ADVERTISEMENT

ಭೂತನಾಥನ ಹೊಸಾ ಪಕ್ಷ

ಲಿಂಗರಾಜು ಡಿ.ಎಸ್
Published 9 ಏಪ್ರಿಲ್ 2019, 20:01 IST
Last Updated 9 ಏಪ್ರಿಲ್ 2019, 20:01 IST
   

ನಮ್ಮ ಬೇತಾಳ, ಪಕ್ಕಾ ರಾಜಕಾರಣಿಯಾಗಿ ಭೂತನಾಥ್ ಅಂತ ಹೆಸರಿಟ್ಟುಕೊಂಡು ಹೊಸ ಪಕ್ಷ ಕಟ್ಟಿತ್ತು. ಆವತ್ತು ಪ್ರೆಸ್ ಕ್ಲಬ್ಬಿನಲ್ಲಿ ಆ ಪಕ್ಷದ ಪ್ರಾರಂಭೋತ್ಸವ. ‘ಮೈ ಡಿಯರ್ ಫ್ರೆಂಡ್ಸ್‌, ನಾನು ಭೂತನಾಥ್!’ ಧ್ವನಿ ಬಂತು. ಅದರೆ ಯಾರೂ ಕಾಣಲೊಲ್ಲರು. ಆದರೂ ಮೊದಲನೇ ಪ್ರಶ್ನೆ ಬಂತು-

‘ಸರ್, ನೀವು ರಾಜಕೀಯಕ್ಕೆ ಬಂದ ಕಾರಣ? ಸರ್, ನಿಮ್ಮ ಪಕ್ಷದ ಅಜೆಂಡಾ ಏನು?’ ಯಾರೋ ಕೇಳಿದರು.

‘ರಾಜಕೀಯ ಶುದ್ಧೀಕರಣ! ಸತ್ತವರು ಚುನಾವಣೆಗೆ ನಿಲ್ಲಬಾರದು ಅಂತ ಯಾವುದೂ ರೂಲ್ಸ್ ಇಲ್ಲ. ನೋಡಿ, ದೇಶದಲ್ಲಿ ಕರ್ನಾಟಕದ ರಾಜಕೀಯ ಅಧೋಃಗತಿಗೆ ಹೋಗಿದೆ. ಹಾಗಾಗಿ ಕರ್ನಾಟಕದ ಭೂತ, ಪ್ರೇತಗಳೆಲ್ಲಾ ಸೇರಿ ಪಕ್ಷ ಕಟ್ಟಿದ್ದೇವೆ’ ಅಂದ್ರು ಭೂತನಾಥ್.

ADVERTISEMENT

‘ಶುದ್ಧೀಕರಣದ ವಿಧಾನ ಹೇಗೆ ಸರ್?’ ಅಂತ ಒಬ್ಬರು ಪ್ರಶ್ನೆ ಕೇಳಿದರು.

‘ಒಳ್ಳೆ ಪ್ರಶ್ನೆ. ನಮ್ಮ ಸರ್ಕಾರದಲ್ಲಿ ತಪ್ಪು ಮಾಡ್ದೋರ‍್ಗೆ ತಕ್ಷಣವೇ ಶಿಕ್ಷೆ. ಲಂಚ ತಗಂಡೋರು ಅಲ್ಲೇ ರಕ್ತಕಾರಿ ಸಾಯ್ತಾರೆ! ಕಾಸಿಗಾಗಿ ಪಕ್ಷಾಂತರ, ಕಸದಲ್ಲಿ ಕಾಸು, ಕಾಸಿಗಾಗಿ ರೋಡು-ಬ್ರಿಡ್ಜು ಮಾಡಿ ಬಿಲ್ಲಿಗೆ 10-25 ಪರ್ಸೆಂಟ್ ಕೊಡೊಹಂಗಿಲ್ಲ’ ಅಂತು ಭೂತ.

‘ಕಾನೂನು-ಸುವ್ಯವಸ್ಥೆ ಹೆಂಗೆ ಸರ್?’

‘ನಾವು ಹೇಳಿದ್ದೇ ನ್ಯಾಯ, ನಮ್ಮದೇ ಕಾನೂನು! ನಮಗೆ ನಿಮ್ಮ ಹಾಗೆ ದುಡ್ಡು-ಕಾಸಿನ ವ್ಯಾಮೋಹ ಇಲ್ಲ. ನಮಗೆ ಆಸ್ತಿ-ಪಾಸ್ತಿ ಏನೂ ಇಲ್ಲ. ಪ್ರಚಾರಕ್ಕೆ ಫಂಡು ಬೇಕಾಗಿಲ್ಲ. ಮನೆ-ಮನೇಗೆ ಹೋಗಿ ನಮ್ಮ ಭೂತಗಳು ಪ್ರಚಾರ ಮಾಡ್ತವೆ. ನೀವು ನಮಗೆ ವೋಟು ಹಾಕದಿದ್ದರೆ ಅಲ್ಲೇ ಬಿದ್ದು ಸಾಯುತ್ತೀರಿ’ ಅಂದರು ಭೂತನಾಥ.

ಜನರೆಲ್ಲಾ ಭಯದಿಂದ ಪೇರಿ ಕಿತ್ತರು. ನಾನು, ‘ಕರೆಕ್ಟ್ ಭೂತನಾಥ್. ಅದು ನಿಜ. ಹಿಂಗೇ ಮಾಡಬೇಕು’ ಅಂತಾ ಕೇಸರಿಭಾತ್ ತಿಂತಾ ಕೂತಿದ್ದೆ. ನನ್ನ ಬಳಿ ಬಂದ ಭೂತನಾಥ ‘ಶಾಭಾಸ್ ಬಡ್ಡೆತ್ತದೆ. ನೀನೆ ನಮ್ಮ ಪಾರ್ಟಿಯ ಸ್ಪೋಕ್ಸ್ ಪರ್ಸನ್’ ಅಂದರು. ಸದ್ಯಕ್ಕೆ ನನಗೂ ಒಂದು ಪಾರ್ಟ್ ಟೈಮ್ ಕೆಲಸಾ ಆಯ್ತಲ್ಲಾ. ಏನಾದರೂ ಕೆಲಸ ಆಗಬೇಕಾದರೆ ನನ್ನನ್ನು ಬಂದು ನೋಡಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.