ADVERTISEMENT

ಆಫ್ ಅಂಡ್‌ ಆನ್!

ಗುರು ಪಿ.ಎಸ್‌
Published 27 ಆಗಸ್ಟ್ 2019, 20:00 IST
Last Updated 27 ಆಗಸ್ಟ್ 2019, 20:00 IST
   

‘ಯಾಕ್ ಸಾರ್ ಕಂಪನಿ ಮುಚ್ಚಿದ್ರಿ’ ಅಸಹಾಯಕನಾಗಿ ಕೇಳ್ದ ಮುದ್ದಣ್ಣ.

‘ಈ ದೇಶಕ್ಕೆ ಹೇಗಾದರೂ ಸೇವೆ ಸಲ್ಲಿಸಬೇಕು ಅಂದ್ಕೊಂಡಿದ್ದೆ. ಅದು ಈಗ ಈಡೇರಿದಂತಾಯ್ತು’ ಎಂದ ವಿಜಿ.

‘ಕಂಪನಿ ಮುಚ್ಚೋದಕ್ಕೂ, ಈ ದೇಶಸೇವೆಗೂ ಏನ್ ಸಾರ್ ಸಂಬಂಧ’ ಬಂದ ಕೋಪವನ್ನು ತೋರ್ಪಡಿಸದೆ ಹೇಳಿದ ಮುದ್ದಣ್ಣ.

ADVERTISEMENT

‘ಸಾಮಾಜಿಕ ಸಮಸ್ಯೆಗಳ ಅರಿವಿಲ್ಲದ ನಿಮ್ಮಂಥವರಿಗೆ ದೇಶಭಕ್ತಿ ಅನ್ನೋದೇ ಇರೋದಿಲ್ಲ ಬಿಡು. ನನ್ನ ಕಂಪನೀಲಿ ಎರಡು ಸಾವಿರ ಜನ ಕೆಲಸ ಮಾಡ್ತಿದ್ರು. ಅವರಲ್ಲಿ ಒಂದೂವರೆ ಸಾವಿರ ಜನ ಬೈಕು, ಕಾರು ತರೋರು. ಅದರಿಂದ ಎಷ್ಟು ಪೆಟ್ರೋಲ್ ವೇಸ್ಟಾಗ್ತಿತ್ತು, ವಾಯುಮಾಲಿನ್ಯ ಆಗ್ತಿತ್ತು. ಈಗ ಅದೆಲ್ಲಾ ತಪ್ತಾ?’

‘ಹ್ಞೂಂ’.

‘ಇನ್ನು, ಬೆಳಿಗ್ಗೆ 10ಕ್ಕೆ ಬಂದು ರಾತ್ರಿ 12ಕ್ಕೆ ನೀನು ಮನೆಗೆ ಹೋಗ್ತಿದ್ದೆ. ಆರೋಗ್ಯ ಪದೇ ಪದೇ ಕೆಡ್ತಿತ್ತು. ಈಗ ಮನೆಯಲ್ಲೇ ಇರೋದ್ರಿಂದ ನಿನಗೆ ಆ ಸಮಸ್ಯೆ ಬರೋದೇ ಇಲ್ಲ, ಅಲ್ವಾ?’

‘ಹ್ಞೂಂ’.

‘ದೇಶದಲ್ಲಿ ನೀರಿನ ಸಮಸ್ಯೆ ಎಷ್ಟೊಂದಿದೆ. ಆದ್ರೆ ನೀವೆಲ್ಲ ಕೆಲಸಗಾರರು ದಿನಕ್ಕೆ ಎಂಟು ಸಲ ‘ಅಲ್ಲಿಗೆ’ ಹೋಗಿ ಬರ್ತಿದ್ರಿ. ಈಗ ಮನೆಯಲ್ಲೇ ಇರೋದ್ರಿಂದ ಜಾಸ್ತಿ ಬಾಯಾರಿಕೆಯೂ ಆಗಲ್ಲ. ಆಫೀಸ್‌ಗೆ ಬರೋ ಚಿಂತೆ ಇಲ್ದಿರೋದ್ರಿಂದ ನಿತ್ಯ ಸ್ನಾನದ ಅವಶ್ಯಕತೆಯೂ ಇಲ್ಲ. ನೀರು ಉಳಿಸಿ, ದೇಶ ಉಳಿಸಿ ಅನ್ನೋದನ್ನ ನಾನು ಕಾರ್ಯರೂಪಕ್ಕೆ ತಂದಂತಾಗಲಿಲ್ವ?’

‘ಹ್ಞೂಂ’.

‘ಕಂಪನಿಗೆ ಬೇಕಾದ ಕುರ್ಚಿ, ಟೇಬಲ್ಲು, ಕಂಪ್ಯೂಟರ್, ಎ.ಸಿ.ನೆಲ್ಲ ತಯಾರಿಸೋ ಕಾರ್ಖಾನೆಗಳಿಂದ ಶಬ್ದಮಾಲಿನ್ಯ, ಜಲಮಾಲಿನ್ಯ ಆಗುತ್ತೆ. ಈಗ ಅದೆಲ್ಲ ತಪ್ಪಿದಂತಾಯ್ತಲ್ವ?’

‘...’

‘ಯಾಕ್ ಮುದ್ದಣ್ಣ. ಹ್ಞೂಂಗುಟ್ಟಲಿಲ್ಲ’.

‘ಹ್ಞೂಂ ಅಂದ್ರೆ ಉಸಿರು ಹೊರಗೆ ಬಂದು ವಾಯುಮಾಲಿನ್ಯ ಆಗುತ್ತೆ ಸಾರ್. ಅದಕ್ಕೆ ಉಸಿರಾಡೋದನ್ನೇ ಬಂದ್ ಮಾಡೋಣ ಅಂದ್ಕೊಂಡಿದೀನಿ’ ಎಂದ ಮುದ್ದಣ್ಣ.

'ಗುಡ್, ಈಗ ನಿಜವಾದ ದೇಶಭಕ್ತನಾದೆ’ ಎಂದು ಮುದ್ದಣ್ಣನ ಬೆನ್ನು ತಟ್ಟಿದ ವಿಜಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.