ADVERTISEMENT

ಗ್ರಹಶಾಂತಿ ಯಾಗ!

ಪ್ರೊ.ಎಸ್.ಬಿ.ರಂಗನಾಥ್
Published 11 ಡಿಸೆಂಬರ್ 2019, 20:15 IST
Last Updated 11 ಡಿಸೆಂಬರ್ 2019, 20:15 IST
.
.   

ಸ್ಪೆಷಲ್ ಬೀಡಾ ಜಗಿಯುತ್ತಾ ಎದುರಿಗೆ ಬಂದ ಚಿಕ್ಕೇಶಿ ಖುಷಿಯಲ್ಲಿದ್ದ. ‘ಏನಯ್ಯಾ ವಿಶೇಷ?’ ಎಂದೆ. ‘ಭರ್ಜರಿ ಬಾಡೂಟ ಗುರೂ’ ಅಂದ.

‘ಈಗ ಯಾವ ಮಾರಿ ಜಾತ್ರೇನೂ ಇಲ್ವಲ್ಲಯ್ಯಾ’.

‘ಇತ್ತಲ್ಲೋ, ಡಿಸೆಂಬರ್ ಐದಕ್ಕೆ ಮಹಾ ಮಾರಿಜಾತ್ರೆ. ರಿಸಲ್ಟ್ ಬಗ್ಗೆ ಬೆಟ್ ಕಟ್ಟಿ ಬನ್ನೂರು ಕುರಿ ಗೆದ್ದೆ. ಅದ್ರ ಪಾರ್ಟಿ ಇತ್ತು’.

ADVERTISEMENT

‘ಪಾರ್ಟಿ ಚೇಂಜ್ ಮಾಡಿದೆಯಂತಲ್ಲೋ?’

‘ಪಾರ್ಟಿ ಚೇಂಜ್ ಆದ್ರೂ ಕ್ಯಾಂಡಿಡೇಟ್ ಅವರೇನಪ್ಪಾ’.

‘ನಿಮ್ಮ ಬಾಸ್ ಯಾಕೆ ಪಾರ್ಟಿ ಬದಲಿಸಿದ್ರೋ?’

‘ಜನತಾ- ಜನಾರ್ದನರಿಗಾಗಿ ಅಂತ ಹಿಂದೆಯೇ ಸ್ಟೇಟ್‍ಮೆಂಟ್ ಕೊಟ್ಟಿದ್ದಾರಲ್ವೇ?’

‘ಹೌದಪ್ಪ, ಪ್ರಜಾಪ್ರಭುತ್ವವೆಂದರೆ ಪ್ರಜೆಗಳ, ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ ಇರುವ ಸರ್ಕಾರ ಅಂತ ಶಾಲಾ ಪುಸ್ತಕದಲ್ಲೇ ಇದೆಯಲ್ಲ. ಜನ ಅಷ್ಟುಬೇಗ ಹೇಗೆ ಚೇಂಜ್ ಆದ್ರಯ್ಯಾ?’

‘ಎರಡು ವಾರ ಕಾಲಿಗೆ ಚಕ್ರ ಹಾಕ್ಕೊಂಡು ತಿರುಗಿದ್ದಕ್ಕೆ ಹ್ಯಾಟ್ರಿಕ್ ಸಾಧನೆಯಾಯ್ತು’.

‘ಕುರುಡು ಕಾಂಚಾಣ ಕುಣಿದು, ಚಿನ್ನದುಂಗುರ, ಬೆಳ್ಳಿಲೋಟ ಝಣಗುಟ್ಟಿದವಂತೆ! ತಂದೆ-ಮಕ್ಕಳ, ಅಣ್ಣ-ತಮ್ಮಂದಿರ ಕಾಣದ ಕೈಗಳು ಕೆಲ್ಸ ಮಾಡಿದವು ಅಂತಾರೆ. ತೆರೆಮರೆಯಲ್ಲಿ ತೆನೆ ಕೈ ಸೇರಿತಂತೆ!’

‘ಅದೆಲ್ಲಾ ಮಾಧ್ಯಮದವರ ಸೃಷ್ಟಿ... ಸಂಜೆ ಮತದಾರರಿಗೆ ಕೃತಜ್ಞತಾ ಸಮಾರಂಭ ಇದೆ, ನೀನು ತಪ್ಪದೇ ಬಾರಯ್ಯಾ’.

‘ನಾನು ನಿಮ್ಮ ಬಾಸ್‍ಗೆ ವೋಟು ಹಾಕಿಲ್ವಲ್ಲ!’ ‘ನಾನು ಹೇಳಿದ್ದು ಮತದಾರರಿಗೆ ಅಂತ. ನೀನು ಮತದಾರ ತಾನೇ? ಅಲ್ಲಿಗೆ ಬರೋರೆಲ್ಲಾ ನಮ್ಗೇ ವೋಟು ಹಾಕಿದೋರು ಅಂತ ತಿಳ್ಕೊಂಡ್ರೆ ನಿನ್ನಂಥ ಮೂರ್ಖ ಯಾರೂ ಇಲ್ಲ!’

‘ಅಲ್ಲಿಗೆ ಭಾಜಪ್ಪನವರೂ ಬರ್ತಾರೆ ತಾನೆ?’

‘ಇಲ್ಲಪ್ಪಾ ಅವರು ಮುಂದಿನ ಸವಾಲನ್ನು ನೆನೆದು ಚಿಂತಾಕ್ರಾಂತರಾಗಿದಾರೆ; ಧವಳಗಿರಿಯಲ್ಲಿ ‘ಸಪ್ತಾದಶ ಮಿಶ್ರ ಗ್ರಹ ಶಾಂತಿ ಅಖಂಡ ಯಾಗ’ಕ್ಕೆ ಕೂತಿದಾರೆ!’.

ಅಯ್ಯೋ, ಡಬಲ್ ಸಿಕ್ಸರ್ ಹೊಡೆದ್ರೂ ರಾಜಾಹುಲಿಗೆ ಸಂಪುಟ ಸಂಕಟ ತಪ್ಪಲಿಲ್ವೇ ಅಂದುಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.