ADVERTISEMENT

ಚುರುಮುರಿ: ಚೇಂಜ್ ಬೇಕು

ಮಣ್ಣೆ ರಾಜು
Published 6 ಏಪ್ರಿಲ್ 2021, 19:30 IST
Last Updated 6 ಏಪ್ರಿಲ್ 2021, 19:30 IST
   

‘ಕೊರೊನಾ ಕಾಟ, ಆದಾಯ ಖೋತಾದಿಂದಾಗಿ ಜೀವನದಲ್ಲಿ ಜುಗುಪ್ಸೆ ಆಗಿದೆ, ಲೈಫ್‍ನಲ್ಲಿ ಚೇಂಜ್ ಇಲ್ಲ...’ ವಿಶ್ವ ವಿಷಾದಿಸಿದ.

‘ಕಾಲ ಬದಲಾಗಿ ಹಣೆಬರಹ ಚೇಂಜ್ ಆಗುತ್ತೆ ಬಿಡು’ ಚಂದ್ರು ಸಮಾಧಾನ ಹೇಳಿದ.

‘ಚೇಂಜ್ ಇಲ್ಲ ಸಾರ್, ಟೀ ಬಿಲ್ ಅನ್ನು ಅಕೌಂಟ್ ಪೇ ಮಾಡಿ...’ ಎಂದು ಹೋಟೆಲ್ ಸಿದ್ಧಪ್ಪ ಟೀ ತಂದಿಟ್ಟ.

ADVERTISEMENT

‘ಯುಗಾದಿಗೆ ಸಿ.ಎಂ ಚೇಂಜ್ ಆಗ್ತಾರೆ ಅಂತ ರೆಬೆಲ್ ನಾಯಕರು ಹಬ್ಬದ ಆಫರ್ ಕೊಟ್ಟಿದ್ದರಲ್ಲ, ಚೇಂಜ್ ಆಗ್ತಾರಂತಾ?’ ಪರಮ ಬಂದು ಟೀ ಪಾರ್ಟಿಗೆ ಜಾಯಿನ್ ಆದ.

‘ಸಿ.ಎಂ ಚೇಂಜ್ ಮಾಡೋ ಮನಃಸ್ಥಿತಿಯನ್ನ ಚೇಂಜ್ ಮಾಡಿಕೊಳ್ಳಿ, ಹೆಚ್ಚೂಕಮ್ಮಿಯಾದರೆ ಸರ್ಕಾರವೇ ಚೇಂಜ್ ಆಗಿಬಿಡುತ್ತದೆ ಅಂತ ರೆಬೆಲ್‍ಗಳಿಗೆ ವರಿಷ್ಠರು ವಾರ್ನಿಂಗ್ ಕೊಟ್ಟಿದ್ದಾರಂತೆ’ ಗಿರಿ ವರದಿ ನೀಡಿದ.

‘ಯುಗಾದಿಗೆ ಸಿ.ಎಂ ಚೇಂಜ್ ಆಗೋದು ಖಚಿತ ಅಂತ ಟಿ.ವಿ ಜ್ಯೋತಿಷಿ ಎಡೆಬಿಡದೆ ಪಂಚಾಂಗ ಪಠಣ ಮಾಡ್ತಿದ್ದರಲ್ಲಾ...’

‘ಇಂಥಾ ಜ್ಯೋತಿಷಿ ನಂಬಿಕೊಂಡರೆ ಕೆಳಗಿಳಿದಿರುವ ಟಿಆರ್‌ಪಿ ಚೇಂಜ್ ಆಗಲ್ಲ ಅಂತ ಚಾನೆಲ್‍ನವರು ಜ್ಯೋತಿಷಿಯನ್ನೇ ಚೇಂಜ್ ಮಾಡಿದರಂತೆ...’ ಎನ್ನುತ್ತಾ ಸೀನ ಬಂದ.

‘ಚಾನೆಲ್‍ನವರು ಹಳೇ ಸಿ.ಡಿ. ಉಜ್ಜೋದನ್ನ ನಿಲ್ಲಿಸಿ, ಸಿ.ಡಿ. ಸಿನಿಮಾ ಚೇಂಜ್ ಮಾಡದಿದ್ದರೆ ನಾವೂ ಚಾನೆಲ್ ಚೇಂಜ್ ಮಾಡಬೇಕಾಗ್ತದೆ’ ವಿಶ್ವನ ತೀರ್ಮಾನ.

‘ಸರ್ಕಾರದಲ್ಲಿ ಇನ್ನಷ್ಟು ಸಿ.ಡಿ. ಸಿನಿಮಾಗಳಿವೆಯಂತೆ. ಯಾವುದಾದರೊಂದು ರಿಲೀಸ್ ಮಾಡಿ ಜನರು, ರೆಬೆಲ್ ನಾಯಕರು ಸಿ.ಡಿ. ಸಿನಿಮಾ ವಿಮರ್ಶೆಯಲ್ಲಿ ಮೈಮರೆಯುವಂತೆ ಮಾಡಿದರೆ ಸರ್ಕಾರ ಇನ್ನಷ್ಟು ಕಾಲ ಸುಭದ್ರ ಅಲ್ವಾ?’ ಸೀನನ ಸಜೆಷನ್.

‘ಸಿ.ಡಿ. ನಂಬಿಕೊಂಡು ಸರ್ಕಾರ ನಡೆಸೋ ಪರಿಸ್ಥಿತಿ ಬರಬಾರದು. ಜನರ ದುಃಸ್ಥಿತಿ ಚೇಂಜ್ ಮಾಡುವತ್ತ ಸರ್ಕಾರದ ವ್ಯವಸ್ಥೆ ಚೇಂಜ್ ಆಗಬೇಕು...’ ಟೀ ಬಿಲ್ ಕೊಟ್ಟ ಸಿದ್ಧಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.