ADVERTISEMENT

‘ಹಂಗ್‌’ ಆದ್ರೆ ಹಿಂಗಾಗ್ತೀನಿ...!

ಗುರು ಪಿ.ಎಸ್‌
Published 9 ಜುಲೈ 2019, 20:00 IST
Last Updated 9 ಜುಲೈ 2019, 20:00 IST
.
.   

‘ನೀನೇ ವಿಶೇಷ’ ಎನ್ನುತ್ತಾ ಗುಲಾಬಿ ಹೂವನ್ನು ಕೈಯಲ್ಲಿ ಹಿಡಿದು, ಪ್ರೇಯಸಿ ಮುಂದೆ ಮಂಡಿಯೂರಿ ಕುಳಿತ ವಿಜಿ. ‘ನಿನಗೇನು ಅರ್ಹತೆ ಇದೆ ಅಂತ ನಿನ್ನ ಪ್ರೀತಿಸಲಿ, ಆಸ್ತೀನಾ–ಸ್ಟೇಟಸ್ಸಾ... ಏರ್‌ಪೋರ್ಟ್‌ ಮೆಟ್ಟಿಲಾದರೂ ಹತ್ತಿದೀಯಾ’ ಅವಮಾನಿಸಿದಳು ಗೆಳತಿ.

‘ಎಲೆಕ್ಷನ್‌ಗೆ ನಿಲ್ತಿದ್ದೀನಿ, ಗೆದ್ರೆ ಮಿನಿಸ್ಟರ್‌ ಆಗಿಬಿಡ್ತೀನಿ’ ಕನಸು ಹೇಳಿಕೊಂಡ ವಿಜಿ. ‘ಐದಾರು ಸಲ ಗೆದ್ದವರೇ ಮಂತ್ರಿ ಆಗೋಕಾಗಲ್ಲ, ಇನ್ನು ನೀನು ಎಮ್ಮೆಲ್ಲೇನೇ ಆಗಿಲ್ಲ, ಮಿನಿಸ್ಟರ್‌ ಆಗಿಬಿಡ್ತೀಯಾ’ ತಣ್ಣೀರೆರಚಿದಳು.

‘ಅವೆಲ್ಲ ಪಕ್ಷದವರಿಗೆ, ನಾನು ಇಂಡಿಪೆಂಡೆಂಟು. ‘ಹಂಗ್‌’ ಆದ್ರೆ, ಹೆಂಗಾದರೂ ನ್ಯಾಷನಲ್‌ ಪಾರ್ಟಿಯವರು ನನ್ನ ಹತ್ರ ಬರ್ತಾರೆ... ಏರ್‌ಪೋರ್ಟ್‌ ಮೆಟ್ಟಿಲಾದರೂ ಹತ್ತಿದೀಯಾ ಅಂದ್ಯಲ್ಲ, ಲೀಡರ್‌ಗಳೇ ಬಂದು ನನ್ನನ್ನ ಸ್ಪೆಷಲ್‌ ಫ್ಲೈಟ್‌ನಲ್ಲಿ ಕರ್ಕೊಂಡು ಹೋಗ್ತಾರೆ. ಕೋಟಿಗಟ್ಟಲೆ ದುಡ್ಡು ಬಂದು ಮನೆಗೆ ಬೀಳುತ್ತೆ... ಮಂತ್ರಿಗಿಂತಾ ಸ್ಟೇಟಸ್‌ ಬೇಕಾ ನಿನಗೆ’ ಆಶಾಗೋಪುರ ಕಟ್ಟುತ್ತಾ ಹೋದ ವಿಜಿ.

ADVERTISEMENT

‘ಇದ್ದಕ್ಕಿದ್ದಂತೆ ಕೋಟಿಗಟ್ಟಲೆ ದುಡ್ಡು ಬಂದ್ರೆ ಅನುಮಾನ ಬರಲ್ವಾ... ಐಟಿ ರೇಡ್‌ ಆಗಲ್ವಾ’ ಗೆಳೆಯ ಮಂತ್ರಿಯಾಗೇ ಬಿಟ್ಟನೇನೋ ಅನ್ನುವಂತೆ ಕೇಳಿದಳು ಗೆಳತಿ. ‘ಅಯ್ಯೋ ಹುಚ್ಚಿ... ಸೆಂಟ್ರಲ್‌ನಲ್ಲಿ ಪವರ್‌ನಲ್ಲಿರೋ ಪಾರ್ಟಿಯ ರಾಜ್ಯ ಸರ್ಕಾರದಲ್ಲಿಯೇ ಮಿನಿಸ್ಟರ್‌ ಆದ್ರೆ ಎಲ್ಲಿಯ ಐಟಿ, ಇನ್ನೆಲ್ಲಿಯ ರೇಡು’ ಕಾಲರ್‌ ಏರಿಸಿದ ವಿಜಿ.

‘ಉಳಿದ ಶಾಸಕರು ಬಾರದಿದ್ರೆ, ಬೇರೆ ಪಕ್ಷದವರ ಸರ್ಕಾರ ರಚನೆಯಾದರೆ ಏನ್ಮಾಡ್ತೀಯ’ ಪ್ರೇಯಸಿಯ ಪ್ರಶ್ನಾವಳಿ ಮುಂದುವರಿಯಿತು. ‘ನಾನು ಇಂಡಿಪೆಂಡೆಂಟ್‌ ಅಲ್ವಾ, ಸರ್ವ ಸ್ವತಂತ್ರ. ಆ ಪಕ್ಷಕ್ಕೆ ಹಾರಿ, ಅಲ್ಲಿ ಮಂತ್ರಿಯಾಗಿ ಬಿಡ್ತೀನಿ’ ನಕ್ಕ ವಿಜಿ.

‘ಅಧಿಕಾರ– ಹಣದ ಹಿಂದೆ ಬಿದ್ದವನು, ಒಂದು ಪಕ್ಷಕ್ಕೆ ನಿಷ್ಠವಾಗಿ ಇರದವನು, ಕೊನೆಯವರೆಗೂ ನನಗೆ ನಿಷ್ಠನಾಗಿ ಇರ್ತೀಯ ಅನ್ನೋಕೆ ಏನ್‌ ಗ್ಯಾರಂಟಿ? ನಾನು ನಿನ್ನ ಪ್ರೀತಿಸಲ್ಲ’ ಕಡ್ಡಿ ಮುರಿದಂತೆ ಹೇಳಿದಳು ಗೆಳತಿ. ಆಕಾಶಕ್ಕೇರಿದ ತಕ್ಷಣವೇ ಪಾತಾಳಕ್ಕೆ ಬಿದ್ದ ಅನುಭವವಾದಂತೆ ಬಾಯ್ತೆರೆದು ನಿಂತ ವಿಜಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.