ADVERTISEMENT

ಚುರುಮುರಿ: ಸುವರ್ಣ ಸಂಡಿಗೆ!

ತುರುವೇಕೆರೆ ಪ್ರಸಾದ್
Published 3 ಜೂನ್ 2022, 20:34 IST
Last Updated 3 ಜೂನ್ 2022, 20:34 IST
ಚುರುಮುರಿ: ಸುವರ್ಣ ಸಂಡಿಗೆ!
ಚುರುಮುರಿ: ಸುವರ್ಣ ಸಂಡಿಗೆ!   

‘ರೀ ಅಲಮೇಲಮ್ಮನೋರೇ, ಈ ವರ್ಷ ಏನಾದ್ರೂ ಹೊಸ ಸಂಡಿಗೆ ಇಟ್ರಾ?’ ಎಂದು ಕಾಂಪೌಂಡ್ ಬಳಿ ಬಂದರು ಅಂಬುಜಮ್ಮ.

‘ಅಯ್ಯೋ ಇಲ್ಲ ಕಣ್ರೀ, ಸಂಡಿಗೆನೂ ಇಲ್ಲ ಪೇಣಿನೂ ಇಲ್ಲ. ಹೊತ್ತಲ್ಲದ ಹೊತ್ತಲ್ಲಿ ನೆಂಟರು ಬಂದ್ ಹಾಗೆ ಅಕಾಲದಲ್ಲಿ ಮಳೆ ಹಿಡ್ಕೊಂಡಿತ್ತಲ್ಲ’ ಎಂದು ಅಲವತ್ತುಕೊಂಡರು ಅಲಮೇಲಮ್ಮ.

‘ನಿಜ ರೀ, ಮುಂಚೆ ಬರೀ ಮುಂಗಾರು, ಹಿಂಗಾರು ಮಾರುತ ಅಂತ ಇದ್ದವು, ಈಗ ಇಡೀ ವರ್ಷ ಸೈಕ್ಲೋನು, ವಾಯುಭಾರ ಕುಸಿತ’.

ADVERTISEMENT

‘ಅದೂ ಅಲ್ದೆ ಸಂಡಿಗೆ ಹಾಕಕ್ಕೆ ನಮ್ ಯಜಮಾನ್ರೂ ಫ್ರೀ ಇಲ್ಲವಲ್ಲ! ಹೋದ್ ವರ್ಷ ವರ್ಕ್ ಫ್ರಂ ಹೋಮು ಅಂತ ಮನೇಲೇ ಇದ್ರು. ಅವರನ್ನೇ ಟೆರೇಸ್‌ಗೆ ಹತ್ಸಿ ಸಂಡಿಗೆ ಇಡ್ಸಿದ್ದೆ. ಈ ವರ್ಷ ಆ ಸೌಭಾಗ್ಯನೂ ಇಲ್ಲದಾಗಿದೆ’.

‘ನನ್‌ ಕತೆ ಕೇಳಿ. ಸಂಡಿಗೇನ ಪ್ಲಾಸ್ಟಿಕ್ ಮೇಲೆ ಹಾಕ್ಬಾರ್ದು ನೋಡಿ, ಅದಕ್ಕೇ ನಮ್ಮೆಜಮಾನ್ರ ಪಂಚೆ ಮೇಲೇ ಹಾಕ್ತಿದ್ದೆ. ಪಂಚೆ ಇದ್ರಲ್ವ ಸಂಡಿಗೆ ಹಾಕೋದು ಅಂತ ನಮ್ಮೆಜಮಾನ್ರು ಬರ್ಮುಡಾ ಹಾಕ್ಕೊಂಡೇ ಓಡಾಡಕ್ಕೆ ಶುರು ಮಾಡಿದಾರೆ’.

‘ಪಂಚೆನೋ ಲುಂಗಿನೋ ಹೇಗೋ ಅಡ್ಜೆಸ್ಟ್ ಮಾಡ್ಕೊಬಹುದು. ಆದ್ರೆ ಒಣಗಿಸಕ್ಕೆ ಜಾಗನೇ ಇಲ್ಲ. ಟೆರೇಸ್ ಮೇಲಿಟ್ರೆ ಚಿರಿ ಚಿರಿ ಮಳೆಯ ಪಿರಿ ಪಿರಿ... ಕೆಳಗೆ ಮನೆ ಮುಂದೆ ಹಾಕುದ್ರೆ ಬೀದಿ ನಾಯಿಗಳ ಕಾಟ, ಜೊತೆಗೆ ಮುನಿಸಿಪಾಲಿಟಿ ನೀರಿನ ಪೈಪ್ ಒಡುದ್ರೆ ಹಪ್ಪಳ ಇರ್‍ಲಿ ಅಂಗಳನೇ ಕೊಚ್ಕಂಡ್ ಹೋಗುತ್ತೆ’.

‘ನಿಜ ರೀ, ಹಪ್ಪಳ, ಸಂಡಿಗೆ ಹರವಿ ಹಾಕೋದೇ ಒಂದು ದೊಡ್ ಸಮಸ್ಯೆ ಆಗೋಗಿದೆ. ಅದಕ್ಕೇ ಅದ್ಯಾರೋ ಪುಣ್ಯಾತ್ಗಿತ್ತಿ ಬೆಳಗಾವಿಲಿ ಸುವರ್ಣಸೌಧದ ಮೆಟ್ಟಿಲ ಮೇಲೆ ಶ್ಯಾವಿಗೆ– ಸಂಡಿಗೆ ಒಣ ಹಾಕಿದ್ಲಂತೆ!’

‘ಅದ್ರಲ್ಲಿ ತಪ್ಪೇನಿದೆ? ಶ್ಯಾವಿಗೆ– ಸಂಡಿಗೆ ಅಲ್ದೆ ಜನಪ್ರತಿನಿಧಿಗಳನ್ನ ಒಣಹಾಕಕ್ಕೆ ಆಗುತ್ತಾ? ಅದ್ರಲ್ಲೂ ಒಂದು ಸಮಸ್ಯೆ ಆಗಿದ್ಯಂತೆ’?

‘ಏನಂತೆ?’

‘ಅಯ್ಯೋ, ಸ್ಥಳಮಹಿಮೆ ರೀ! ಆ ಶ್ಯಾವಿಗೆ– ಸಂಡಿಗೆ ಜನಪ್ರತಿನಿಧಿಗಳ ಥರ ಜಿಗುಟಾಗಿ ಪಂಚೆಗೆ ಅಂಟ್ಕೊಂಡ್ ಕೂತಿದೆಯಂತೆ, ಕಿತ್ರೂ ಬರಲ್ಲವಂತೆ. ಸರ್ಕಾರಿ ಜಾಗದಲ್ಲಿ ಸಂಡಿಗೆ ಹಾಕೋದು ದನ ಮೇಯೋಕೇ ಲಾಯಕ್ಕು’ ಎಂದು ನಕ್ಕರು ಅಲಮೇಲಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.