ADVERTISEMENT

ಕಿಕ್‍ಬ್ಯಾಕ್ ಪುರಾಣ!

ಚುರುಮುರಿ

ಬಿ.ಎನ್.ಮಲ್ಲೇಶ್
Published 20 ಜೂನ್ 2019, 19:45 IST
Last Updated 20 ಜೂನ್ 2019, 19:45 IST
   

‘ಗುರೂ... ಈ ಕಿಕ್‍ಬ್ಯಾಕ್ ಅಂದ್ರೇನು?’

‘ಅಂದ್ರೇ, ಹಿಂದಿನಿಂದ ಜಾಡ್ಸಿ ಒದೆಯೋದು ಅಂತ...’

‘ನಿನ್ತೆಲಿ, ಅಲ್ಲಲೆ ಹಾಲಿ ಮತ್ತು ಮಾಜಿ ಸಿ.ಎಂ.ಗಳು ಯಾವುದೋ ಭೂಮಿ ವಿಷಯಕ್ಕೆ ಪರಸ್ಪರ ಕಿಕ್‍ಬ್ಯಾಕ್ ಆರೋಪ ಮಾಡ್ತಿದಾರೆ. ಆದ್ರೆ ನೀನು ಹೇಳೋ ಕಿಕ್‍ಬ್ಯಾಕ್ ಅರ್ಥ ಇದಕ್ಯಾಕೋ ಹೊಂದಿಕೆ ಆಗ್ತಿಲ್ಲಪ್ಪ...’

ADVERTISEMENT

‘ಹೌದಾ? ಈಗ ‘ಕಿಕ್’ ಅಂದ್ರೆ ಏನು? ಖುಷಿ, ಜೋಶ್ ಅಂತ ಅರ್ಥ. ‘ಬ್ಯಾಕ್’ ಅಂದ್ರೆ ಹಿಂದಕ್ಕೆ ಕೊಡೋದು, ವಾಪಸ್ ಕೊಡೋದು ಅಂತ. ಒಬ್ರಿಗೆ ಖುಷಿಯಾಗೋ ಅಂತ ಕೆಲಸ ಮಾಡಿಕೊಟ್ರೆ ಅದಕ್ಕೆ ಅವರು ವಾಪಸ್ ಹಣ, ಒಡವೆ, ವಸ್ತು ಇತ್ಯಾದಿ ಕೊಡ್ತಾರಲ್ಲ, ಅದನ್ನ ‘ಕಿಕ್‍ಬ್ಯಾಕ್’ ಅಂತಾರೆ...’

‘ಹೌದಾ? ನಾನೆಲ್ಲೋ ನೀನು ಈ ಕತ್ತೆಗಳು, ಕುದುರೆಗಳು ಹಿಂದಿನಿಂದ ಜಾಡ್ಸಿ ಒದೀತಾವಲ್ಲ, ಅದನ್ನೇ ಕಿಕ್‍ಬ್ಯಾಕ್ ಅಂತ ಹೇಳಿದೆ ಅನ್ಕಂಡಿದ್ದೆ...’

‘ಅದೂ ಒಂಥರಾ ಕಿಕ್‍ಬ್ಯಾಕೇ... ಅವಕ್ಕೆ ಕಿರಿಕಿರಿಯಾದ್ರೆ ಮಾತ್ರ ಕಿಕ್‌ಬ್ಯಾಕ್ ಮಾಡ್ತವೆ. ಖುಷಿಯಾದ್ರೆ ಬಾಲ ಅಲ್ಲಾಡಿಸ್ತವೆ...’

‘ಅವೇನೋ ಇರೋ ಬಾಲ ಅಲ್ಲಾಡಿಸ್ತವೆ ಬಿಡಲೆ, ಈ ರಾಜಕಾರಣಿಗಳ ತರ ಇಲ್ಲದ ಬಾಲ ಅಲ್ಲಾಡಿಸ್ಕಂಡು ಹೋಗಲ್ಲ. ಅದಿರ್‍ಲಿ, ಈಗ ಕೆಲವರು ತಮ್ಮ ಮುಖಂಡರ ವಿರುದ್ಧನೇ ಪರೋಕ್ಷವಾಗಿ ಟೀಕೆ ಮಾಡ್ತಿರ್ತಾರಲ್ಲ... ಅದಕ್ಕೇನಂತ ಕರೀತಾರೆ?’

‘ಅದು ‘ಬ್ಯಾಕ್ ಕಿಕ್’ ಅಂತ... ಹಿಂದಿನಿಂದ ಮಾತಿನ ಏಟು ಕೊಡೋದು...’

‘ಕೆಲವರು ‘ರೋಷ’ದಿಂದ ನೇರಾನೇರ ಮಾತಾಡ್ತಾರಲ್ಲ, ಅದು...?’

‘ಅದು ಡೈರೆಕ್ಟ್ ಕಿಕ್. ಅಂಥವರಿಗೆ ಹೈಕಮಾಂಡ್ ಪೆನಾಲ್ಟಿ ಕಿಕ್ ಕೊಡೋ ಪದ್ಧತಿ ಇದೆ... ಈಗಾಗ್ಲೆ ಒಬ್ಬರಿಗೆ ಕೊಟ್ಟಿರಬೇಕಲ್ಲ?’

‘ನೀನು ಎಲ್ಲೆಲ್ಲಿಗೋ ಹೋದೆ. ಇರ್‍ಲಿ, ಈಗ ಇನ್ನೊಂದು ಪ್ರಶ್ನೆ. ‘ಕಿಕ್ ಔಟ್’ ಅಂದ್ರೆ ಏನು?’

‘ಅದನ್ನ ಬಿಡಿಸಿ ಹೇಳಾಕೆ ಈಗ ಟೈಂ ಇಲ್ಲ. ರಾತ್ರಿ ಗುಂಡು ಹಾಕ್ಸು. ಅಲ್ಲಿ ಎಲ್ಲ ಹೇಳ್ತೀನಿ...’

‘ದುಡ್ಡಿಲ್ಲ ಕಣಲೆ... ಮಂತ್ ಎಂಡು...’

‘ಅದ್ಕೇ ಹೇಳಿದ್ದು... ಗುಂಡು ಹಾಕ್ಸು, ‘ಕಿಕ್’ ಸಿಗುತ್ತೆ. ಬಿಲ್ ಕೊಟ್ಟಾಗ ದುಡ್ಡಿಲ್ಲ ಅನ್ನು, ಆಗ ಬಾರ್‍ನೋರು ನಿನ್ನ ‘ಕಿಕ್ ಔಟ್’ ಮಾಡ್ತಾರೆ...’

‘ಅಂದ್ರೆ?’

‘ಒದ್ದು ಹೊರಗೆ ಹಾಕ್ತಾರೆ ಅಂದೆ...!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.