ADVERTISEMENT

ಮಾವ, ಮುದ್ದಿನ ಮಾವ

ಮಣ್ಣೆ ರಾಜು
Published 10 ಅಕ್ಟೋಬರ್ 2019, 1:41 IST
Last Updated 10 ಅಕ್ಟೋಬರ್ 2019, 1:41 IST
ಚುರುಮುರಿ
ಚುರುಮುರಿ   

‘ಶ್ರೀರಾಮನಿಗಾಗಿ ಸೀತೆಯನ್ನ ಹುಡುಕಿಕೊಟ್ಟ ಹನುಮಂತ ತನಗಾಗಿ ಒಂದು ಹೆಣ್ಣು ಹುಡುಕಿ ಕೊಳ್ಳಲಿಲ್ಲ, ಅವನಿಗೆ ಗೊತ್ತಿತ್ತೇನೋ ಮದುವೆ ಆದ ಮೇಲೆ ಹೆಂಡತಿ ಎದುರು ಬಾಲ ಬಿಚ್ಚು ವಂತಿಲ್ಲ ಅಂತ...’ ಎಂದುಕೊಂಡು ಬಂದ ಶಂಕ್ರಿ.

‘ಇವತ್ತೂ ಹೆಂಡ್ತಿ ಜೊತೆ ಜಗಳನಾ? ಮನೆಅಳಿಯನಾದ ನೀನು ಸಹಿಸಿಕೊಂಡು ಹೋಗಬೇಕು, ಮನೆ ಬಿಟ್ಟು ಹೋದ್ರೆ ಅನರ್ಹ ಅಳಿಯನಾಗಿಬಿಡ್ತೀಯ’.

‘ಮನೆಅಳಿಯಂದಿರಿಗೆ ನೆಮ್ಮದಿ ಕೊಡು ದೇವ್ರೇ ಅಂತ ಆಂಜನೇಯನಿಗೆ ಕೈ ಮುಗಿದು ಬಂದೆ’ ಅಂದ.

ADVERTISEMENT

‘ಕಾರ್ಯಾಧ್ಯಕ್ಷನಿಗೆ ಕಾರ್ಯ ಇಲ್ಲ, ಗೌರವಾಧ್ಯಕ್ಷನಿಗೆ ಗೌರವ ಇಲ್ಲ ಅನ್ನೋ ಪರಿಸ್ಥಿತಿ ಮನೆಅಳಿಯಂದಿರದ್ದು ಪಾಪ...!’

‘ಉಟ್ಟ ಬಟ್ಟೆಯಲ್ಲೇ ಪಕ್ಷ ಬಿಟ್ಟು ಬಂದ ಅನರ್ಹ ಶಾಸಕರನ್ನು ಬಿಜೆಪಿಯ ಮನೆಅಳಿಯಂದಿರು ಅಂತ ಈಶ್ವರಪ್ಪೋರು ಆಲಿಂಗಿಸಿಕೊಂಡಿಲ್ವಾ, ನಿನಗೂ ಒಳ್ಳೆ ಕಾಲ ಬರುತ್ತೆ ಬಿಡು’.

‘ಎಲ್ಲರಿಗೂ ಹಣೆಬರಹ ನೆಟ್ಟಗಿರಬೇಕಲ್ಲ, ಎಲಿಫೆಂಟ್‍ನ ಸೋಲಿಸಿ ಇಲಿಯು ಇಲಿಫೆಂಟ್ ಆದೀತೆ, ಎಲ್ಲಾ ಮನೆಅಳಿಯಂದಿರಿಗೂ ಈಶ್ವರಪ್ಪ ರಂತಹ ಮುದ್ದಿನ ಮಾವ ಸಿಗಬೇಕಲ್ಲ’.

‘ಇರ‍್ಲಿ ಬಿಡು, ಈ ದೀಪಾವಳಿಗೆ ಮನೆಅಳಿಯಂದಿರನ್ನು ಬಿಜೆಪಿಯವರು ಮನೆ ತುಂಬಿಸಿಕೊಳ್ತಾರಂತಾ?’

‘ಇನ್ನಷ್ಟು ಜನ ಬೇರೆ ಪಕ್ಷದ ಮಕ್ಕಳು ಬಿಜೆಪಿ ಜೊತೆ ನೆಂಟಸ್ತಿಕೆ ಬಯಸಿ ಮನೆಅಳಿಯಂದಿರಾಗಲು ತುದಿಗಾಲಲ್ಲಿ ನಿಂತಿದ್ದಾರಂತೆ. ಎಲ್ಲರನ್ನೂ ಒಟ್ಟಿಗೇ ಬರಮಾಡಿಕೊಂಡು ಪಟಾಕಿ ಹೊಡೆದು ದೀಪಾವಳಿ ಔತಣ ಏರ್ಪಡಿಸುತ್ತಾರಂತೆ’.

‘ಕುರ್ಚಿ, ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮನೆಅಳಿಯಂದಿರನ್ನು ಅಟ್ಟಕ್ಕೇರಿಸಿ, ಅವರಿಗೆ ಪಟ್ಟ ಕಟ್ಟಿಬಿಟ್ಟರೆ ಬಿಜೆಪಿಯಲ್ಲೇ ಹುಟ್ಟಿ ಬೆಳೆದ ಮನೆಮಕ್ಕಳು ರಚ್ಚೆ ಹಿಡಿದು ಆಟಂಬಾಂಬ್ ಸಿಡಿಸುವುದಿಲ್ಲವೇ?’

‘ಅನ್ನದ ಋಣ, ಕುರ್ಚಿ ಋಣ ಎಲ್ಲೆಲ್ಲಿರುತ್ತೋ ಯಾರಿಗೆ ಗೊತ್ತು? ಮನೆಅಳಿಯಂದಿರು ಬಂದು ಮನೆ ಇಕ್ಕಟ್ಟಾದರೆ ಬಿಜೆಪಿ ಮನೆಮಕ್ಕಳು ಮುನಿಸಿಕೊಂಡು ಹೋಗಿ ಕಾಂಗ್ರೆಸ್, ಜೆಡಿಎಸ್‍ನ ಮನೆಅಳಿಯಂದಿರಾಗ್ತಾರೆ ಅಷ್ಟೆ’ ಅನ್ನುತ್ತಾ ಹೊರಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.