‘ಮಂಜಮ್ಮ ನೀನು ಚಾ ಮಾಡ್ತೀಯಲ್ಲ,
ಚಾ ಪುಡಿ ಒರಿಜಿನಲ್ಲಾ?’ ಗುಡ್ಡೆ ಕೇಳಿದ.
‘ನನ್ ಚಾ ಪುಡಿ ಯಾವಾಗ್ಲೂ ಬ್ರ್ಯಾಂಡೆಡ್ಡು, ನಾನು ಲೂಸ್ ತರಲ್ಲ’ ಮಂಜಮ್ಮ ಮಸಿ ಬಟ್ಟೆ ಕೊಡವಿ ಹೇಳಿದಳು.
‘ಅಲ್ಲ, ಈಗ ಒರಿಜಿನಲ್ ಎಲ್ಲದಾವೆ? ಎಣ್ಣೆ, ತುಪ್ಪ, ಬೇಕರಿ ತಿಂಡಿ ಎಲ್ಲ ಕಲಬೆರಕೆ ಅಂತ ರಿಪೋರ್ಟೇ ಬಂದೇತಲ್ಲ. ಚಾ ಪುಡಿಗೆ ಮರದ ಹೊಟ್ಟು, ಸಾಸಿವೆಗೆ ರಾಗಿ, ಹಾಲಿಗೆ ನೀರು, ಅದ್ಯಾಕೆ ಔಷಧಗಳೂ ಕಲಬೆರಕೆಯಂತೆ ನೋಡು’ ದುಬ್ಬೀರ ತೆಲಿ ಕೊಡವಿದ.
‘ಹಾಲಲ್ಲ, ಈಗ ನೀರೂ ಕಲಬೆರಕೆ ಅಂತೆ, ಬಾಟ್ಲಿ ನೀರು ಕುಡೀಬಾರದಂತೆ, ಪೇಪರ್ ನೋಡಿಲ್ವಾ?’ ತೆಪರೇಸಿ ನಕ್ಕ.
‘ಮಜಾ ಗೊತ್ತಾ? ಈ ಕಲಬೆರಕೆ ತಿಂಡಿಗಳೇ ಬಾಳ ಟೇಸ್ಟು. ದಾವಣಗೆರೆ ಬೆಣ್ಣೆ ದೋಸೆ ಗೊತ್ತಲ್ಲ, ಬೆಣ್ಣೆಗೆ ಏನೇನೋ ಮಿಕ್ಸ್ ಮಾಡ್ತಾರೆ ಅಂತ ಪೊಲೀಸ್ರು ಕೇಸಾಕಿದ್ರಂತೆ. ಸ್ವಲ್ಪ ದಿನ ಹೋಟ್ಲುನೋರು ಹಳ್ಳಿಯಿಂದ ಒರಿಜಿನಲ್ ಬೆಣ್ಣೆ ತಂದು ದೋಸೆ ಮಾಡಿದ್ರೆ ಜನ ‘ಯಾಕೋ ಟೇಸ್ಟ್ ಕೆಡಿಸಿಬಿಟ್ಟಿದ್ದೀರಿ ಅಂದ್ರಂತೆ’.
‘ಆಮೇಲೆ?’
‘ಮತ್ತದೇ ಕಲಬೆರಕೆ ಬೆಣ್ಣೆ ಹಾಕಿ ದೋಸೆ ಕೊಟ್ಟಾಗ ಜನ ‘ಇದಪ್ಪಾ ಟೇಸ್ಟು’ ಅಂದ್ರಂತೆ!’ ಗುಡ್ಡೆ ನಕ್ಕ.
‘ಹೌದಾ? ಅದಿರ್‍ಲಿ, ಈ ಬೆರಕೆ, ಕಲಬೆರಕೆ ಎರಡೂ ಒಂದೇನಾ?’ ಕೊಟ್ರೇಶಿ ಕೊಕ್ಕೆ.
‘ಒಂದೇ ಅಲ್ಲ... ಈಗ ಈ ತೆಪರ ಬಾಳ ಬೆರಕಿ ಅದಾನೆ ಅಂದ್ರೆ ಅರ್ಥ ಬೇರೆ ಆಕ್ಕತಿ’.
‘ಹಂಗಲ್ಲ, ಬೆರಕೆ ಅಂದ್ರೆ ಮಿಕ್ಸ್ ಮಾಡೋದು, ಕಲಬೆರಕೆ ಅಂದ್ರೆ ಕೆಟ್ಟದ್ದನ್ನ ಮಿಕ್ಸ್ ಮಾಡೋದು’ ದುಬ್ಬೀರ ತನ್ನ ಪಾಂಡಿತ್ಯ ಪ್ರದರ್ಶನ ಮಾಡಿದ.
‘ಎರಡೂ ಒಂಥರಾ ಹಂಗೇ ಬಿಡ್ರಪ್ಪ, ಈಗ ಈ ರಾಜಕಾರಣ ಅನ್ನೋದು ಬೆರಕೆನೋ ಕಲಬೆರಕೆನೋ?’ ಮಂಜಮ್ಮ
ಕೇಳಿದಳು.
‘ಎರಡೂ ಅಲ್ಲ, ಅದು ರಾಡಿ’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.