ADVERTISEMENT

ಹಳೇ ಮದ್ಯ, ಅದೇ ಶೀಷೆ!

ಎಸ್.ಬಿ.ರಂಗನಾಥ್
Published 13 ಆಗಸ್ಟ್ 2021, 19:31 IST
Last Updated 13 ಆಗಸ್ಟ್ 2021, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಹಳೇ ಮದ್ಯ, ಹೊಸ ಶೀಷೆ ಅಂದ್ರೆ ಏನ್ರೀ?’ ಶ್ರೀಮತಿ ಕೇಳಿದಳು.

‘ನಮ್ಮ ಬೊಮ್ಮಾಯಿ ಮಂತ್ರಿಮಂಡಲ’ ಎಂದೆ.‌

‘ಅದ್ಯಾಕ್ರೀ, ಕೆಲವು ಹೊಸ ಮುಖಗಳೂ ಇವೆಯಲ್ಲಾ!’

ADVERTISEMENT

‘ಹೌದ್ಹೌದು‌. ಹಲವು ಖಾತೆ ಕ್ಯಾತೆ ತೆಗೆದು ಮುನಿಸಿಕೊಂಡಿವೆ’.

‘ಹೈಕಮಾಂಡ್ ಎಲ್ಲಾ ಸರಿ ಮಾಡುತ್ತೇಂತ ಹೇಳಿ ಸೀಎಂ ಡ್ಯಾಮೇಜ್ ಕಂಟ್ರೋಲ್ ಮಾಡ್ತಿದಾರೆ... ನಂಗೆ ಸ್ವಾಗತ ಹೋರ್ಡಿಂಗು, ಹೂಗುಚ್ಛ, ಶಾಲು, ಗೌರವವಂದನೆ ಬೇಡಾಂತ ಹೇಳಿ ಎಲ್ರಿಗೂ ಮೇಲ್ಪಂಕ್ತಿಯಾಗಿದಾರೆ’.

‘ಅವ್ರ ಸಹೋದ್ಯೋಗಿಗಳೂ ಹಾರದ ಬದಲು ಕನ್ನಡ ಪುಸ್ತಕ ಕೊಡಿ, ವಾಹನಗಳನ್ನ ದಾರಿ ಮಧ್ಯೆ ತಡೆದು ದಂಡ ಹಾಕ್ಬೇಡೀಂತ ಹೇಳಿ ಆದರ್ಶ ಮೆರೀತಿದಾರೆ!’

‘ಕನ್ನಡ ಸಂಸ್ಕೃತಿ ಸಚಿವರು ಕನ್ನಡಕ್ಕೆ ಇಂಧನ ಶಕ್ತಿಯನ್ನೂ ಇಂಧನಕ್ಕೆ ಸಂಸ್ಕೃತಿಯನ್ನೂ ತುಂಬ್ತೀನೀಂತ ಹೇಳಿದಾರಲ್ಲ! ಏನ್ರೀ ಹಾಗಂದ್ರೆ?’

‘ಅವ್ರು ಆ ಎರಡೂ ಖಾತೆಗಳ ಮಂತ್ರಿಗಳು. ನಾನಾ ರೀತಿ ದಾಳಿಗಳಿಂದ ನಲುಗಿರೋ ಕನ್ನಡಕ್ಕೆ ಇಂಧನ ಪೂರೈಸುವ, ಅಂದ್ರೆ ಕಸುವು ತುಂಬುವ ಹಾಗೂ ಜನರ ಜೇಬಿಗೆ ನಿರಂತರ ಕತ್ತರಿ ಹಾಕ್ತಿರೋ ಇಂಧನ ಖಾತೆಗೆ ಸಂಸ್ಕೃತಿ- ಸೌಜನ್ಯ ಕಲಿಸುವ ಕೆಲ್ಸ ಮಾಡ್ತೀನಿ ಎಂಬುದು ಅವ್ರ ಅಭಿಪ್ರಾಯ’.

‘ಅವ್ರು ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲು ಮೇಲೇ ಕುಳಿತು ಕಡತ ವಿಲೇವಾರಿ ಮಾಡಿದ್ರಂತೆ. ಅದ್ರ ಹೊಸ್ತಲಿಗೆ ನಮಸ್ಕರಿಸಿದರಂತೆ!’

‘ಹೌದು, ‘ನಮೋ’ ಪ್ರಧಾನಿಯಾಗಿ ಪಾರ್ಲಿಮೆಂಟ್ ಪ್ರವೇಶಿಸೋ ಮೊದಲು, ಬೊಮ್ಮಾಯಿ ಸೀಯೆಮ್ಮಾಗಿ ವಿಧಾನಸೌಧ
ದೊಳಗೆ ಹೋಗೋವಾಗ ಮಾಡಿದ್ರಲ್ಲಾ ಹಾಗೆ’.

‘ಬಹಳ ಹಿಂದೆ ಸಚಿವ ಗುಂಡೂರಾಯರು ಈಜಾಡುವ ಮೂಲಕ ಈಜುಗೊಳ ಉದ್ಘಾಟಿಸಿದಂತೆ ಅನ್ನಿ... ನನ್ನದೊಂದು ಸಲಹೆ’.

‘ಅಪ್ಪಣೆಯಾಗಲಿ’.‌

‘ಪಶುಸಂಗೋಪನಾ ಖಾತೆ ಮಂತ್ರಿಗಳು ಪಶುಪಾಲನೆ ಪ್ರಾರಂಭಿಸ್ತಾ ಕೆಲ್ಸ ಶುರು ಮಾಡಿದ್ರೆ ಹೇಗೆ?!’

‘ಅಂದ್ರೆ? ಜನ ಕಾಯೋ ಬದಲು ದನ...‌’

ಹೆಂಡತಿ ‘ಛೆ ಛೆ, ಶಾಂತಂ ಪಾಪಂ’ ಎಂದು ಕಿವಿ ಮುಚ್ಚಿಕೊಂಡಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.