ADVERTISEMENT

ಚುರುಮುರಿ: ಹಣಾಹಾರದ ಹಕ್ಕು!

ಚಂದ್ರಕಾಂತ ವಡ್ಡು
Published 11 ಮಾರ್ಚ್ 2022, 19:15 IST
Last Updated 11 ಮಾರ್ಚ್ 2022, 19:15 IST
Churumuri==12-03-2022
Churumuri==12-03-2022   

ಸದನದ ಚರ್ಚೆ ತಿನ್ನುವ ವಿಷಯ ಕುರಿತಾಗಿದ್ದರೆ ಅದಕ್ಕೆ ವಿಶೇಷ ರುಚಿ. ವಾದಕ್ಕೂ ಸ್ವಾದಕ್ಕೂ ಸಮಾನವಾಗಿ ಒದಗಿಬರುವ ನಾಲಗೆಗೆ ಭರ್ಜರಿ ಉಮೇದು. ಕೆಲವು ಬಾಯಿಗಳು ಚಪ್ಪರಿಸಿದರೆ, ಉಳಿದವು ಬಾವಿಗಿಳಿದು ಅಬ್ಬರಿಸುತ್ತವೆ. ಸದಸ್ಯರೊಬ್ಬರು, ‘ರಾಜಕಾರಣಿಗಳು ಹಣ ತಿನ್ನುವುದನ್ನು ನಿಲ್ಲಿಸಬೇಕು’ ಎಂದು ಸದನದಲ್ಲೇ ಕರೆ ಕೊಟ್ಟರೆ ಏನಾಗಬೇಡ?

ಹಣ ತಿನ್ನುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ನಾಲಗೆಯಲ್ಲಿ ನೀರೂರಿಸಿಕೊಂಡ, ಹೊಟ್ಟೆ ನೀವಿಕೊಂಡ ಸದಸ್ಯರ ನಿಖರ ಸಂಖ್ಯೆ ಪತ್ತೆ ಹಚ್ಚುವುದು ಕಷ್ಟ. ಬಹುಪಾಲು ಸದಸ್ಯರ ಬಾಯಿಗಳು ಮಾತಾಡಿ ಮಾತಾಡಿ ಒಣಗಿ, ಇನ್ನೇನು ಮಾತು ಹೊರಡದು ಎಂದೆನಿಸಿದಾಗ ಸದನಕ್ಕೆ ಊಟದ ವಿರಾಮ ಘೋಷಿಸಲಾಯಿತು.

ಊಟದ ಮೇಜಿನ ಸುತ್ತ ಕುಳಿತ ಸಮಾನ ಅಭಿರುಚಿಯ ಸದಸ್ಯರಿಗೆ ಅಂದು ಅದ್ಯಾಕೋ ತಿನ್ನುವ ಆಹಾರ ಸಪ್ಪೆ ಅನ್ನಿಸತೊಡಗಿತ್ತು. ಕೋವಿಡ್ ಕಳೆದರೂ ರುಚಿ ಮರಳದ ಪ್ರಸಂಗ. ತಟ್ಟೆ ಮುಂದೆ ಕೈಕಟ್ಟಿ ಕುಳಿತವರ ಬಗ್ಗೆ ಮರುಕ ಉಂಟಾಗಿ, ‘ಬೇರೇನು ಬೇಕಿತ್ತು ಸಾರ್…?’ ಎಂದು ಕೇಳಿದ ಮಾಣಿ. ಗಿರಾಕಿ, ‘ಮೂರು ಪ್ಲೇಟು ಹಣ’ ಎಂದು ಬಾಯಿಗೆ ಬಂದ ಆರ್ಡರ್ ನುಂಗಿಕೊಳ್ಳಬೇಕಾಯಿತು. ಹಣಾಹಾರದ ನೆನಪೇ ಇಷ್ಟೊಂದು ಪ್ರಭಾವಶಾಲಿಯಾಗಿ ಇರಬೇಕಾದರೆ ಅದರ ಸೇವನೆ ಇನ್ನೆಷ್ಟು ಚೇತೋಹಾರಿ ಆಗಿರಬಹುದು ಅನ್ನುವುದು ಎಲ್ಲರ ನಾಲಗೆಗೆ ನಿಲುಕುವ ವಿಷಯವಲ್ಲ.

ADVERTISEMENT

ಹಸಿದು ಕುಳಿತವರ ಫಜೀತಿ ಕಂಡ ತಿಂಗಳೇಶನ ತಲೆಯನ್ನು ಹಲವು ಪ್ರಶ್ನೆಗಳು ತಿನ್ನತೊಡಗಿದವು: ‘ರಾಜಕಾರಣಿಗಳು ಹಣ ತಿನ್ನುವುದನ್ನು ನಿಲ್ಲಿಸಿದರೆ ಅವರಿಗೆ ವಿಟಮಿನ್ ಎಂ ಕೊರತೆ ಕಾಡದೇ?’

‘ವಿಧಾನಸೌಧದ ಒಂದು ಮಹಡಿಯನ್ನು ಶುದ್ಧ ಹಣಾಹಾರದ ಹೋಟೆಲ್ಲಿಗೆ ಮೀಸಲಿಡಬಾರದೇಕೆ?’

‘ಆಹಾರ ಅವರವರ ಆಯ್ಕೆ, ಪದ್ಧತಿ ಮತ್ತು ಹಕ್ಕು ಎಂಬುದನ್ನು ಮಾನ್ಯ ಮಾಡಬೇಕಲ್ಲವೇ?’

‘ಹಣಾಹಾರದ ಹಕ್ಕಿಗೆ ಚ್ಯುತಿ ತರುವ ತನಿಖಾ ಸಂಸ್ಥೆಗಳು ಏಕೆ ಬೇಕು?’

‘ರಾಜಕಾರಣಿಗಳು ಹಣ ತಿನ್ನುವುದನ್ನು ನಿಲ್ಲಿಸಿದರೆ ಮತದಾರರ ಹಸಿವು ನೀಗಿಸುವುದು ಹೇಗೆ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.