ADVERTISEMENT

ಕಂಡದ್ದು ಕಾಣದ್ದು!

ಎಸ್.ಬಿ.ರಂಗನಾಥ್
Published 22 ಅಕ್ಟೋಬರ್ 2021, 19:28 IST
Last Updated 22 ಅಕ್ಟೋಬರ್ 2021, 19:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಶಿಕ್ಷೆ ಇಲ್ಲದ್ದು ಅದೆಂಥ ಶಿಕ್ಷಣಾರೀ?’ ರಾಗ ಎಳೆದಳು ಶ್ರೀಮತಿ. ‘ಏನಾಯ್ತೀಗ?’ ಎಂದೆ.

‘ಸ್ಕೂಲಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ಕೊಡೋಹಾಗಿಲ್ವಂತೆ!’

‘ಹೌದೌದು, ಶಾಲೆಯಲ್ಲಿ ದೈಹಿಕ ಶಿಕ್ಷಣಕ್ಕೆ ಮಾತ್ರ ಅವಕಾಶ, ಶಿಕ್ಷೆಗಿಲ್ಲ. ಹಿಂದಿನ ಕಾಲದಂತೆ ಬೆತ್ತ ಬಳಸುವಂತಿಲ್ಲ, ಶುಂಠಿ ಕೊಂಬು ಕೊಡೋಹಾಗಿಲ್ಲ, ಪರಂಗಿ ಪೀಠ ಕೂರಿಸಂಗಿಲ್ಲ. ಮನೇಲೂ ನಾವು ಅವ್ರ ಮೇಲೆ ಕೈಮಾಡಂಗಿಲ್ಲ... ಅದ್ಕೇತಾನೇ ನಿನ್ನ ಮಗ ಹಿಂಗಾಗಿರೋದು?’

ADVERTISEMENT

‘ಏನಾಗಿದಾನೇ? ನಿಮಗೂ ಅವ್ನು ಮಗನಲ್ವೇ?’

‘ಜನನಿ ತಾನೆ ಮೊದಲ ಗುರುವು ಅಲ್ವೆ... ಎಲ್ಲ ನಿನ್ನ ಸಲುಗೆ... ಬುದ್ಧಿ ಬೆಳೆಸ್ಕೊಳ್ಳೋ ಅಂದ್ರೆ, ದೇಹ ಬೆಳೆಸ್ಕೊಂಡಿದಾನೆ!’

‘ಈ ಕೊರೊನಾದಿಂದ ಮನೇಲೇ ಇದ್ದು ಸ್ವಲ್ಪ ದಪ್ಪ ಆಗಿದಾನಷ್ಟೇ. ನಿಮ್ಮ ಹೊಟ್ಟೆಯೇನು ಗಣಪತೀದಕ್ಕಿಂತ ಸಣ್ಣದಿದೆಯೇ?’

‘ಈ ಗಾಂಧಿ ಪಾಸ್ ಕಾಲದಲ್ಲೂ ಅವ್ನು ಜಸ್ಟ್ ಪಾಸಷ್ಟೇ... ಮಕ್ಕಳನ್ನ ಈಗಿನಿಂದ್ಲೇ ಅಂಕೇಲಿಟ್ಕೊಬೇಕು. ಇಲ್ದಿದ್ರೆ ಕೆಲವು ಸಿನಿಮಾ ಸ್ಟಾರ್‌ಗಳ ಮಕ್ಕಳಂತೆ ದಾರಿ ತಪ್ತಾರೆ’.

‘ಅದ್ಯಾಕ್ರೀ ಹಾಗಂತೀರಿ? ನಮ್ಮ ಕನ್ನಡದ ಚಿತ್ರನಟರ ಮಕ್ಕಳು ಒಳ್ಳೇ ಹೆಸರು ತಗೊತಿದಾರಲ್ಲಾ’.

‘ಕೆಲವು ಸಿನಿಮಾ ಸ್ಟಾರ್‌ಗಳನ್ನು ರಜತ ಪರದೆ ಮೇಲಷ್ಟೇ ನೋಡಿ ಆನಂದಿಸಬೇಕು ಹೊರತು ಅವ್ರ ನಿಜ ಜೀವನದತ್ತ ಇಣುಕಿ ನೋಡಬಾರದು’.

‘ಇದು ನಮ್ಮ ರಾಜಕಾರಣಿಗಳಿಗೂ ಅನ್ವಯಿಸುತ್ತದಲ್ವೇ?’

‘ಖಂಡಿತವಾಗಿ. ಜೊತೆಗೆ ಹಲವು ಸ್ವಘೋಷಿತ ದೇವಮಾನವರನ್ನೂ ಸೇರಿಸ ಬೌದು. ದೀಪಾವಳಿಗೆ ಮುಂಚೆಯೇ ನಮ್ಮ ಜನನಾಯಕರ ಪರಸ್ಪರ ಹೆಬ್ಬೆಟ್, ಡ್ರಗ್ಸ್ ಪೆಡ್ಲರ್, ಪುಟಗೋಸಿ ಆಣಿಮುತ್ತುಗಳ ವಾಗ್ಬಾಣ- ಛೂಬಾಣ ಬಿರುಸುಗಳ ಉಚಿತ ಮನರಂಜನೆ ಪಡೆಯಬೌದು’.

‘ಆದ್ರೆ ಕೆಬಿಸಿ ಸೂಪರ್ ಸ್ಟಾರ್ ಬಿಗ್ ಬಿ, ಇನ್ಮೇಲೆ ಹೊಗೆಸೊಪ್ಪಿನ ಪಾನ್ ಮಸಾಲಾಗೆ ಜಾಹೀರಾತು ಕೊಡೋಲ್ಲಾಂತ ಘೋಷಿಸಿದಾರಲ್ರೀ!’

‘ಅವ್ರಿಗೆ ಹ್ಯಾಟ್ಸಾಫ್’ ಎಂದು ಹೈಫೈ
ಚಪ್ಪಾಳೆ ತಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.