ADVERTISEMENT

ಚುರುಮುರಿ: ಚಾಟುದೋಷ

ಲಿಂಗರಾಜು ಡಿ.ಎಸ್
Published 21 ನವೆಂಬರ್ 2022, 19:30 IST
Last Updated 21 ನವೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ವೋಟ್ ಅಂದ್ರೇನು ಹೇಳ್ಲಾ?’ ಅಂತ ತುರೇಮಣೆ ಕೇಳಿದ್ರು.

‘ಐದೊರ್ಸಕ್ಕೊಂದು ಸಾರಿ ನಮ್ಮ ಪ್ರತಿನಿಧಿಗಳನ್ನ ಆಯ್ಕೆ ಮಾಡೋ ಪ್ರಜಾಪ್ರಭುತ್ವದ ತೀರು ಅಲ್ಲುವರಾ?’ ಅಂದೆ ನಗ್ತಾ.

‘ತಪ್ಪು! ದೇಶದ ಸ್ವತಂತ್ರ ವೋಟರು ತನ್ನ ದೇಶವನ್ನ ನಿರ್ನಾಮ ಮಾಡಲಿಕ್ಕೆ ತಾನೇ ಮುಠ್ಠಾಳನಾಗೋ ಒಂದು ವಿಧಾನವೇ ವೋಟು’ ಅಂದ್ರು. ನನಗೆ ತೆಲೆಕೆಡ್ತು.

ADVERTISEMENT

‘ಅದೆಂಗೆ?’ ಅಂದೆ.

‘ಇಲ್ಲಿ ಬಿ ಟೀಂ, ಸಿ ಟೀಂ, ಡಿ ಟೀಮ್ ಅಂತ ಮೂರು ಟೀಮುಗಳು ಅದಾವಲ್ಲ ನಮ್ಮ ಜಲ್ಮ ಜಾಲಾಡಕ್ಕೆ. ನೀನು ವೋಟು ಹಾಕಿದೋನು ಯಾವತ್ತನ್ನ ಗೆದ್ದವ್ನಾ? ಎಲ್ಲಾ ಟೀಮುಗಳಿಗೂ ಅವರದ್ದೇ ಆದ ಮತದಾರರ ದಂಡು, ಅದಕ್ಕೊಬ್ಬ ಸೋದರಮಾವ ಇದ್ದೇ ಇರತರೆ’ ಅಂದ್ರು ಸಿಟ್ಟಲ್ಲಿ.

‘ಈಗ ಟೀಮುಗಳು ಏನು ಮಾಡ್ತಾ ಅವೆ ಸಾ?’ ಅಂತ ವಿಚಾರಿಸಿದೆ.

‘ಬಿ-ಸಿ ಟೀಮುಗಳಿಗೆ ವರ್ಸೊಪ್ಪತ್ತೂ ವಿವಾದ ಹುಟ್ಟಾಕದು ಬುಟ್ರೆ ಇನ್ನೇನ್ಲಾ ಕ್ಯಾಮೆ. ಅದು ಬೇಜಾರಾದ್ರೆ ಟೀಮಿಗೆ ಕ್ಯಾಪ್ಟನ್ ನಾನೇ, ನಾನೇ ಅಂತ ಕಚ್ಚಾಡಿಕ್ಯಂಡು, ಬೋದಾಡ್ತಾ ಕಾಲಕಳೀತಾವೆ!’ ಅಂದ್ರು.

‘ಅಂದ್ರೆ ಅವರಿಗೆಲ್ಲಾ ಟ್ವಿಟ್ಟರು, ಚಾಟು ದೋಷ ಅದೆ ಅಂದಂಗಾಯ್ತು. ಡಿ ಟೀಮು ಹ್ಯಂಗೆ?’ ಅಂದೆ.

‘ಅವರುದ್ದು ಫ್ಯಾಮಿಲಿ ಟೀಂ ಕಲಾ! ಪ್ಲೇಯರ್ಸ್ ಲಿಸ್ಟ್ ಬಿಡುಗಡೆ ಮಾಡಕ್ಕೂ ಟೀಮಿನ ಜ್ಯೋತಿಷಿಗಳು, ರಾಜ್ಯ ಪಕ್ಷದ ರಾಷ್ಟ್ರ ನಾಯಕರು ಒಪ್ಪಿಗೆ ಕೊಡಬಕು!’ ಅಂತ ವಿವರಿಸಿದರು.

‘ಅದ್ಸರಿ ಈಗ ಟೀಮುಗಳು ವೋಟರುಗಳನ್ನ ಹ್ಯಂಗೆ ಗುರುತು ಹಿಡೀತವೆ? ಅದಕ್ಕೇನಾದರೂ ಕುರುಡುಪಟ್ಟಿ ರೆಡಿ ಮಾಡಿಕ್ಯಂಡವುರಾ?’ ಅಂತಂದೆ.

‍‘ವೋಟರ್ಸ್ ಪಟ್ಟಿ ಹಸ್ತವ್ಯಸ್ತವಾಗಿರದ್ರಿಂದ
ಅದುನ್ನ ಸ್ಕ್ರಾಪು ಮಾಡಿ ಕುಲುಮೆಗಾಕಿ ಹೊಸದಾಗಿ ಅದೃಶ್ಯ ಮತದ ದಾರ ತಯಾರಿಸೋ ಹುನ್ನಾರು ನಡೆದದಂತೆ!’ ಅಂದ್ರು ತುರೇಮಣೆ.

‘ಅಂದ್ರೆ ಇದು ಬೂತುಚೇಷ್ಟೆಯ ಮೊದಲನೇ ಹಂತ ಅಂದಂಗಾಯ್ತು! ಇನ್ನೇನು ಕಾದದೋ ದೇಸಕ್ಕೆ!’ ನನಗೆ ಚಿಂತೆ ಶುರುವಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.