ADVERTISEMENT

ಒಂದಕ್ಕೇ ಡಿಮ್ಯಾಂಡ್!

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 20:00 IST
Last Updated 18 ಸೆಪ್ಟೆಂಬರ್ 2019, 20:00 IST
   

‘ನೀ ಏಕಾಂಗಿಯಾಗಮ್ಮ, ನೀ ಪ್ರೇಮಾಂಗಿಯಾಗಮ್ಮ, ನಿನ್ನ ನೀನು ಪ್ರೀತಿಸದೆ, ಕಾಣೋದು ಹೇಗೆ ಈ ಲೋಕಾನ...’ ರವಿಚಂದ್ರನ್ ಸಿನಿಮಾದ ಹಾಡು ಕೇಳ್ತಾ ಫುಲ್ ಫೀಲಿಂಗ್‌ನಲ್ಲಿ ಕುಳಿತಿದ್ದ ವಿಜಿ.

‘ಏನಾಯ್ತು ಸರ್...?’ ಕೇಳ್ದ ಮುದ್ದಣ್ಣ.

‘ಏನಿಲ್ಲ, ಏಕೋ ಒಂಟಿ ಅನಿಸ್ತಿದೆ. ಒಂಥರಾ ಬೇಜಾರು...’

ADVERTISEMENT

‘ಬೇಜಾರೇಕೆ ಸರ್? ಖುಷಿ ಪಡಬೇಕು ನೀವು. ಈಗ ಒಂದಕ್ಕೇ ಡಿಮ್ಯಾಂಡ್ ಜಾಸ್ತಿ. ಒನ್ ಮ್ಯಾನ್, ಒನ್ ನೇಸನ್, ಒನ್ ಎಲೆಕ್ಸನ್, ಒನ್ ರಿಲಿಜನ್, ಒಂದೇ ಭಾಷೇಲಿ ಕನ್ವರ್ಸೇಸನ್... ಇನ್ನೂ ಏನೇನೆಲ್ಲಾ. ಈಗ ನೀವೂ ಒಬ್ರೇ ಆಗಿರೋದ್ರಿಂದ ಮಾಡಿ ಸೆಲಬ್ರೇಸನ್...’ ನಕ್ಕ ಮುದ್ದಣ್ಣ.

‘ಒಂಟಿತನಕ್ಕೆ ಇಷ್ಟೊಂದ್ ಮಹತ್ವ ಇದೆಯಾ...? ಮತ್ತೆ ನಾವು ಮೊದಲಿಂದ ಅದೇನೋ ಕಲ್ತ್‌ಕೊಂಡು ಬಂದಿದೀವಲ್ಲ, ವಿವಿಧತೆಯಲ್ಲಿ ಏಕತೆ ಅಂತಾ... ಆದ್ರೆ ನೀನು ವಿವಿಧತೆ ಬಿಟ್ಟು ಏಕತೆ ಮಾತ್ರ ಹಿಡ್ಕೊಂಡಿದೀಯ’ ಎಂದು ಪ್ರಶ್ನಿಸಿದ ವಿಜಿ.

ಮತ್ತೆ ಮುಂದುವರಿದು ಹೇಳ್ದ, ‘ಇಷ್ಟಪಟ್ಟು ಒಂಟಿಯಾಗಿರೋದಕ್ಕೂ, ಒತ್ತಾಯಪೂರ್ವಕವಾಗಿ ಒಂಟಿ ಆಗಿರೋದಕ್ಕೂ ತುಂಬಾ ವ್ಯತ್ಯಾಸವಿದೆ ಅಲ್ವಾ...?’

‘ತಾಯಿನೂ ಒಬ್ಬಳೇ ಅಲ್ವಾ ಸರ್...?’ ಎನ್ನುತ್ತಾ ವಿಜಿ ಮಾತಿಗೆ ಎಮೋಷನಲ್ ಟಚ್ ಕೊಟ್ಟ ಮುದ್ದಣ್ಣ.

‘ಹಾಗಿದ್ರೆ, ಭಾರತದ ಧ್ವಜದಲ್ಲೇಕೆ ಮೂರು ಬಣ್ಣ? ಒಂದೇ ಬಣ್ಣದ ಧ್ವಜ ಇರಲಿ ಬಿಡು’ ಎಂದು ವಿಜಿ ತಮಾಷೆಗೆ ಹೇಳಿದ.

ಆದರೆ ಮುದ್ದಣ್ಣನಿಗೆ ಮಾತ್ರ ಆ ಮಾತು ತಮಾಷೆಯಾಗಿ ಕಾಣದೆ ಅವನು ‘ಹೌದಲ್ವೇ, ಯಾವ ಬಣ್ಣದ ಧ್ವಜ ಇದ್ರೆ ಚೆಂದ’ ಎಂದು ಯೋಚಿಸತೊಡಗಿದ! ಅದೇ ವೇಳೆಗೆ ಟಿ.ವಿ ಆನ್ ಮಾಡುತ್ತಿದ್ದಂತೆ ಕನ್ನಡದಲ್ಲಿ ವಿಮಲ್ ಜಾಹೀರಾತು ಬರತೊಡಗಿತು.

‘ನಿನ್ ಮಾತು ಕೇಸರಿಯಲ್ಲೇ... ನನ್ ಮಾತು ಕೇಸರಿಯಲ್ಲೇ, ಮಾತೆಲ್ಲ ಕೇಸರಿಯಲ್ಲೇ, ಮಾತೆಲ್ಲ ಕೇಸರಿಯಲ್ಲೇ...!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.