ಮೊನ್ನೆ ಮೊನ್ನೆ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿಯವರನ್ನ ಅದ್ಯಾರೋ ‘ಮುದುಕ’ ಅಂತ ಕರದಿದ್ದಕ ಮನಗೂಳಿ ಕಾಕಾಗ ಅನಗಾಡ ಸಿಟ್ಟು ಬಂದು ಕುಂತಕುಂತಲ್ಲೇ ಕಣ್ ಕಿಸ್ತು, ‘ನಾಕಿಪ್ಪತ್ತು ವಯಸ್ಸು ದಾಟಿದ ಮ್ಯಾಗೂ ಸುತ್ತ ಇಪ್ಪತ್ತು ಹಳ್ಳಿ ಸುಸ್ತಾಗದಂಗ ದಿನಾ ತಿರಗಾಡ್ತೀನಿ ಮಕ್ಕಳೇ... ಕಟ್ಟೀ ಮ್ಯಾಲ ಕುಂತು ಕಂಡಾಪಟಿ ದೇಶಾವರಿ ಮಾತಾಡೋ ನೀವು ಏನು ಕಡೀತೀರಿ ಹೇಳ್ರಿ. ಲಗ್ನ ಇಲ್ಲ ಮುಂಜಿ ಇಲ್ಲ ಈಗಲೇ ಎಲ್ಲಾ ಮುಗದಂಗ ಮುದುಡಿ ಕುಂತೀರಿ, ಮತ್ತ ಹೊಳ್ಳಿ ನನಗೇ ಮುದಕ ಅಂತೀರಿ...’ ಅಂದಿದ್ದೇ ತಡ, ಅಲ್ಲಿದ್ದವರೆಲ್ಲಾ ಹೌ ಹಾರದಂಗ ಆಗಿ, ‘ಆಯ್ತರೀ ಕಾಕಾ, ಇನ್ನೊಮ್ಮ ತಪ್ಪೀನೂ ಮುದಕ ಅನ್ನೂವಂಗಿಲ್ಲರೀ’ ಅಂದರು.
ಅದೂ ಹಂಗೇ ಮತ. ಹ್ಯಾಂಗ ಅಜ್ಜಿಗಿ ‘ಅಜ್ಜಿ’ ಅಂದ್ರ ಸಿಟ್ಟು ಬಂದು ‘ಆಂಟಿ ಅನ್ರೆಲೇ ಬಾಡ್ಯಾಗೋಳೇ’ ಅಂತಾಳೋ ಹಂಗೇ ‘ಮುದುಕ’ ಅನ್ನೂ ಬದಲೀ ‘ಕಾಕಾ’ ಅನ್ರೆಲೇ ಅನ್ನೂದು ಮನಗೂಳಿಯವರ ಮನಸಿನ ಮಾತು.
ಧಾರವಾಡದ ‘ನಾಡೋಜ’ ಪಾಟೀಲ ಪುಟ್ಟಪ್ಪ (ಪಾಪು), ನೂರರ ಹೊಸಿಲಲ್ಲಿದ್ದರೂ ಇನ್ನಾ ಹರೆದ ಜೀವ ಪುಟೀವಂಗ ಪುಟೀತದ. ತಪ್ಪಿ ಯಾರರೇ ಅವರ ಕಿವಿಗಿ ಬೀಳೂವಂಗ ‘ಅಜ್ಜ’ ಅಂದರ ಮುಗೀತು– ತಟ್ಟಂತ ತಿರುಗಿ, ‘ಯಾಕೋ ಹ್ಯಾಂಗ ಕಾಣತೈತಿ, ನನಗ ವಯಸ್ಸಾಗಿದ್ದು ಶರೀರಕ್ಕೋ ತಮ್ಮ, ಮನಸಿಗಲ್ಲ...’ ಅಂತೈತಿ.
ಈ ಮನಗೂಳಿ, ಪಾಪು ಇವರೆಲ್ಲಾ ಹೇಳೂದು ಖರೆ ಐತಿ. ಈ ವಯಸ್ಸಿನೊಳಗೂ ಅವರು ಮಾಡೊ ಕೆಲಸಾ ನೋಡಿದರ ಅವರಿಗಿ ಮುದುಕರು ಅನ್ನಾಕ ಮನಸಾದ್ರೂ ಹ್ಯಾಂಗ ಬರತೈತಿ. ಚಿಕ್ಕ ವಯಸ್ಸಿನ್ಯಾಗೇ ‘ನಂದೆಲ್ಲಾ ಮುಗೀತು’ ಅನ್ನೂವಂಗ ದಿನಾ ದೂಡೊ ಹುಡುಗರ ನಡುವ ನಮಗ ಮುದುಕರು ಅನಬ್ಯಾಡ್ರೊ ಅನ್ಕೋಂತ ಚುರುಕುತನದಿಂದ ಕೆಲಸಾ ಮಾಡೊ ಇವರ ಉಮೇದಿಗೆ ಹರೆದವರೂ ನಾಚಬೇಕು ನೋಡ್ರಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.