ADVERTISEMENT

ಚುರುಮುರಿ: ಜಿಗಿತ ಶೂರರು

ಸುಮಂಗಲಾ
Published 23 ಜನವರಿ 2022, 19:31 IST
Last Updated 23 ಜನವರಿ 2022, 19:31 IST
   

‘ಹೂವಿಂದ ಹೂವಿಗೆ ಹಾರುವ ದುಂಬಿ’ ಹಾಡಿನ ಧಾಟಿಯಲ್ಲಿ ಬೆಕ್ಕಣ್ಣ ‘ಪಕ್ಷದಿಂದ ಪಕ್ಷಕೆ ಹಾರುವ ರಾಜಕಾರಣಿ’ ಎಂದು ರಾಗವಾಗಿ ಹಾಡಿ
ಕೊಳ್ಳುತ್ತಿತ್ತು.

‘ಎಷ್ಟ್ ಮಸ್ತ್ ಹಾಡ್ತೀಯಲೇ... ಟೀವಿ ರಿಯಾಲಿಟಿ ಶೋಗೆ ಪ್ರ್ಯಾಕ್ಟೀಸ್ ಮಾಡಾಕೆ ಹತ್ತೀಯೇನ್’ ಎಂದೆ ಅಚ್ಚರಿಯಿಂದ.

‘ಬಿಡತ್ತ... ಟೀವಿ ರಿಯಾಲಿಟಿ ಶೋ ನಿವಾಳಿಸಿ ವಗಿಯೂ ಹಂಗ ಎಲ್ಲಾ ಕಡಿಗಿ ಇದೇ ರಿಯಾಲಿಟಿ ಶೋ ನಡದೈತಲ್ಲ. ಒಲಂಪಿಕ್ಸಿನಾಗೆ ಪಕ್ಷದಿಂದ ಪಕ್ಷಕ್ಕೆ ಜಿಗಿಯೂ ಸ್ಪರ್ಧೆ ಇಟ್ಟರ ಚಿನ್ನ, ಬೆಳ್ಳಿ, ಕಂಚು ಎಲ್ಲಾ ಪದಕ ನಮ್ಮವ್ರಿಗೇ ಸಿಗತೈತಿ ಬಿಡು’ ಎಂದು ಕುಹಕವಾಡಿತು.

ADVERTISEMENT

‘ಯಾವ ಪಕ್ಷದಿಂದ ಯಾವ ಪಕ್ಷಕ್ಕೆ ಎಷ್ಟ್ ಮಂದಿ ಜಿಗಿದಾರೆ ಅಂತ ಲೆಕ್ಕ ಮಾಡಿ ಹೇಳು ನೋಡೂಣು’ ಅಂತ ಮರುಪ್ರಶ್ನೆ ಮಾಡಿತು.

‘ಇದೇನ್ ಥಟ್ ಅಂತ ಹೇಳಿ ಕಾರ್ಯಕ್ರಮ ಅಂತ ಮಾಡೀಯೇನು... ನಾ ಹೀಂಗ ಬೆರಳು ಮಡಚಿ ಲೆಕ್ಕ ಹಾಕೂದ್ರಾಗೆ ಇನ್ನಾ ನಾಕ್ ಮಂದಿ ಒಂದ್ ಕಡಿಯಿಂದ ಇನ್ನೊಂದ್ ಕಡಿಗಿ ಫಟ್ ಅಂತ ಜಿಗಿದಿರ್ತಾರ. ಜಿಗಿತಕ್ಕೆ ಟಿಕೀಟು ಕೊಡಲಿಲ್ಲ ಅನ್ನೂದೆ ವಂದ್ ಕಾರಣ’ ನಾನು ರೇಗಿದೆ.

‘ಅದೇ ದೊಡ್ಡ ಕಾರಣ ಅಲ್ಲೇನ್ ಮತ್ತ... ನಿಮಗ ಶ್ರೀಸಾಮಾನ್ಯರಿಗೆ ಸೇವಾ ಮಾಡಾಕೆ ಆಗಲಿಲ್ಲ ಅಂತ ಜಿಗಿಬೇಕೇನ್’ ಎಂದು ಜಿಗಿತಶೂರರನ್ನು ಸಮರ್ಥಿಸಿಕೊಂಡ ಬೆಕ್ಕಣ್ಣ ಟಿ.ವಿ. ನೋಡತೊಡಗಿತು.

‘ಏ ನೋಡಿಲ್ಲಿ... ಉತ್ತರಪ್ರದೇಶದಾಗೆ ನಮ್ ಯೋಗಿಮಾಮನ ಪ್ರಚಾರದ ಬಸ್ ಹೊಂಟೈತಿ...’ ಎಂದು ವದರಿತು.

‘ಅದ್ ಇಂಗ್ಲಿಷ್ ಟೀವಿ ವಾಹಿನಿ ಬಸ್ಸು. ಮ್ಯಾಲೆ ನೋಡು... ಆ ಟೀವಿ ವಾಹಿನಿ ಲೋಗೊ ಐತಿ’ ನಾನು ಬಸ್ಸಿನ ಮೇಲಿದ್ದ ಫಲಕ, ಲೋಗೊ ತೋರಿಸಿದೆ.

‘ಲೋಗೊ ಯಾವುದಿದ್ದರೆ ಏನು? ಅದಕ್ಕೆ ಫ್ಲ್ಯಾಗ್ ತೋರಿಸಿ ಆಶೀರ್ವಾದ ಮಾಡಿದ್ದು
ನಮ್ ಯೋಗಿಮಾಮ. ಬಸ್ಸು ಟೀವಿ
ವಾಹಿನಿದಾದರೇನಾತು, ಅದು ಹೋಗೂ ರಸ್ತೆ, ಡ್ರೈವರ್‍ರೂ, ಎಂಜಿನ್ನೂ, ಎಲ್ಲಾ ನಮ್ಮ ಮಾಮನದು’ ಬೆಕ್ಕಣ್ಣ ಹೆಮ್ಮೆಯಿಂದ ಉಲಿಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.