಕಿ ಬಾತಲ್ಲೇ ದೋಣು ಬಾರಿಸತಿರತದೆ. ಹೊಸ ವೈರಸ್ ಬತ್ತಲೇ ಇರತವೆ. ಸರ್ಕಾರ, ಟ್ಯಾಕ್ಸು ಎಬ್ಬುತಿದ್ರೂ ಇನ್ನೂ ಬದುಕಿದೀವಿ ಕಲಾ’ ದೊಡ್ಡ ಪಟ್ಟಿ ಕೊಟ್ಟರು.

‘ಸಾ, ಟಾಪ್ ನ್ಯೂ ಅಬ್‍ನಾರ್ಮಲ್ ಯಾವುದು?’

‘ಸಭಾಪತಿ ಎಳೆದಾಡಿ ಬಾಗಲಾಕದು, ವದಿಯದು. ಚಂಗುಲು ರಾಜಕೀಯದ ನಿಗರಾಟವೇ ಮುಂದ್ಲ ಟಾಪ್ ನ್ಯೂ ಅಬ್‍ನಾರ್ಮಲ್ ಕನೋ’ ಅವರ ನಿಟ್ಟುಸಿರಲ್ಲಿ ನನಗೂ ಅಬ್ನಾರ್ಮಲ್ ದುರ್ವಾಸನೆ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.