ADVERTISEMENT

ಚುರುಮುರಿ: ಯಾರು ‘ಗಣ್ಯೋಜ’?

ಸುಧೀಂದ್ರ
Published 16 ಏಪ್ರಿಲ್ 2021, 19:31 IST
Last Updated 16 ಏಪ್ರಿಲ್ 2021, 19:31 IST
ಚುರುಮುರಿ
ಚುರುಮುರಿ   

‘ಆದಿಕವಿಗಳ ಬಿರುದನ್ನು ಸಿಕ್ಕವರಿಗೆಲ್ಲಾ ಕೊಟ್ಟು ಯೂನಿವರ್ಸಿಟಿ ಮಾನ ಹರಾಜು ಹಾಕ್ತಿದ್ದೀರಿ’ ಅಂತ ಕುಲಪತಿಗಳನ್ನು ಸಿಂಡಿಕೇಟ್‌ ಮೀಟಿಂಗಲ್ಲಿ ಮೆಂಬರುಗಳು ಬೆಂಡೆತ್ತಿದರು. ರಿಜಿಸ್ಟ್ರಾರ್ ಅಧ್ಯಕ್ಷತೆಯಲ್ಲೇ ಕಮಿಟಿ ಮಾಡಿ, ಬದಲಿ ಪ್ರಶಸ್ತಿಗಳ ಪಟ್ಟಿ ರೆಡಿ ಮಾಡಲು ಆದೇಶ ಹೊರಟಿತು.

ಕಮಿಟಿ ಮೀಟಿಂಗ್ ಶುರುವಾಯಿತು. ಹಿಂದೆ ಮೈನ್ಸ್ ಅಂಡ್ ಜಿಯಾಲಜಿ ಡಿಪಾರ್ಟ್‌ ಮೆಂಟಲ್ಲಿ ಕೆಎಎಸ್ ಅಧಿಕಾರಿಯಾಗಿದ್ದ ರಿಜಿಸ್ಟ್ರಾರ್, ಗಣಿ ಉದ್ದಿಮೆದಾರರನ್ನೂ ಪುರಸ್ಕಾರಕ್ಕೆ ಪರಿಗಣಿಸಬೇಕೆಂದು ಠರಾವು ಮಂಡಿಸಿದರು. ಆ ಪುರಸ್ಕಾರಕ್ಕೆ ‘ಗಣ್ಯೋಜ’ ಅನ್ನೋಣವೇ ಎಂಬ ಕಲಾ ನಿಕಾಯದ ಡೀನ್ ಪ್ರಶ್ನೆಗೆ, ಕನ್ನಡ ಪ್ರಾಧ್ಯಾಪಕರು ‘ಗಣ್ಯೋಜಿ’ ಹೆಚ್ಚು ಸೂಕ್ತವೆಂದರು. ಹಿಂದಿ ಪ್ರಬೋಧಕರಿಗೆ ದಿಲ್‍ಖುಷ್ ಆಗಿ, ತಮ್ಮ ‘ಡೆಲ್ಲಿ ದೋಸ್ತ್’ಗಳಿಗೂ ಈ ಸಮ್ಮಾನ್ ಕೊಡಿಸಬಹುದೆಂದು ನಿಲುವಳಿಯನ್ನು ಅನುಮೋದಿಸಿದರು.

ಮರಳು ಮರಳು ತುಪ್ಪದ ಮೈಸೂರುಪಾಕ್ ತಿನ್ನುತ್ತಿದ್ದ ಸಿಂಡಿಕೇಟ್ ಸದಸ್ಯರು ಎದ್ದು ನಿಂತರು. ‘ಮರಳೇ ಇಲ್ದಿದ್ರೆ ಈ ಯೂನಿವರ್ಸಿಟಿ ಕಟ್ಟಕ್ಕಾಗ್ತಿತ್ತಾ? ಅಂದ್ರು. ‘ಮರಳೋಜ’ವನ್ನೂ ಅಂಗೀಕರಿಸಬಹುದೆಂದು ರಿಜಿಸ್ಟ್ರಾರ್ ಅಂದ್ರು. ಸಂಖ್ಯಾಜ್ಯೋತಿಷ್ಯ ಪ್ರವೀಣ, ಜನಪದ ಪ್ರೊಫೆಸರ್, ಪ್ರಶಸ್ತಿ ಮೂರಕ್ಷರಕ್ಕೇ ಸೀಮಿತ ಗೊಳಿಸೋಕ್ಕೆ ಹೇಳಿದ್ರು. ಅದಕ್ಕೆ ಇಂಗ್ಲಿಷ್ ಪ್ರೊಫೆಸರ್, ‘ಸ್ಯಾಂಡೋಜ’ ಸೂಕ್ತ, ಕಂಗ್ಲಿಷ್ ಯುವಜನರನ್ನೂ ಯೂನಿವರ್ಸಿಟಿಯತ್ತ ಸೆಳೆಯಲಿದು ಅನುಕೂಲ ಎಂದರು.

ADVERTISEMENT

ಇತ್ತ ಒಂದಲ್ಲಾ ಒಂದು ವಿಷಯ ಹಿಡ್ಕೊಂಡು ವಿ.ವಿ.ಯಲ್ಲಿ ಚಳವಳಿ ಮಾಡುವ ಡೌನ್‍ವಿತ್‍ ತಂಡಕ್ಕೆ ಕೂಗಾಡಲು ಮತ್ತೊಂದು ಅವಕಾಶ ಸಿಕ್ಕಿತ್ತು. ಇದನ್ನೇ ಬಿಗ್ ಬ್ರೇಕಿಂಗ್ ಎಕ್ಸ್‌ಪ್ಲೋಸಿವ್ ಎಂದು ಸಿಡಿಸಲು ಟಿ.ವಿಯವರು ಬಂದಿದ್ದರು. ‘ಯೂನಿವರ್ಸಿಟಿ ಪುರಸ್ಕಾರ, ನಡೀತಿದ್ಯಾ ಹುನ್ನಾರ?’, ‘ಯಾರಾಗ್ತಾರೆ ರತ್ನಜ, ಯಾರಿದ್ದಾರೆ ರೈಲೋಜ ರೇಸಲ್ಲಿ?’, ‘ಉಕ್ಕೋಜ ಬೀಳತ್ತಾ, ಬಿಂದಾಲ್ ಕೊರಳಿಗೆ?’ -ಎಕ್ಸ್‌ಕ್ಲೂಸಿವ್ ಹೆಡ್‍ಲೈನ್‍ಗಳು ಓಡುತ್ತಿದ್ದವು.

ಬೆಳಗಾವಿ ಜೈಲಿಂದಲೇ ‘ಬೇಕಾಬಿಟ್ಟಿ ಅವಾರ್ಡ್‌ಗಳ ವಿರುದ್ಧದ ಚಳವಳಿ’ಯ ನೇತೃತ್ವ ತಾವು ವಹಿಸಿಕೊಳ್ಳುತ್ತಿರುವುದಾಗಿ ‘ಬಂದೋಜ’ ಪುರಸ್ಕೃತ ಸುಂದ್ರಶೇಖರ್ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.