ADVERTISEMENT

ಕಾಡುವ ತಾಯಿ ನೆನಪು!

​ಕೇಶವ ಜಿ.ಝಿಂಗಾಡೆ
Published 28 ನವೆಂಬರ್ 2018, 20:26 IST
Last Updated 28 ನವೆಂಬರ್ 2018, 20:26 IST
ಚಿತ್ರ: ಭಾವು ಪತ್ತಾರ್‌
ಚಿತ್ರ: ಭಾವು ಪತ್ತಾರ್‌   

‘ಅಮ್ಮಾ, ಹೇಗಿರುವೆ?’

‘ಯಾರ‍ಪ್ಪ ನೀನು, ಇಷ್ಟು ಕಕ್ಕುಲಾತಿಯಿಂದ ನನ್ನ ಆರೋಗ್ಯ ವಿಚಾರಿಸುತ್ತಿದ್ದಿ’.

‘ನಾನಮ್ಮಾ, ಗುರುತು ಸಿಗಲಿಲ್ಲವೇ?’

ADVERTISEMENT

‘ಇಲ್ಲಪ್ಪ, ಕಣ್ಣು ಮಂಜಾಗಿವೆ’

‘ನಾನು, ನಿನ್ನ ಹೆಮ್ಮೆಯ ಸುಪುತ್ರ ವಿಶ್ವಾ’.

‘ಓಹೋ, ಬಾರಪ್ಪಾ. ಏನ್‌ ಸಮಾಚಾರ. ಇಷ್ಟು ದಿನ ನಾ ಬದುಕಿದ್ದೀನೊ, ಸತ್ತಿದ್ದೀನೊ ಅಂತಾ ತಿರುಗಿಯೂ ನೋಡಿರಲಿಲ್ಲ’.

‘ಕ್ಷಮಿಸಮ್ಮಾ. ನಾಲ್ಕೂವರೆ ವರ್ಷದ ಸಂಭ್ರಮದಲ್ಲಿ ನಿನ್ನನ್ನು ಮರೆತೇಬಿಟ್ಟಿದ್ದೆ. ಈ ಬಾರಿ ಡಾ. ಮೋದಿ ಅವರ ಹತ್ರ ಕರಕೊಂಡು ಹೋಗಲೇಬೇಕಂತ ಬಂದಿದೀನಿ’.

‘ಕಣ್ಣಿನ ಡಾಕ್ಟರ್‌ ಮೋದಿ ಸ್ವರ್ಗ ಸೇರಿ ಬಹಳ ವರ್ಷಗಳೇ ಕಳೆದಿವೆಯಲ್ಲ’. ‘ಆ, ಮೋದಿ ಅಲ್ಲಮ್ಮ. ಇವರು ಸೂಪರ್‌ ಸ್ಪೆಷಾಲಿಟಿ ಡಾಕ್ಟರ್‌ ನರೇಂದ್ರ ಮೋದಿ ಅಂತ’. ‘ಈಗೇಕೆ ನನ್ನ ನೆನಪಾಯ್ತಪ್ಪ’. ‘ಹೆ, ಹೆ, ಮೊನ್ನೆ ಭಾಗವತರು ನಿನ್ನ ಭಾಳ ನೆನಪು ಮಾಡ್ಕೊಂಡ್ರು’.

‘ಯಕ್ಷಗಾನ ಭಾಗವತರಾ?’

‘ಅವರಲ್ಲಮ್ಮ, ‘ರಾಸ್ವಂಸೇ’ ಮುಖ್ಯಸ್ಥ ಮೋಹನ ಭಾಗವತ್‌ ಅಂತ. ನಿನ್ನ ಬಗ್ಗೆ ಭಾರಿ ಕಾಳಜಿ ತೋರಿಸಿದ್ದಾರೆ. ನಾನೂ ಇಷ್ಟು ದಿನ ತಾಳ್ಮೆಯಿಂದ ಇದ್ದೆ. ನನ್ನ ಸಹನೆಯೂ ಮೀರಿದೆ’.

‘ಅವರು ಹೇಳಿದ್ದಕ್ಕೆ ತಾಯಿ ನೆನಪಿಗೆ ಬಂದಾಳಂತ ಹೇಳ್ತೀಯಲ್ಲ, ಅದು ನಿನ್ನ ದೊ(ದ)ಡ್ಡತನ. ನೀನೂ ಬೇಡ, ನಿನ್ನ ಕಕ್ಕುಲಾತಿನೂ ಬೇಡ. ನನ್ನ ಕಾಯಿಲೆಗೆ ಸುಪ್ರೀಂ ಕೋರ್ಟ್‌ ಔಷಧಿಯೇ ರಾಮಬಾಣ’. ‘ಅದಿರ್ಲಿ, ನೀ ಇಷ್ಟು ವರ್ಷ ಎಲ್ಲಿ ನಿದ್ದೆ ಮಾಡುತ್ತಿದ್ದಿ’.

‘ಶ್ರೀಕೃಷ್ಣನ ಮಠದಾಗಮ್ಮ’. ‘ಆಯ್ತಪ್ಪ, ಇನ್ನೂ ಐದು ವರ್ಷ ಅಲ್ಲೇ ಸುಖವಾಗಿ ನಿದ್ದೆ ಮಾಡು. ತಾಯಿಗಾಗಿ ಈಗ ತೋರಿದ ಪ್ರೀತಿಗೆ ನಿನಗೊಂದು ದೊಡ್ಡ ನಮಸ್ಕಾರ’.

‘ಅಯ್ಯೋ, ರಾಮ! ನಿನ್ನ ಹೆಸರು ಹೇಳಿಕೊಂಡು ಎರಡು ಬಾರಿ ದೆಹಲಿ ಗದ್ದುಗೆ ಏರಿದ್ರೂ, ನನ್ನತ್ತ ಕಣ್ಣೆತ್ತಿಯೂ ನೋಡದ ನಿನ್ನ ಭಕ್ತರಿಗೆ ತಾಯಿಯನ್ನು, ಆಕೆಯ ಬಂಧು ಬಳಗವನ್ನು ಜತನದಿಂದ ನೋಡುವ ಬುದ್ಧಿ ಯಾವಾಗ ಬರುತ್ತೋ ಏನೊ. ರಾಮ ರಾಮಾ...’ ಎಂದು ಗಲ್ಲ ಬಡಿದುಕೊಳ್ಳುತ್ತ ವೃದ್ಧೆ ಬೆನ್ನು ಮಾಡಿ ನಡೆದಳು. ಆಕೆ ಹೋದ ದಿಕ್ಕಿನತ್ತಲೇ ವಿಶ್ವಾ ಬೆರಗಾಗಿ ನೋಡುತ್ತ ನಿಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.