ADVERTISEMENT

ಎಮ್ಮೆಲ್ಲೆ ಸ್ಪೀಕಿಂಗ್‍!

ಬಿ.ಎಂ.ಹನೀಫ್
Published 24 ಜುಲೈ 2019, 19:45 IST
Last Updated 24 ಜುಲೈ 2019, 19:45 IST
   

ಹಲೋ... ಸಾರ್, ನಿಮ್‍ ಸಂದರ್ಶನ ಬೇಕು.

ಎಮ್ಮೆಲ್ಲೆ ಸ್ಪೀಕಿಂಗ್‍, ನಿಮ್ಗೆ ಯಾರು ಬೇಕು?

ನಾನ್ ಸಂಕ್ಟೇಶ ಮಾತಾಡ್ತಿದೀನಿ. ನೀವು ಅತೃಪ್ತ ಶಾಸಕರಲ್ವಾ ಸಾರ್...?

ADVERTISEMENT

ರೀ ಸಂಕ್ಟೇಶ್‍, ನೀವು ಅತೃಪ್ತ ಅತೃಪ್ತ... ಅಂತ ಕರೆದು ನನ್ಹೆಸರೇ ಮರೆತೋಗಿದೆ ಕಣ್ರೀ. ಈಗ ನಾನು ಅತೃಪ್ತ ಅಲ್ಲ, ಸಂತೃಪ್ತ ಶಾಸಕ!

ಅಂದ್ರೆ ದೋಸ್ತಿ ಸರ್ಕಾರ ಬಿದ್ಹೋಗಿರೋದರಿಂದ ನೀವು ಸಂತೃಪ್ತ ಆಗಿದ್ದೀರಾ?

ಹ್ಞೂಂ, ನಾವು ಮುಂಬೈಗೆ ಹಾರಿದ ಬಳಿಕ ತಾನೇ ನೀವು ನಮ್ಮನ್ನು ಅತೃಪ್ತ ಶಾಸಕರು ಅಂದಿದ್ದು...? ಇನ್ಮುಂದೆ ಬೆಂಗಳೂರಲ್ಲಿರೋ ದೋಸ್ತಿ ಪಕ್ಷದ ಶಾಸಕರನ್ನು ಅತೃಪ್ತ ಶಾಸಕರೆಂದು ಕರೀರಿ.

ಆದ್ರೆ ಬಿಜೆಪಿಯ ಹೊಸ ಸರ್ಕಾರದಲ್ಲಿ ನಿಮ್ಮನ್ನು ಮಂತ್ರಿ ಮಾಡದಿದ್ದರೆ ಮತ್ತೆ ಅತೃಪ್ತ ಶಾಸಕರು ಅನ್ನಬಹುದೇ?

ಆ ಅತೃಪ್ತ ಶಬ್ದ ಕೇಳಿ ರೋಸಿದ್ದೇನೆ. ಆಗ ಬೇಕಿದ್ದರೆ ಅರೆತೃಪ್ತ ಶಾಸಕ ಎನ್ನಿ.

ಸಮ್‍–ತೃಪ್ತ ಎಂದರೆ?

ಅದನ್ನು ಕೂಡಿಸಿ ಓದಿದರೆ ಸಂತೃಪ್ತ ಅಂತ ತಿಳ್ಕೊಂಡು ಬಿಜೆಪಿಯವರು ಮಂತ್ರಿ ಸ್ಥಾನ ಕೊಡದೇ ಇರಬಹುದು, ಬೇಡ ಸಂಕ್ಟೇಶ್.

ಸ್ಪೀಕರ್ ನಿಮ್ಮನ್ನು ಡಿಸ್‍ಕ್ವಾಲಿಫೈ ಮಾಡಿದರೆ ಅನರ್ಹ ಶಾಸಕ ಅನ್ಬೇಕಾಗುತ್ತೆ ಸಾರ್.

ಅನರ್ಹ ಅಂದ್ರೆ ಬೇರೆ ಅರ್ಥ ಬರುತ್ತಲ್ವಾ! ಬದಲಿಗೆ ಬೇರೆ ಶಬ್ದ ಇಲ್ವಾ?

ಇಲ್ಲ ಸಾರ್. ಒಂದೋ ಅರ್ಹ, ಇಲ್ಲಾ ಅನರ್ಹ. ಹೋಗ್ಲಿ, ಈಗ ನೀವು ವಾಪಸಾದ ಬಳಿಕ ನಿಮಗೆ ಸಣ್ಣ ಉಳಿತಾಯದಂತಹ ಸಣ್ಣ ಖಾತೆ ಕೊಟ್ರೆ ‘ಅತೃಪ್ತ ಸಂತೃಪ್ತ’ ಶಾಸಕ ಅಂತ ಕರೆಯಬಹುದಾ?

ರೀ ಸಂಕ್ಟೇಶ್‍.. ಏನ್ರೀ ಇದು?

ಇರಿ ಸಾರ್. ಅಕಸ್ಮಾತ್‍ ನೀವು ಸಚಿವರಾಗಿ, ಆರು ತಿಂಗಳೊಳಗೆ ಚುನಾವಣೆಗೆ ಸ್ಪರ್ಧಿಸಿ ಅಲ್ಲಿ ಸೋತರೆ ‘ಅತೃಪ್ತ ಸಂತೃಪ್ತ ನಿವೃತ್ತ’ ಶಾಸಕ ಎನ್ನಬಹುದಾ?

ಏನ್ರೀ ಇದೂ?

ಇನ್ನೂ ಇದೆ ಸಾರ್. ಅಕಸ್ಮಾತ್ ಸ್ಪೀಕರ್ ನಿಮ್ಮ ರಾಜೀನಾಮೆಯನ್ನು ಸ್ವೀಕಾರ ಮಾಡದೆ ಒಂದಾರು ತಿಂಗಳು ಹಾಗೇ ಇಟ್ಕೊಂಡ್ರೆ...

ಅತೃಪ್ತಾತ್ಮ ಶಾಸಕ ಅಂತ ಬರ್ಕೊಂಡ್ಬಿಡಿ ಸಂಕ್ಟೇಶ್‌...

ಫೋನ್‍ ಕಟ್‍ ಆಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.