ADVERTISEMENT

ಚುರುಮುರಿ: ಮೊಟ್ಟೆ ಭಯ

ಮಣ್ಣೆ ರಾಜು
Published 23 ಆಗಸ್ಟ್ 2022, 19:30 IST
Last Updated 23 ಆಗಸ್ಟ್ 2022, 19:30 IST
ಚುರುಮುರಿ: ಮೊಟ್ಟೆ ಭಯ
ಚುರುಮುರಿ: ಮೊಟ್ಟೆ ಭಯ   

‘ಶಾಸಕರ ಭವನದಲ್ಲಿ ಮೊಟ್ಟೆ ಬ್ಯಾನ್ ಮಾಡಿದ್ದಾರಂತೆ, ಯಾಕೆ ಸಾರ್? ಶಾಸಕರು ಮೊಟ್ಟೆ ತಿನ್ನಬಾರದಂತಾ?’ ಕೇಳಿದೆ.

‘ಅಲ್ಲ, ಎಸೆದಾಡಬಾರದು ಅಂತ’ ಅಂದರು ಶಾಸಕರು.

‘ತಿನ್ನುವ ಮೊಟ್ಟೆಯನ್ನು ನೀವೇಕೆ ಎಸೆದಾಡ್ತೀರಿ?’

ADVERTISEMENT

‘ನಾವಲ್ಲಾರೀ, ಕಿಡಿಗೇಡಿಗಳು ಬಂದು ಮೊಟ್ಟೆ ಎಸೆದು ನಮ್ಮ ಬಟ್ಟೆ ಗಲೀಜು ಮಾಡಬಾರದು ಅಂತ...’

‘ಬ್ಯಾನ್ ಮಾಡುವಷ್ಟು ಮೊಟ್ಟೆ ಮಾರಕವಲ್ಲ ಸಾರ್, ಮೊಟ್ಟೆ ಭಯ ಬಿಟ್ಟು ಧೈರ್ಯವಾಗಿರಿ’.

‘ಹ್ಯಾಗ್ರೀ ಧೈರ್ಯವಾಗಿರೋದು? ಮೊಟ್ಟೆ ತಿಂದು ಪೌಷ್ಟಿಕತೆ ಹೆಚ್ಚಿಸಿಕೊಳ್ಳಿ ಅಂತ ಶಾಲೆಗಳಿಗೆ ಹೋಗಿ ನಾನೇ ಮಕ್ಕಳಿಗೆ ಹೇಳಿದ್ದೆ. ಈಗ ಸಭೆ ಸಮಾರಂಭಗಳಿಗೆ ಹೋದಾಗ ಯಾರು,
ಎಲ್ಲಿಂದ ಮೊಟ್ಟೆ ಎಸೆಯುತ್ತಾರೋ ಅನ್ನೋ ಭಯ ಕಾಡುತ್ತಿರುತ್ತದೆ ನನಗೆ. ಮೊಟ್ಟೆಯನ್ನು ತಿನ್ನಲು ಬಳಸಿ, ಎಸೆದಾಡಬೇಡಿ ಎಂದು ಮಕ್ಕಳಲ್ಲಿ ವಿದ್ಯಾರ್ಥಿದೆಸೆಯಲ್ಲೇ ಅರಿವು ಮೂಡಿಸಬೇಕು ಕಣ್ರೀ’.

‘ಹೌದು ಸಾರ್, ಹಾಗೇ ಮೊಟ್ಟೆಗಳ ದುರ್ಬಳಕೆ ವಿರುದ್ಧ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಬೇಕು. ಮೊಟ್ಟೆ ಎಸೆಯುವುದು ಅಕ್ಷಮ್ಯ ಅಪರಾಧ ಅಂತ ಕಾನೂನು ರೂಪಿಸಬೇಕು. ತಿನ್ನುವ ಉದ್ದೇಶವಲ್ಲದೆ ಅನ್ಯ ಉದ್ದೇಶಕ್ಕೆ ಬಳಸದಂತೆ ಮೊಟ್ಟೆ ಕೊಳ್ಳುವವರ ಮೇಲೆ ಕಣ್ಣು ಇಡಬೇಕು’.

‘ಸಾಮಾನ್ಯ ಕೋಳಿ ಇಡುವ ಮೊಟ್ಟೆ ರಾಜಕಾರಣಿಗಳ ನಿದ್ದೆಗೆಡಿಸಿದೆ. ಸಮಾಜದ ಶಾಂತಿ, ನೆಮ್ಮದಿ ಕೆಡಿಸಿಬಿಟ್ಟಿದೆ’ ಶಾಸಕರು ನಿಟ್ಟುಸಿರುಬಿಟ್ಟರು.

‘ಮೊಟ್ಟೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಸಾರ್’.

‘ಶಾಶ್ವತ ಪರಿಹಾರ ಸಾಧ್ಯವೇನ್ರೀ?’

‘ಸಾಧ್ಯ ಸಾರ್, ಎಲ್ಲಾ ಕೋಳಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಬಿಟ್ಟರೆ ಮೊಟ್ಟೆಯೂ ಇರಲ್ಲ, ಸಮಸ್ಯೆನೂ ಇರಲ್ಲ, ಅಲ್ವಾ?’ ಕೋಪಗೊಂಡ ಶಾಸಕರು ಕಾರು ಹತ್ತಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.