ADVERTISEMENT

ಬಿಗ್ ಬ್ರೇಕಿಂಗ್...!

ಬಿ.ಎನ್.ಮಲ್ಲೇಶ್
Published 16 ಡಿಸೆಂಬರ್ 2018, 19:45 IST
Last Updated 16 ಡಿಸೆಂಬರ್ 2018, 19:45 IST
   

ಹೊಸ ನ್ಯೂಸ್ ಚಾನೆಲ್ ಒಂದಕ್ಕೆ ವರದಿಗಾರರ ಹುದ್ದೆಗೆ ಸಂದರ್ಶನ ನಡೆಯುತ್ತಿತ್ತು. ಸಂದರ್ಶನಕ್ಕೆ ಬಂದಿದ್ದ ತೆಪರೇಸಿಯನ್ನು ಸಂಪಾದಕರು ಪ್ರಶ್ನಿಸಿದರು. ‘ನಮ್ಮ ನ್ಯೂಸ್ ಚಾನೆಲ್‍ಗೆ ತಕ್ಷಣ ದೊಡ್ಡ ಟಿ.ಆರ್.ಪಿ ಬರಬೇಕು. ಇಡೀ ಕರ್ನಾಟಕ ನಮ್ಮ ಚಾನೆಲ್ ಕಡೆ ತಿರುಗಿ ನೋಡಬೇಕು. ಅಂಥ ಸುದ್ದಿ ಕೊಡ್ತೀರಾ?’

‘ಖಂಡಿತ ಕೊಡ್ತೀನಿ ಸಾ...’

‘ಒಕೆ, ಒಂದು ಸ್ಯಾಂಪಲ್ ಕೊಡಿ...’

ADVERTISEMENT

‘ಕರ್ನಾಟಕ ವಿಧಾನಸಭೆ ವಿಸರ್ಜನೆ’ ಅಂತ ಬಿಗ್ ಬ್ರೇಕಿಂಗ್ ಕೊಟ್ಟುಬಿಡಿ. ಯಾಕೆ, ಏನು, ಯಾವಾಗ ಇತ್ಯಾದಿ ಸಂಜೆ ಐದು ಗಂಟೆಗೆ ಬ್ಲಾಸ್ಟ್ ಮಾಡ್ತೀವಿ ಅಂತ ಹಾಕಿ. ಟಿ.ಆರ್.ಪಿ ಹೆಂಗೆ ಒದ್ದು ಕೊಂಡು ಬರುತ್ತೆ ನೋಡಿ’ ತೆಪರೇಸಿ ಹೇಳಿದ.

‘ಟಿ.ಆರ್.ಪಿ ಒದ್ದುಕೊಂಡು ಬರುತ್ತೋ, ಜನ ಬಂದು ನಮ್ಮನ್ನ ಒದೀತಾರೋ... ಇರ್ಲಿ, ಮುಂದೆ?’

‘ಸಂಜೆ 5 ಗಂಟೆವರೆಗೆ ಜನರ ತಲೇಲಿ ಹುಳ ಬಿಡ್ತಾ ಇರಬೇಕು. ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಗುಡ್‍ಬೈ ಅಂತ ಒಂದ್ಸಲ, ಕಾಂಗ್ರೆಸ್-ಜೆಡಿಎಸ್ ಶಾಸಕರ ಪಕ್ಷಾಂತರ ಅಂತ ಒಂದ್ಸಲ... ಯಡಿಯೂರಪ್ಪ ಮುಖ್ಯಮಂತ್ರಿ ಆಗೋಕೆ ಮುಹೂರ್ತ ಸಜ್ಜು ಅಂತ ಇನ್ನೊಂದ್ಸಲ ಹುಳ ಬಿಡ್ತಾ ಇರಬೇಕು...’

‘ಅಲ್ಲಯ್ಯ ಎಲ್ಲ ಸುಳ್ಳು ಸುದ್ದಿನೇ ತೋರಿಸ್ತಾ ಇರಬೇಕಾ?’

‘ನಿಮಗೆ ಟಿ.ಆರ್.ಪಿ ಬೇಕೋ ಬೇಡ್ವೊ? ಆಮೇಲೆ ಸಂಜೆ ಐದು ಗಂಟೆಗೆ ಒಂದಿಬ್ಬರ ವಾಯ್ಸ್ ರೆಕಾರ್ಡಿಂಗ್ ಮಾಡಿ ಸ್ಕ್ರೀನ್‍ಗೆ ಬಿಡ
ಬೇಕು. ಅದ್ರಲ್ಲಿ ‘ಹಂಗಾದ್ರೆ ಸರ್ಕಾರ ಉಳಿಯಲ್ವ?’ ಅಂತ ಒಬ್ಬ ಕೇಳಬೇಕು. ಅದಕ್ಕೆ ಇನ್ನೊಬ್ಬ ‘ಉಳೀದಿದ್ರೆ ವಿಧಾನಸಭೆ ವಿಸರ್ಜನೆ ಮಾಡಿದ್ರಾತು’ ಅನ್ನಬೇಕು’.

‘ಅವರಿಬ್ರು ಯಾರು?’

‘ನಮ್ಮವರೇ... ದುಬೈನವರೋ ಮಲೇಷ್ಯಾ ದವರೋ ಅಂದ್ರಾತು. ಜನ ಟಿ.ವಿ ನೋಡ್ತಾನೇ ಇರ್ತಾರೆ. ಟಿ.ಆರ್.ಪಿ ಏರ್ತಾನೇ ಇರ್ತತಿ’.

‘ಸರಿ ಕೊನೆಗೆ?’

‘ಮರುದಿನ ಬೆಳಿಗ್ಗೆ ‘ಸದ್ಯಕ್ಕೆ ಆಪರೇಶನ್ ಸ್ಥಗಿತಗೊಂಡಿದೆ, ಹೊಸ ವರ್ಷಕ್ಕೆ ಹೊಸ ಸರ್ಕಾರ ಗ್ಯಾರಂಟಿ’ ಅಂತ ತಿಪ್ಪೆ ಸಾರಿಸಬೇಕು...’

ಸಂಪಾದಕರು ಹೇಳಿದರು ‘ಯೂ ಆರ್ ಅಪಾಯಿಂಟೆಡ್...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.