ADVERTISEMENT

ಚುರುಮುರಿ: ಕುರ್ಚಿ ಕಾಳಗ

ಎಸ್.ಬಿ.ರಂಗನಾಥ್
Published 21 ಜನವರಿ 2021, 1:38 IST
Last Updated 21 ಜನವರಿ 2021, 1:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಪಂಚಾಯ್ತಿ ಎಲೆಕ್ಷನ್ನಲ್ಲಿ ಗೆದ್ಮೇಲೆ ದರ್ಶನಾನೇ ಇಲ್ವಲ್ಲಯ್ಯ, ಎಲ್ಲಿಗೆ ಹೋಗಿತ್ತೋ ಸವಾರಿ?’ ಚಡ್ಡಿ ದೋಸ್ತನನ್ನ ಕೇಳಿದೆ.

‘ಗೆದ್ದ ನಮ್ಮ ಪಕ್ಷದೋರ್ನೆಲ್ಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕರ್ಕೊಂಡು ಹೋಗಿ ಆಣೆಪ್ರಮಾಣ ಮಾಡಿಸ್ಕೊಂಡ್ರಪ್ಪಾ. ಇಬ್ರೂ ಸೇರಿ ವ್ಯವಸ್ಥೇನ ಚೆನ್ನಾಗಿ ಮಾಡಿದ್ರು’ ಎಂದ.

‘ಇಬ್ರೂಂದ್ರೆ?’

ADVERTISEMENT

‘ಈಗ ಪಂಚಾಯಿತಿ ಅಧ್ಯಕ್ಷನಾಗೋನು, ಮತ್ತೆ ಮುಂದೆ ಜಿಲ್ಲಾ ಪಂಚಾಯಿತಿ ಎಲೆಕ್ಷನ್ನಿಗೆ ನಿಲ್ಲೋನು’.

‘ಡಬಲ್ ಧಮಾಕಾ ಅನ್ನು!’

‘ಹಾಗಲ್ವೋ, ಎಲೆಕ್ಷನ್ನಲ್ಲಿ ಹತ್ತತ್ರ ಹತ್ತು ಕೈಬಿಟ್ಟವಯ್ಯಾ. ಅದನ್ನು ಭರ್ತಿ ಮಾಡಿಕೊಳ್ಳಬೇಕಲ್ಲಪ್ಪಾ. ಎಲೆಕ್ಷನ್ ಟೈಮಲ್ಲಿ ಬರೆದುಕೊಟ್ಟ ಹೊಲಾನ ಬಿಡಿಸಿಕೊಳ್ದಿದ್ರೆ ಹೆಂಡ್ತಿಮಕ್ಕಳು ಮನೆಯಿಂದ ಹೊರಹಾಕ್ತಾರೆ. ನಂಗೆ ಈಗೊಂದು ಸಮಸ್ಯೆ’.

‘ಡೊನಾಲ್ಡಣ್ಣ ಟ್ರಂಪ್‌ಗೆ ಬಂದಿರುವಂಥದ್ದೋ ಗವಿ ಗಂಗಾಧರ ಸ್ವಾಮಿಗೆ ಸೂರ್ಯದರ್ಶನ ಆಗದಿದ್ದಂಥದ್ದೋ?’

‘ಅದ್ಯಾವ್ದೂ ಅಲ್ಲ. ಎರಡು ಪಕ್ಷದೋರೂ ಸಮ ಇದೀವಿ. ಎದುರು ಪಕ್ಷದೋರು ತಮ್ಮ ಕಡೆ ಬಂದ್ರೆ ನನ್ನ ಪಂಚಾಯಿತಿ ಚೇರ್ಮನ್ ಮಾಡ್ತೀವೀಂತಿದಾರೆ. ನಮ್ಮೋರಂತಾರೆ, ಹಂಗ್ಮಾಡಿದ್ರೆ ಕಿಡ್ನಾಪ್ ಆಗ್ತೀಯಾಂತ. ಏನ್ ಮಾಡೋಕೂ ತೋಚ್ತಿಲ್ಲ’.

‘ಇದು ನಮ್ಮ ಕರುನಾಡ ರಾಜಕೀಯದ ಮಿನಿ ರೂಪ ಕಣಯ್ಯ. (ಏ)ಕಾಂಗಿ, ಕಮಲವ್ವ, ರೈತ ಮಹಿಳೆ ಮಕ್ಕಳು ಮಾಡ್ತಿರೋದು ಇದನ್ನೇ ತಾನೇ? ಅವ್ರ ಕರಿಬಂಟನ ಕುರ್ಚಿ ಕಾಳಗ ನಿಂಗಿನ್ನೂ ಅರ್ಥವಾಗಿಲ್ಲ. ಹೋಗಿ, ನಿನ್ನ ಸಮಸ್ಯೆಗೆ ಭಾಜಪ್ಪನೋರ ಸಲಹೆ ತಗೋ’.

‘ಅವ್ರಿಗೆಲ್ಲೈತಪ್ಪಾ ಪುರಸತ್ತು? ಸಂಕ್ರಾಂತಿಯಿಂದ ‘ಸಿಡಿ’ಮಿಡಿಗೊಂಡಿರೋ ಮನೆ ಮಕ್ಳನ್ನ ಸಂಭಾಳಿಸೋದ್ರಲ್ಲೇ ಹೈರಾಣಾಗಿದಾರಲ್ಲ’.

‘ಹಾಗಾದ್ರೆ ಪದ್ಮನಾಭನಗರ ಯಾತ್ರೆ ಮಾಡಿ ದೊಡ್ಡೋ(ಗೌಡ)ರನ್ನ ಕೇಳೋ. ಇಂಥ ಸಮಸ್ಯೆ ಬಗೆಹರಿಸೋದ್ರಲ್ಲಿ ಅವ್ರು ಎತ್ತಿದ ಕೈ’.

‘ಆಗ್ಲಯ್ಯ‌, ಧನ್ಯವಾದ. ನಮ್ಮ ಥ್ಯಾಂಕ್ಸ್ ಗಿವಿಂಗ್ ಪಾರ್ಟಿಗೆ ಬರಬೇಕು’ ಎಂದ ಗೆಳೆಯ ಕಣ್ಣು ಹೊಡೆದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.