ADVERTISEMENT

ಅಡ್ವಾನ್ಸ್ ಪೇಮೆಂಟ್!

ಬಿ.ಎನ್.ಮಲ್ಲೇಶ್
Published 29 ಏಪ್ರಿಲ್ 2019, 18:30 IST
Last Updated 29 ಏಪ್ರಿಲ್ 2019, 18:30 IST
   

‘ಸಾರ್... ಸಾರ್... ಹಲೋ, ಯಾರಿದ್ದೀರಿ?’

‘ಹೇಯ್, ಯಾರಪ್ಪ ಅದು? ಮುಂದಕ್ಕೆ ಹೋಗು. ಈ ಭಿಕ್ಷುಕರೆಲ್ಲ ಈಗ ಇಂಗ್ಲಿಷ್ ಮಾತಾಡೋಕೆ ಶುರು ಮಾಡಿಬಿಟ್ಟಿದಾರೆ’ ಎಂದು ಗೊಣಗುತ್ತ ದುಬ್ಬೀರ ಮನೆಯಿಂದ ಹೊರಬಂದ.

‘ರೀ ಸ್ವಾಮಿ, ನಾನು ಭಿಕ್ಷುಕ ಅಲ್ಲ, ನಿಮ್ಮ ಕ್ಷೇತ್ರದ ಮತದಾರ. ನಿಮಗೆ ಮತ ಹಾಕಿರೋನು... ವೋಟು ಹಾಕೋಕೆ ಮುಂಚೆ ಮತಪ್ರಭು, ಮತಬಾಂಧವ ಅಂತೆಲ್ಲ ಮನೆ ಬಾಗಿಲಿಗೆ ಬರ್ತೀರಿ. ಈಗ ಭಿಕ್ಷುಕ ಅಂತೀರಾ?

ADVERTISEMENT

‘ಸರಿ ಏನೀಗ? ಎಲೆಕ್ಷನ್ ಮುಗೀತಲ್ಲ, ಮತ್ಯಾಕೆ ಬಂದೆ?’

‘ಊರಿಗೆ ಹೋಗ್‌ಬೇಕು. ಸಾವಿರ ರೂಪಾಯಿ ಕೊಡಿ. ಎಲೆಕ್ಷನ್‍ನಲ್ಲಿ ನಿಮಗೇ ವೋಟು ಹಾಕಿದೀನಿ’.

‘ಹಾಕಿದ್ರೆ? ಅದಕ್ಕೆ ಎಣ್ಣೆ ಕೊಟ್ಟಿಲ್ವ?’

‘ಅದು ಆವತ್ತೇ ಇಳಿದು ಹೋಯ್ತು’.

‘ತಲೆಗೆ ಸಾವಿರದಂತೆ ಎಣಿಸಿ ದುಡ್ಡು ಕೊಟ್ಟಿಲ್ವ?’

‘ಅದು ಖರ್ಚಾಗಿ ಹೋಯ್ತು’.

‘ಅದಕ್ಕೆ ನಾನೇನ್ ಮಾಡ್ಲಿ? ಎಲೆಕ್ಷನ್ ಮುಗಿದ ಮೇಲೆ ಕೊಡೋದು ಗಿಡೋದು ಎಲ್ಲ ಮುಗೀತು. ನೀನು ವೋಟು ಹಾಕಿದೀಯ, ನಾವು ನೋಟು ಕೊಟ್ಟಿದೀವಿ. ದಾನಿಕಿ ದೀನಿಕಿ ಸರಿಪೋಯ...’

‘ಏನ್ ಸರಿಪೋಯ ಸ್ವಾಮಿ? ಒಂದಿನ ಕೊಟ್ರೆ ಸಾಕಾ? ನೀವು ಗೆದ್ದ ಮೇಲೆ ಐದು ವರ್ಷ ಅಧಿಕಾರ ನಡೆಸಲ್ವಾ?’

‘ನಡೆಸ್ತೀವಿ, ನೀನು ಎಲೆಕ್ಷನ್ ದಿವಸ ಸಾಯಂಕಾಲದ ತನಕ ಖಾಲಿ ಬೆರಳು ತೋರಿಸ್ಕಂಡು ಓಡಾಡ್ತಿದ್ದೆ? ಜಾಸ್ತಿ ಕೊಟ್ಟ ಮೇಲೇ ವೋಟಾಕಿದ್ದು. ಹಂಗೇ ನಾವೂ ಗೆದ್ದ ಮೇಲೆ ಐದು ವರ್ಷ ನಿಮಗೆ ಖಾಲಿ ಕೈ ತೋರಿಸ್ಕಂಡ್ ಓಡಾಡ್ತೀವಿ’.

‘ಸ್ವಾಮಿ, ಈಗ ವಾದ ಬೇಡ, ಹಣ ಕೊಡ್ತೀರೋ ಇಲ್ವೋ?’

‘ಇಲ್ಲ, ಮತ್ತೆ ಮುಂದಿನ ಚುನಾವಣೆಗೆ ಕೊಡ್ತೀವಿ, ಆಗ ಬಾ...’

‘ಆಯ್ತು, ಮುಂದಿನ ಎಲೆಕ್ಷನ್‍ಗೆ ಕೊಡೋದ್ರಲ್ಲಿ ಈಗ ಅಡ್ವಾನ್ಸ್ ಕೊಟ್ಟಿರಿ...!’

ದುಬ್ಬೀರ ಮನಸ್ಸಿನಲ್ಲೇ ‘ಎಲಾ ಇವನಾ’ ಅಂದುಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.